ಶುಕ್ರವಾರ ಮಧ್ಯರಾತ್ರಿ ಸುರಿದ ಭಾರೀ ಮಳೆಯಿಂದ ಶಿರಸಿ ನಗರ ಹಾಗೂ ಸುತ್ತಮುತ್ತಲಿನ ಹಲವು ಪ್ರದೇಶಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಕೆಲವೇ ಗಂಟೆಗಳ ಕಾಲ ಸುರಿದ ಧಾರಾಕಾರ ಮಳೆಯಿಂದ ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿದ್ದು, ಹಲವು ಮನೆಗಳಿಗೆ ನೀರು ನುಗ್ಗಿ ನಿವಾಸಿಗಳು ಸಂಕಷ್ಟ ಎದುರಿಸುವಂತಾಗಿದೆ.
ರಸ್ತೆಗಳಲ್ಲಿ ನೀರು ನಿಂತ ಪರಿಣಾಮ ವಾಹನ ಸಂಚಾರಕ್ಕೂ ಅಡಚಣೆ ಉಂಟಾಗಿದೆ. ನಗರದ ಐತಿಹಾಸಿಕ ಕೋಟೆಕೆರೆ ಭರ್ತಿಯಾಗಿ ಉಕ್ಕಿ ಹರಿದಿದ್ದು, ಹೆಚ್ಚುವರಿ ನೀರು ಸುತ್ತಮುತ್ತಲಿನ ಪ್ರದೇಶಗಳಿಗೆ ಹರಿದಿದೆ. ಕೆರೆಯ ಉಕ್ಕಿ ಹರಿಯುವ ದೃಶ್ಯವನ್ನು ವೀಕ್ಷಿಸಲು ಸಾರ್ವಜನಿಕರು ಆಗಮಿಸುತ್ತಿದ್ದರೂ, ಅನಗತ್ಯವಾಗಿ ನೀರಿನ ಸಮೀಪ ತೆರಳದಂತೆ ಸ್ಥಳೀಯ ಆಡಳಿತ ಎಚ್ಚರಿಕೆ ನೀಡಿದೆ.
ಶ್ರೀಧರ ನಗರ, ಸಮೃದ್ಧಿ ನಗರ ಸೇರಿದಂತೆ ಹಲವು ಬಡಾವಣೆಗಳಲ್ಲಿ ಮಳೆ ನೀರು ಮನೆಗಳ ಆವರಣ ಹಾಗೂ ಬಾಗಿಲಿನವರೆಗೆ ತಲುಪಿದೆ. ಮನೆಗಳಿಗೆ ನೀರು ನುಗ್ಗದಂತೆ ನಿವಾಸಿಗಳು ಮರಳು ಚೀಲಗಳನ್ನು ಅಳವಡಿಸಿ ಮುನ್ನೆಚ್ಚರಿಕೆ ವಹಿಸಿದ್ದು, ಕೆಲವರು ನೀರನ್ನು ಹೊರಹಾಕುವ ಕಾರ್ಯದಲ್ಲಿ ತೊಡಗಿರುವುದು ಕಂಡುಬಂದಿದೆ. ಅಯ್ಯಪ್ಪ ನಗರದ ಚೌಡೇಶ್ವರಿ ಕಾಲೋನಿಯ ಬಹುತೇಕ ರಸ್ತೆಗಳು ನೀರಿನಿಂದ ಆವೃತಗೊಂಡಿದ್ದು, ವಾಹನ ಹಾಗೂ ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟಾಗಿದೆ.
ಈ ಸುದ್ದಿ ಓದಿದ್ದೀರಾ? ಭಟ್ಕಳ | ದೋಣಿ ಮುಳುಗಿ ನಾಪತ್ತೆಯಾಗಿದ್ದ ಮೀನುಗಾರನ ಶವ ಮರುದಿನ ತೀರದಲ್ಲಿ ಪತ್ತೆ
ಮಕ್ಕಳು, ವೃದ್ಧರು ಮತ್ತು ಮಹಿಳೆಯರು ಓಡಾಡಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ನಿರಂತರ ಮಳೆಯಿಂದ ಎಸಳೆ ನವಗ್ರಾಮ ಪ್ರದೇಶದಲ್ಲಿಯೂ ನೀರು ನಿಂತಿದ್ದು, ಮನೆಗಳ ಸುತ್ತಮುತ್ತ ಜಲಾವೃತ ಪರಿಸ್ಥಿತಿ ಉಂಟಾಗಿದೆ. ಅಗತ್ಯ ವಸ್ತುಗಳ ಸಾಗಾಟಕ್ಕೂ ಅಡಚಣೆ ಎದುರಾಗಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.
ಮಳೆಯ ಪರಿಣಾಮ ಬಿದ್ರಳ್ಳಿ ಹೊಳೆಯ ನೀರಿನ ಮಟ್ಟವೂ ಏರಿಕೆಯಾಗಿದ್ದು, ಅಪಾಯದ ಮಟ್ಟದತ್ತ ಹರಿಯುತ್ತಿದೆ. ಹೊಳೆಯ ದಡದಲ್ಲಿರುವ ನಿವಾಸಿಗಳು ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಪ್ರಮುಖ ನದಿಗಳಾದ ಅಘನಾಶಿನಿ ಹಾಗೂ ಶಾಲ್ಮಲಾ ನದಿಗಳಲ್ಲಿಯೂ ನೀರಿನ ಹರಿವು ಹೆಚ್ಚಿದ್ದು, ನದಿಪಾತ್ರಗಳು ತುಂಬುವ ಹಂತ ತಲುಪಿವೆ. ಸುರಕ್ಷತೆಯ ದೃಷ್ಟಿಯಿಂದ ನದಿ ತೀರಗಳಿಗೆ ಅನಗತ್ಯವಾಗಿ ತೆರಳದಂತೆ ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ.
ಭಾರೀ ಮಳೆಯಿಂದ ಶ್ರೀರಾಮ ಕಾಲನಿ, ರಾಮನಬೈಲ್ ಹಾಗೂ ಉರ್ದು ಶಾಲೆ ಸಮೀಪ ಕಾಂಪೌಂಡ್ ಗೋಡೆ ಕುಸಿದಿರುವ ಘಟನೆ ವರದಿಯಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಬಿಕ್ನಳ್ಳಿ ಗ್ರಾಮದ ಸಾವಿತ್ರಿ ಗೌಡ ಅವರಿಗೆ ಸೇರಿದ ದನದ ಕೊಟ್ಟಿಗೆ ಗಾಳಿ-ಮಳೆಗೆ ಹಾನಿಗೊಳಗಾಗಿದ್ದು, ಸ್ಥಳೀಯರ ಸಹಾಯದಿಂದ ಪಶುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ನಗರದ ಹಲವು ಪ್ರಮುಖ ರಸ್ತೆಗಳಲ್ಲಿ ಮಳೆ ನೀರು ನಿಂತಿರುವುದರಿಂದ ವಾಹನಗಳು ನಿಧಾನಗತಿಯಲ್ಲಿ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಚರಂಡಿಗಳ ನೀರು ರಸ್ತೆಗೆ ಹರಿದ ಪರಿಣಾಮ ಬೆಳಗಿನ ವೇಳೆಯಲ್ಲಿ ಕೆಲಸಕ್ಕೆ ತೆರಳುತ್ತಿದ್ದ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ತೊಂದರೆ ಅನುಭವಿಸಿದರು.
ಶಿರಸಿ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯ ಹಲವೆಡೆ ಮುಂದಿನ 24 ಗಂಟೆಗಳಲ್ಲಿಯೂ ಮಳೆಯ ಅಬ್ಬರ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ತಗ್ಗು ಪ್ರದೇಶದ ನಿವಾಸಿಗಳು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.




