ಕೇಂದ್ರ ಗೃಹ ಮತ್ತು ನಗರ ವ್ಯವಹಾರಗಳ ಸಚಿವಾಲಯ ನೀಡುವ ವಾರ್ಷಿಕ ‘ಸ್ವಚ್ಛ ಸರ್ವೇಕ್ಷಣಾ 2025-26’ ಶ್ರೇಯಾಂಕದಲ್ಲಿ ಮಹಾರಾಷ್ಟ್ರದ ನವಿ ಮುಂಬೈ ದೇಶದಲ್ಲೇ ಅತ್ಯಂತ ಸ್ವಚ್ಛ ನಗರವಾಗಿ ಹೊರಹೊಮ್ಮಿದೆ. ಗುಜರಾತ್‌ನ ಸೂರತ್ ಮತ್ತು ಆಂಧ್ರಪ್ರದೇಶದ ವಿಜಯವಾಡ ನಗರಗಳು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನಗಳನ್ನು ಪಡೆದುಕೊಂಡಿವೆ. ಕರ್ನಾಟಕದ ಬೆಂಗಳೂರು ಮತ್ತು ಮೈಸೂರು ನಗರಗಳು ಸಹ ಸ್ವಚ್ಛತಾ ಶ್ರೇಯಾಂಕದ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ.
ಕಳೆದ ಎಂಟು ವರ್ಷಗಳಿಂದ ದೇಶದ ಅತ್ಯಂತ ಸ್ವಚ್ಛ ನಗರವಾಗಿ ಅಗ್ರಸ್ಥಾನದಲ್ಲಿದ್ದ ಮಧ್ಯಪ್ರದೇಶದ ಇಂದೋರ್, ಈ ಬಾರಿಯ ಅತ್ಯುತ್ತಮ ನಗರಗಳ ಪಟ್ಟಿಯಲ್ಲಿ ಕಾಣಿಸಿಕೊಳ್ಳದಿರುವುದು ಸಾರ್ವಜನಿಕ ಮತ್ತು ಆಡಳಿತ ವಲಯದಲ್ಲಿ ಗಮನಾರ್ಹ ಚರ್ಚೆಗೆ ಗ್ರಾಸವಾಗಿದೆ.
ನವದೆಹಲಿಯ ವಿಜ್ಞಾನ ಭವನದಲ್ಲಿ ಬುಧವಾರ ಆಯೋಜಿಸಲಾಗಿದ್ದ ವಿಶೇಷ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಈ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಈ ಬಾರಿಯ ಸಮೀಕ್ಷೆಯನ್ನು ‘ಸ್ವಚ್ಛತಾ ಕೀ ನಯೀ ಪಹಲ್- ಬಢಾಯೇಂ ಹಾತ್, ಕರೇಂ ಸಫಾಯಿ ಸಾಥ್’ ಎಂಬ ಧೇಯವಾಕ್ಯದೊಂದಿಗೆ ನಡೆಸಲಾಗಿತ್ತು.
ವರ್ಗಾವಾರು ಸ್ವಚ್ಛ ನಗರಗಳ ಪಟ್ಟಿ
10 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇರುವ ನಗರಗಳು:
ಗ್ರೇಟರ್ ವಿಶಾಖಪಟ್ಟಣಂ
ಜಬಲ್ಪುರ್
ಲಕ್ನೋ
3 ರಿಂದ 10 ಲಕ್ಷ ಜನಸಂಖ್ಯೆ ಇರುವ ನಗರಗಳು:
ಉಜ್ಜಯಿನಿ
ಚಂಡೀಗಢ
ಗುಂಟೂರು
ಸ್ವಚ್ಛ ನದಿ ತೀರದ ನಗರಗಳಲ್ಲಿ ಮಧ್ಯಪ್ರದೇಶದ ರೇವಾ ಪ್ರಥಮ ಸ್ಥಾನ ಪಡೆದರೆ, ಛತ್ತೀಸ್‌ಗಢದ ಬೈಲಾಸ್‌ಪುರ ಮತ್ತು ಉತ್ತರ ಪ್ರದೇಶದ ವಾರಣಾಸಿ ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನಗಳನ್ನು ಗಳಿಸಿವೆ.
ಸ್ವಚ್ಛ ಕರಾವಳಿ ನಗರಗಳಲ್ಲಿ ಒಡಿಶಾದ ಪುರಿ ನಗರ ಪ್ರಥಮ ಸ್ಥಾನ ಗಳಿಸಿದ್ದು, ಕೇರಳದ ಅಲಪ್ಪುಳ ಮತ್ತು ಮಹಾರಾಷ್ಟ್ರದ ರತ್ನಗಿರಿ ಮುಂದಿನ ಸ್ಥಾನಗಳಲ್ಲಿವೆ.
ಹಿಮಾಲಯನ್ ನಗರಗಳ ವಿಭಾಗದಲ್ಲಿ ಉತ್ತರಾಖಂಡ್‌ನ ರುದ್ರಪುರ ಪ್ರಥಮ ಸ್ಥಾನ ಪಡೆದರೆ, ಜಮ್ಮು ಎರಡನೇ ಸ್ಥಾನದಲ್ಲಿದೆ.
2016ರಲ್ಲಿ ಕೇವಲ 73 ನಗರಗಳೊಂದಿಗೆ ಆರಂಭಗೊಂಡ ಸ್ವಚ್ಛ ಸರ್ವೇಕ್ಷಣಾ ಅಭಿಯಾನವು 10ನೇ ಆವೃತ್ತಿಗೆ ತಲುಪಿದ್ದು, ಈ ಬಾರಿ ದೇಶಾದ್ಯಂತ 4,751ಕ್ಕೂ ಹೆಚ್ಚು ನಗರಗಳನ್ನು ಮೌಲ್ಯಮಾಪನಕ್ಕೆ ಒಳಪಡಿಸಲಾಗಿತ್ತು. ನಗರಗಳ ನೈರ್ಮಲ್ಯ, ತ್ಯಾಜ್ಯ ನಿರ್ವಹಣೆ, ಸಾರ್ವಜನಿಕ ಶೌಚಾಲಯಗಳ ಬಳಕೆ, ಪ್ರವಾಸಿ ತಾಣಗಳು ಮತ್ತು ಪಾರಂಪರಿಕ ಸ್ಥಳಗಳ ಸ್ವಚ್ಛತೆ, ಶಾಲಾ ಹಂತದಲ್ಲಿ ಜಾಗೃತಿ ಹಾಗೂ ಸಾರ್ವಜನಿಕರ ನೇರ ಅಭಿಪ್ರಾಯಗಳನ್ನು ಈ ಬಾರಿಯ ಶ್ರೇಯಾಂಕ ಪಟ್ಟಿಯಲ್ಲಿ ಪ್ರಮುಖವಾಗಿ ಪರಿಗಣಿಸಲಾಗಿದೆ.




