ಹೈದರಾಬಾದ್‌ನಲ್ಲಿ ನಡೆಯಲಿರುವ ಪ್ರತಿಷ್ಠಿತ ‘ಭಾರತ್ ಶೃಂಗಸಭೆ’ಯಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಆಗಮಿಸಬೇಕಿದ್ದ ನಾರ್ವೆಯ ಪತ್ರಕರ್ತೆ ಹೆಲ್ಲೆ ಲಿಂಗ್ ಸ್ವೆಂಡ್ಸನ್ ಅವರ ವೀಸಾವನ್ನು ಕೊನೆಯ ಕ್ಷಣದಲ್ಲಿ ರದ್ದುಗೊಳಿಸಲಾಗಿದ್ದು, ಈ ಘಟನೆ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಓಸ್ಲೋ ಮೂಲದ ‘ಡಾಗ್ಸವಿಸೆನ್’ ದಿನಪತ್ರಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೆಲ್ಲೆ ಲಿಂಗ್ ಅವರು ಬುಧವಾರ (ನವೆಂಬರ್ 11) ಸಾಮಾಜಿಕ ಜಾಲತಾಣ ‘ಎಕ್ಸ್’ (X) ಮೂಲಕ ವೀಸಾ ರದ್ದಾಗಿರುವ ಕುರಿತು ವಿಡಿಯೋ ಸಂದೇಶ ಹಂಚಿಕೊಂಡಿದ್ದಾರೆ. “ನನಗೆ ಈಗಾಗಲೇ ವೀಸಾ ಮತ್ತು ರಾಜಕೀಯ ಅನುಮತಿ ದೊರೆತಿತ್ತು. ಆದರೆ ವಿಮಾನ ನಿಲ್ದಾಣಕ್ಕೆ ಹೊರಡಲು ಕೇವಲ 10 ನಿಮಿಷಗಳಿರುವಾಗ ನಾರ್ವೆಯಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಪ್ರಯಾಣಿಸದಂತೆ ಸೂಚಿಸಿತು. ಗೃಹ ಸಚಿವಾಲಯದ ಮೇರೆಗೆ ನನ್ನ ವೀಸಾ ರದ್ದುಗೊಳಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ನವೆಂಬರ್ 14ರಂದು ಹೈದರಾಬಾದ್‌ನಲ್ಲಿ ನಡೆಯಲಿರುವ ಶೃಂಗಸಭೆಯ ಎರಡನೇ ದಿನದಂದು ‘ಮಾಧ್ಯಮದ ಭವಿಷ್ಯ ಮತ್ತು ಪತ್ರಿಕಾ ಸ್ವಾತಂತ್ರ್ಯ’ ಕುರಿತ ಗೋಷ್ಠಿಯಲ್ಲಿ ಹೆಲ್ಲೆ ಲಿಂಗ್ ಭಾಷಣಕಾರರಾಗಿ ಭಾಗವಹಿಸಬೇಕಿತ್ತು. ಪ್ರೆಸ್ ಕ್ಲಬ್ ಆಫ್ ಇಂಡಿಯಾ ಅಧ್ಯಕ್ಷೆ ಸಂಗೀತಾ ಬರುವಾ ಪಿಶಾರೋಟಿ ಸೇರಿದಂತೆ ಹಲವು ಪ್ರಮುಖರು ಈ ಗೋಷ್ಠಿಯಲ್ಲಿ ಪಾಲ್ಗೊಳ್ಳಲಿದ್ದು, ಕಾಂಗ್ರೆಸ್ ನಾಯಕ ಪವನ್ ಖೇರಾ ಇದನ್ನು ನಿರ್ವಹಿಸಲಿದ್ದಾರೆ.
“ನನ್ನ ಗೋಷ್ಠಿಗೆ ಇನ್ನೂ 48 ಗಂಟೆಗಳ ಕಾಲಾವಕಾಶವಿದೆ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಈಗ ಏನು ನಿರ್ಧಾರ ತೆಗೆದುಕೊಳ್ಳಲಿದೆ? ಚೆಂಡು ಈಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಅಂಗಳದಲ್ಲಿದೆ” ಎಂದು ಹೆಲ್ಲೆ ಲಿಂಗ್ ವಿಡಿಯೋದಲ್ಲಿ ಹೇಳಿದ್ದಾರೆ. ಅಲ್ಲದೆ, ವೀಸಾ ಪ್ರಕ್ರಿಯೆಯಲ್ಲಿ ಸಹಕರಿಸಿದ ಓಸ್ಲೋದ ಭಾರತೀಯ ರಾಯಭಾರ ಕಚೇರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಅವರು, ಗೃಹ ಸಚಿವಾಲಯದ ನಿರ್ಧಾರವೇ ಇದಕ್ಕೆ ಕಾರಣ ಎಂದು ದೂರಿದ್ದಾರೆ.
ಇನ್ನು ವೀಸಾ ರದ್ದತಿಗೆ ಯಾವುದೇ ಅಧಿಕೃತ ಕಾರಣ ನೀಡದಿದ್ದರೂ, ಇದು ರಾಜಕೀಯ ಪ್ರೇರಿತ ನಿರ್ಧಾರ ಎಂದು ಹೆಲ್ಲೆ ಲಿಂಗ್ ಶಂಕಿಸಿದ್ದಾರೆ. ಇದಕ್ಕೆ ಅವರು ಪ್ರಮುಖವಾಗಿ ಮೂರು ಕಾರಣಗಳನ್ನು ಉಲ್ಲೇಖಿಸಿದ್ದಾರೆ.
ಕಳೆದ ಮೇ 2026ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಾರ್ವೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ, ಜಂಟಿ ಸುದ್ದಿಗೋಷ್ಠಿ ಮುಗಿಸಿ ಹೊರಡುತ್ತಿದ್ದ ಮೋದಿಯವರನ್ನು ಉದ್ದೇಶಿಸಿ, “ವಿಶ್ವದ ಅತ್ಯಂತ ಮುಕ್ತ ಪತ್ರಿಕಾ ವ್ಯವಸ್ಥೆಯಿಂದ ಕೆಲವು ಪ್ರಶ್ನೆಗಳನ್ನು ಏಕೆ ಸ್ವೀಕರಿಸುವುದಿಲ್ಲ?” ಎಂದು ಹೆಲ್ಲೆ ಲಿಂಗ್ ಪ್ರಶ್ನಿಸಿದ್ದರು. ಆದರೆ ಮೋದಿ ಉತ್ತರಿಸದೆ ನಿರ್ಗಮಿಸಿದ್ದರು.
ನರೇಂದ್ರ ಮೋದಿ ಅವರ ಆಡಳಿತ ವೈಖರಿ ಹಾಗೂ ಉದ್ಯಮಿಗಳಾದ ಗೌತಮ್ ಅದಾನಿ ಮತ್ತು ಮುಕೇಶ್ ಅಂಬಾನಿ ಕುರಿತು ತಾವು ಬರೆದಿದ್ದ ವಿಮರ್ಶಾತ್ಮಕ ಲೇಖನಗಳು ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿರಬಹುದು ಎಂದು ಅವರು ಭಾವಿಸಿದ್ದಾರೆ.
‘ಕಾಕ್ರೋಚ್ ಜನತಾ ಪಾರ್ಟಿ’ಯ ರಾಜಕೀಯ ಅಭಿಯಾನದ ಕುರಿತು ಬರೆದಿದ್ದ ಸಕಾರಾತ್ಮಕ ಲೇಖನಗಳು ಹಾಗೂ ಆ ಆಂದೋಲನದ ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರ ಸಂದರ್ಶನವೂ ಈ ನಿರ್ಬಂಧಕ್ಕೆ ಕಾರಣವಾಗಿರಬಹುದು ಎಂದು ಹೆಲ್ಲೆ ಅನುಮಾನ ವ್ಯಕ್ತಪಡಿಸಿದ್ದಾರೆ.
I got a visa to India and was supposed to leave this morning to attend the Bharat Summit in Hyderabad. I had been invited as a panelist and speaker on the future of media and press freedom.
But «orders from above» in the Ministry of Home Affairs have cancelled my visa.
Here… pic.twitter.com/ihAuZdUCmc— Helle Lyng (@HelleLyngSvends) November 11, 2026
ಕಳೆದ ಮೇ 18ರಂದು ಓಸ್ಲೋದಲ್ಲಿ ನಡೆದ ಘಟನೆಯು ಭಾರತದ ರಾಜಕೀಯ ವಲಯದಲ್ಲಿ ದೊಡ್ಡ ಬಿರುಗಾಳಿ ಎಬ್ಬಿಸಿತ್ತು. ಪತ್ರಿಕಾಗೋಷ್ಠಿಗಳನ್ನು ಎದುರಿಸದ ಪ್ರಧಾನಿ ಮೋದಿ ಅವರ ನಡೆಯನ್ನು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದರೆ, ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಅವರು ಪತ್ರಕರ್ತೆಯ ನಡೆಯನ್ನು “ಅಸಂಬದ್ಧ” ಎಂದು ಜರಿದಿದ್ದರು. ಅದೇ ದಿನ ಸಂಜೆ ಭಾರತೀಯ ರಾಯಭಾರ ಕಚೇರಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲೂ ಹೆಲ್ಲೆ ಲಿಂಗ್ ಅವರು ಭಾರತದಲ್ಲಿನ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ ಖಾರವಾಗಿ ಪ್ರಶ್ನಿಸಿದ್ದರು. ಆಗ ವಿದೇಶಾಂಗ ಸಚಿವಾಲಯದ ಅಧಿಕಾರಿಯೊಬ್ಬರು ನೇರ ಉತ್ತರ ನೀಡದೆ, “ಭಾರತವು 5,000 ವರ್ಷಗಳ ಇತಿಹಾಸವಿರುವ ನಾಗರಿಕತೆಯ ದೇಶ” ಎಂದು 13 ನಿಮಿಷಗಳ ಕಾಲ ವಿವರಣೆ ನೀಡಿದ್ದರು.
ಸದ್ಯ ನಾರ್ವೆ ಪತ್ರಕರ್ತೆಯ ಈ ಗಂಭೀರ ಆರೋಪಗಳಿಗೆ ಕೇಂದ್ರ ಗೃಹ ಸಚಿವಾಲಯ, ವಿದೇಶಾಂಗ ಸಚಿವಾಲಯ ಅಥವಾ ಓಸ್ಲೋದ ಭಾರತೀಯ ರಾಯಭಾರ ಕಚೇರಿ ಈವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.




