ಶಿರಸಿ: ಪ್ರೀತಿಸಿ ಕಾನೂನುಬದ್ಧವಾಗಿ ವಿವಾಹವಾದ ಅಂತರ್ಜಾತಿ ಜೋಡಿಗೆ ರಕ್ಷಣೆ ನೀಡಬೇಕಾದ ಪೊಲೀಸ್ ಸಿಬ್ಬಂದಿಯೊಬ್ಬರೇ ದೌರ್ಜನ್ಯ ಎಸಗಿರುವ ಘಟನೆ ಶಿರಸಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಈ ವಿಚಾರದಲ್ಲಿ ಭೀಮಘರ್ಜನೆ ಸಂಘಟನೆಯು ಮಧ್ಯಪ್ರವೇಶಿಸಿ ಕಾನೂನು ಹೋರಾಟ ನಡೆಸಿದ ಪರಿಣಾಮ, ನವಜೋಡಿಗಳು ಮತ್ತೆ ಒಂದಾಗಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯ ವಿವರ: ದಲಿತ ಸಮುದಾಯಕ್ಕೆ ಸೇರಿದ ಯುವಕ ಮತ್ತು ಬೇರೆ ಜಾತಿಗೆ ಸೇರಿದ ಯುವತಿ ಪರಸ್ಪರ ಪ್ರೀತಿಸಿ ಇತ್ತೀಚೆಗೆ ಕಾನೂನುಬದ್ಧವಾಗಿ ವಿವಾಹವಾಗಿದ್ದರು. ಈ ಕುರಿತು ಈಗಾಗಲೇ ಯಲ್ಲಾಪುರ ಮತ್ತು ಮುಂಡಗೋಡ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಿ ಅಗತ್ಯ ದಾಖಲೆಗಳನ್ನು ಒದಗಿಸಿದ್ದಾರೆ.
ಆದರೆ, ಯುವತಿಯ ಮನೆಯವರ ವಿರೋಧದ ಹಿನ್ನೆಲೆಯಲ್ಲಿ, ಶಿರಸಿ ಗ್ರಾಮಾಂತರ ಪೊಲೀಸ್ ಠಾಣೆಯ ಒಬ್ಬ ಸಿಬ್ಬಂದಿ ಯುವಕನ ಮನೆಗೆ ತೆರಳಿ ದರ್ಪ ಮೆರೆದಿದ್ದಾರೆ ಎಂಬ ಗಂಭೀರ ಆರೋಪವನ್ನು ಭೀಮ ಘರ್ಜನೆ ಸಂಘಟನೆ ಅವರು ಮಾಡಿದ್ದಾರೆ.
ಮದುವೆಯು ಕಾನೂನುಬದ್ಧವಾಗಿದ್ದರೂ ಸಹ, ಪೊಲೀಸ್ ಸಿಬ್ಬಂದಿ ಯುವಕನ ಮನೆಗೆ ಅಕ್ರಮವಾಗಿ ಪ್ರವೇಶಿಸಿ ವೀಡಿಯೋ ಚಿತ್ರೀಕರಣ ಮಾಡಿದ್ದಾರೆ ಎನ್ನಲಾಗಿದೆ. ಅಲ್ಲದೆ, ಮನೆಯವರ ಮೊಬೈಲ್ ಕಸಿದುಕೊಂಡು ಖಾಸಗಿತನಕ್ಕೆ ಧಕ್ಕೆ ತಂದಿದ್ದಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಸಂಘಟನೆಯು ದೂರಿದೆ.
ಈ ಸುದ್ದಿ ಓದಿದ್ದೀರಾ ? ಹೊನ್ನಾವರ | ಅಂಪೈರ್ ತೀರ್ಪಿಗೆ ಆಕ್ಷೇಪ: ಜಗಳ ಬಿಡಿಸಲು ಹೋದ ವೃದ್ಧ ರೈತನ ಮೇಲೆ ಬ್ಯಾಟ್‌ನಿಂದ ಹಲ್ಲೆ
“ಪ್ರೀತಿ ಮಾಡುವಷ್ಟು ಸೊಕ್ಕು ಬಂದಿದೆಯೇ?” ಎಂದು ಜಾತಿ ನಿಂದನೆ ಮಾಡಿ ಬೆದರಿಕೆ ಹಾಕಿದ್ದಾರೆಂದು ನೊಂದ ಯುವಕ ಅಳಲು ತೋಡಿಕೊಂಡಿದ್ದಾನೆ ಎಂದು ಸಂಘಟನೆ ಅವರು ತಿಳಿಸಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಭೀಮಘರ್ಜನೆ ಸಂಘಟನೆಯ ಪದಾಧಿಕಾರಿಗಳು, ನವಜೋಡಿಗಳಿಗೆ ಧೈರ್ಯ ತುಂಬುವ ಕೆಲಸ ಮಾಡಿ. ಸಂವಿಧಾನಬದ್ಧವಾಗಿ ಮದುವೆಯಾದ ಯುವಕ-ಯುವತಿಗೆ ರಕ್ಷಣೆ ನೀಡುವಂತೆ ಒತ್ತಾಯಿಸಿ ಹೋರಾಟ ನಡೆಸಿದ್ದಾರೆ.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ದೀಪನ್ ಎಂ. ಅವರು ನ್ಯಾಯಯುತವಾಗಿ ಸ್ಪಂದಿಸಿದ್ದು, ಸಂಘಟನೆಯ ಮನವಿಗೆ ಓಗೊಟ್ಟು ಯುವತಿಯನ್ನು ಪತಿಯ ಬಳಿ ಸೇರಿಸುವಲ್ಲಿ ಸಹಕರಿಸಿದ್ದಾರೆ ಎಂದು ಭೀಮ ಘರ್ಜನೆ ಸಂಘಟನೆ ಜಿಲ್ಲಾಧ್ಯಕ್ಷರಾದ ಅರ್ಜುನ ಮಿಂಟಿ ಅವರು ತಿಳಿಸಿದ್ದಾರೆ.
ಪೊಲೀಸ್ ಇಲಾಖೆಯಲ್ಲಿ ಕೆಲವೇ ಕೆಲವು ಸಿಬ್ಬಂದಿಗಳ ಇಂತಹ ವರ್ತನೆಯಿಂದ ಇಡೀ ಇಲಾಖೆಗೆ ಕಪ್ಪು ಚುಕ್ಕೆ ಬರುತ್ತದೆ. ಹಾಗಾಗಿ, ದೌರ್ಜನ್ಯ ಎಸಗಿದ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಭೀಮಘರ್ಜನೆ ಸಂಘಟನೆ ಆಗ್ರಹಿಸಿದೆ. ಪ್ರಸ್ತುತ ನವಜೋಡಿಗಳು ಸುರಕ್ಷಿತವಾಗಿದ್ದು, ಸಂಘಟನೆಯು ಅವರಿಗೆ ಎಲ್ಲಾ ರೀತಿಯ ಬೆಂಬಲವನ್ನು ನೀಡುವ ಭರವಸೆ ನೀಡಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸಮಯೋಚಿತ ನಿರ್ಧಾರಕ್ಕೆ ಸಂಘಟನೆಯು ಕೃತಜ್ಞತೆ ಸಲ್ಲಿಸಿದೆ.




