ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ಸಮಗ್ರ ಮತದಾರರ ಪರಿಷ್ಕರಣೆ (S.I.R.) ಕಾರ್ಯದ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿಯೂ ಮತದಾರರ ನೋಂದಣಿ ಪ್ರಕ್ರಿಯೆ ಸಾಗುತ್ತಿದ್ದು, ಮತದಾರರು ಹೆಸರು ಸೇರ್ಪಡೆ ಹಾಗೂ ತಿದ್ದುಪಡಿ ಕಾರ್ಯದಲ್ಲಿ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ನಾಗರಿಕ ಮತ ಕಾವಲು ಸಮಿತಿ ಆರೋಪಿಸಿದೆ.
ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಸದಸ್ಯರು, ಮತದಾರರ ನೋಂದಣಿ ನಮೂನೆ ಮೇಲ್ನೋಟಕ್ಕೆ ಸರಳವಾಗಿ ಕಂಡರೂ, ಅದನ್ನು ಭರ್ತಿ ಮಾಡುವ ಪ್ರಕ್ರಿಯೆ ಅತ್ಯಂತ ಜಟಿಲವಾಗಿದೆ. ವಿದ್ಯಾವಂತರಿಗೂ ಈ ನಮೂನೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಭರ್ತಿ ಮಾಡಲು ಗೊಂದಲ ಉಂಟಾಗುತ್ತಿದೆ ಎಂದು ತಿಳಿಸಿದರು.
2002ರ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿರುವ ಕಾರಣ, ಹಲವು ವರ್ಷಗಳಿಂದ ಮತ ಚಲಾಯಿಸುತ್ತಿದ್ದ ಅನೇಕ ಮತದಾರರು ಈಗ ದಾಖಲೆ ಸಲ್ಲಿಕೆಯಲ್ಲಿ ಪರದಾಡುತ್ತಿದ್ದಾರೆ. ಹಲವರು ಸರಿಯಾದ ಮಾಹಿತಿಯ ಕೊರತೆಯಿಂದ ನಮೂನೆಗಳನ್ನು ತಪ್ಪಾಗಿ ಭರ್ತಿ ಮಾಡಿ ಸಲ್ಲಿಸುತ್ತಿರುವುದು ಗಮನಕ್ಕೆ ಬಂದಿದೆ ಎಂದು ಹೇಳಿದರು.
ಇದಲ್ಲದೆ, ಮತದಾರರು ಭರ್ತಿ ಮಾಡಿದ ಅರ್ಜಿಗಳನ್ನು ಆನ್ಲೈನ್ನಲ್ಲಿ ಅಪ್ಲೋಡ್ ಮಾಡುವ ಸಂದರ್ಭದಲ್ಲಿಯೂ ತಾಂತ್ರಿಕ ಸಮಸ್ಯೆಗಳು ಎದುರಾಗುತ್ತಿದ್ದು, ಅರ್ಜಿಗಳು ಯಶಸ್ವಿಯಾಗಿ ಸಲ್ಲಿಕೆಯಾಗುತ್ತಿಲ್ಲ ಎಂಬ ದೂರುಗಳು ಹೆಚ್ಚಾಗಿವೆ ಎಂದು ತಿಳಿಸಿದರು.
ಈ ಹಿನ್ನೆಲೆಯಲ್ಲಿ ಮತದಾರರಿಗೆ ಅಗತ್ಯ ಮಾರ್ಗದರ್ಶನ ಹಾಗೂ ನೆರವು ಒದಗಿಸಲು ನಗರ ಹಾಗೂ ಗ್ರಾಮೀಣ ಪ್ರದೇಶಗಳ ಪ್ರತಿ ವಾರ್ಡ್ ಮಟ್ಟದಲ್ಲಿ ಒಂದರಂತೆ ಹೆಲ್ಪ್ ಡೆಸ್ಕ್ ಆರಂಭಿಸಬೇಕು ಎಂದು ನಾಗರಿಕ ಮತ ಕಾವಲು ಸಮಿತಿ ಒತ್ತಾಯಿಸಿದೆ. ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಹಾಯ ಕೇಂದ್ರ ಆರಂಭಿಸಿರುವುದಾಗಿ ಮಾಹಿತಿ ಲಭ್ಯವಾಗಿದ್ದರೂ, ಜಿಲ್ಲೆಯ ವಿವಿಧ ಭಾಗಗಳಲ್ಲಿ ಮತದಾರರಿಗೆ ಪರಿಣಾಮಕಾರಿ ನೆರವು ದೊರೆಯುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಕರಡು ಮತದಾರರ ಪಟ್ಟಿ ಪ್ರಕಟವಾದ ಬಳಿಕ ದೊಡ್ಡ ಪ್ರಮಾಣದಲ್ಲಿ ಮತದಾರರಿಗೆ ನೋಟಿಸ್ಗಳು ಬರುವ ಸಾಧ್ಯತೆ ಇದೆ. ವಿಶೇಷವಾಗಿ ಸೋಲಿಗರು, ಇತರೆ ಆದಿವಾಸಿಗಳು ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಸಂಖ್ಯೆ ಹೆಚ್ಚಿರುವ ಚಾಮರಾಜನಗರ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯ ಮತದಾರರ ಹೆಸರುಗಳು ಪಟ್ಟಿಯಿಂದ ಹೊರಗುಳಿಯುವ ಆತಂಕವಿದೆ ಎಂದು ತಿಳಿಸಿದರು.
ಈ ವಿಶೇಷ ಸುದ್ದಿ ಓದಿದ್ದೀರಾ?ದಲಿತ ರೈತನ ಭೂಮಿ ಕಬಳಿಕೆ ಆರೋಪ: ಕಂದಾಯ ದಾಖಲೆ ತಿದ್ದುಪಡಿ ಕುರಿತು ತನಿಖೆಗೆ ಆಗ್ರಹ
ಆದ್ದರಿಂದ ಜಿಲ್ಲಾಡಳಿತ ಈಗಿನಿಂದಲೇ ಅಂತಹ ಮತದಾರರ ಮಾಹಿತಿಯನ್ನು ಸಂಗ್ರಹಿಸಿ, ಅಗತ್ಯ ದಾಖಲೆಗಳನ್ನು ಒದಗಿಸುವಲ್ಲಿ ಹಾಗೂ ಹೆಸರು ಸೇರ್ಪಡೆ ಪ್ರಕ್ರಿಯೆಗೆ ನೆರವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ವಿಶೇಷ ಸುದ್ದಿ ಓದಿದ್ದೀರಾ?“ಮಳೆಯಿದೆ… ಆದರೆ ಅದು ಕೊಡಗಿನ ಮಳೆಯಲ್ಲ!”
ಪತ್ರಿಕಾಗೋಷ್ಠಿಯಲ್ಲಿ ಪಿ. ಸಂಘಸೇನಾ, ಸಾಹಿತಿ ವೆಂಕಟರಾಜು, ರವಿಕುಮಾರ್ ಹಾಗೂ ಕೆಂಪರಾಜು ಇದ್ದರು.




