ಅರಣ್ಯ ಇಲಾಖೆಯಲ್ಲಿ ಕೆಸಿಎಸ್ಆರ್ ನಿಯಮಗಳಿಗೆ ವಿರುದ್ಧವಾಗಿ ಅನರ್ಹ ಉಪ ವಲಯ ಅರಣ್ಯಾಧಿಕಾರಿಗಳಿಗೆ ವಲಯ ಅರಣ್ಯಾಧಿಕಾರಿ ಹುದ್ದೆಗೆ ಮುಂಬಡ್ತಿ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಬಡ್ತಿ ಪ್ರಕ್ರಿಯೆಯನ್ನು ತಕ್ಷಣ ಹಿಂಪಡೆದು ಸೂಕ್ತ ತನಿಖೆ ನಡೆಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಡಿ. ಸ್ಯಾಮ್ಸನ್ ಆಗ್ರಹಿಸಿದ್ದಾರೆ.
ಈ ಕುರಿತು ಶನಿವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಅನರ್ಹ ಉಪ ವಲಯ ಅರಣ್ಯಾಧಿಕಾರಿಗಳಿಗೆ ಮುಂಬಡ್ತಿ ನೀಡುತ್ತಿರುವ ಬಗ್ಗೆ ನೌಕರರ ಸಂಘ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ದೂರು ಸಲ್ಲಿಸಿವೆ. ಬಡ್ತಿ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ನಡೆದಿರುವ ಕುರಿತು ರಾಜ್ಯದ ಪ್ರಮುಖ ಟಿವಿ ಮಾಧ್ಯಮಗಳು ಹಾಗೂ ದಿನಪತ್ರಿಕೆಗಳಲ್ಲಿ ವರದಿಯಾಗಿದ್ದರೂ ಇಲಾಖೆಯ ಮೇಲಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದು ಆತಂಕಕಾರಿ ಸಂಗತಿಯಾಗಿದೆ ಎಂದು ತಿಳಿಸಿದ್ದಾರೆ.
ದೋಷಪೂರಿತ ಜೇಷ್ಠತಾ ಪಟ್ಟಿಯ ಕುರಿತು ಕ್ರಮ ಕೈಗೊಳ್ಳುವಂತೆ ಅರಣ್ಯ ಸಚಿವರು ಹಾಗೂ ಮುಖ್ಯ ಕಾರ್ಯದರ್ಶಿಯವರ ಟಿಪ್ಪಣಿಗಳ ಮೂಲಕ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಹಲವು ಬಾರಿ ನಿರ್ದೇಶನ ನೀಡಲಾಗಿದೆ. ಆದರೂ ಈವರೆಗೆ ದೂರುಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದಿರುವುದು ಮತ್ತು ಪಕ್ಷಪಾತದ ಧೋರಣೆ ಅನುಸರಿಸುತ್ತಿರುವುದು ಖಂಡನೀಯ ಎಂದು ಅವರು ಆರೋಪಿಸಿದ್ದಾರೆ.
ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು 2025ರ ನವೆಂಬರ್ 13ರಂದು ಪ್ರಕಟಿಸಿರುವ ರಾಜ್ಯಮಟ್ಟದ ಕ್ರೋಢೀಕೃತ ಜೇಷ್ಠತಾ ಪಟ್ಟಿಯಲ್ಲಿ ಹಲವು ಲೋಪಗಳಿದ್ದು, ನಿಯಮಗಳ ಉಲ್ಲಂಘನೆಯಾಗಿದೆ ಎಂದು ಸ್ಯಾಮ್ಸನ್ ದೂರಿದ್ದಾರೆ. ಈ ದೋಷಪೂರಿತ ಪಟ್ಟಿಯ ಆಧಾರದಲ್ಲಿ 188 ಉಪ ವಲಯ ಅರಣ್ಯಾಧಿಕಾರಿಗಳಿಗೆ 2025-26ನೇ ಸಾಲಿನ ಕಾರ್ಯನಿರ್ವಹಣಾ ವರದಿಯನ್ನೂ ಪರಿಶೀಲಿಸದೆ ತರಾತುರಿಯಲ್ಲಿ ವಲಯ ಅರಣ್ಯಾಧಿಕಾರಿ ಹುದ್ದೆಗೆ ಮುಂಬಡ್ತಿ ನೀಡಲಾಗಿದೆ. ಇದರಿಂದ ಬಡ್ತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿರುವ ಅನುಮಾನ ಮೂಡಿದೆ ಎಂದು ತಿಳಿಸಿದ್ದಾರೆ.
ಈ ಪ್ರಕ್ರಿಯೆಯಿಂದ ಅರ್ಹ ಉಪ ವಲಯ ಅರಣ್ಯಾಧಿಕಾರಿಗಳು ಹಾಗೂ ಮೋಜಣಿದಾರರಿಗೆ ಅನ್ಯಾಯವಾಗಿದೆ. ಈ ಬಗ್ಗೆ ವಿವಿಧ ಸಂಘ-ಸಂಸ್ಥೆಗಳು ಮತ್ತು ಕಾನೂನು ತಜ್ಞರು ಪತ್ರವ್ಯವಹಾರ ನಡೆಸಿದ್ದರೂ ಯಾವುದೇ ತನಿಖೆ ನಡೆಸದಿರುವುದು ವಿಷಾದನೀಯ ಎಂದು ಹೇಳಿದ್ದಾರೆ.
ಸಚಿವರು ಹಾಗೂ ಇಲಾಖೆಯ ಮೇಲಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ, ಕರ್ನಾಟಕ ನಾಗರಿಕ ಸೇವಾ ನಿಯಮ 32ರ ಅಡಿಯಲ್ಲಿ ನೀಡಿರುವ ಮುಂಬಡ್ತಿಯನ್ನು ರದ್ದುಗೊಳಿಸಬೇಕು. ದೋಷಪೂರಿತ ಜೇಷ್ಠತಾ ಪಟ್ಟಿಯಲ್ಲಿ ನಿಯಮ 6ನ್ನು ಅಳವಡಿಸಿ, ಪಟ್ಟಿಯಲ್ಲಿರುವ ಲೋಪಗಳನ್ನು ಸರಿಪಡಿಸುವವರೆಗೆ ಮುಂದಿನ ಬಡ್ತಿ ಪ್ರಕ್ರಿಯೆ ಕೈಗೊಳ್ಳಬಾರದು. ಬಡ್ತಿಗೆ ಸಂಬಂಧಿಸಿದ ಕಡತಗಳನ್ನು ಪರಿಶೀಲಿಸಿ, ಅಕ್ರಮಗಳ ಕುರಿತು ಸೂಕ್ತ ತನಿಖೆಗೆ ಆದೇಶಿಸಬೇಕು. ಇಲ್ಲವಾದಲ್ಲಿ ತೀವ್ರ ಸ್ವರೂಪದ ಪ್ರತಿಭಟನೆ ನಡೆಸಲಾಗುವುದು ಎಂದು ಡಿ. ಸ್ಯಾಮ್ಸನ್ ಎಚ್ಚರಿಕೆ ನೀಡಿದ್ದಾರೆ.



