ನೋಯ್ಡಾದ ಫೇಸ್-3 ಪ್ರದೇಶದ ವಸತಿ ಸಮುಚ್ಚಯವೊಂದರಲ್ಲಿ ಬುಧವಾರ ಸಂಭವಿಸಿದ ಭೀಕರ ಬೆಂಕಿ ಅವಘಡದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಕಟ್ಟಡದ ನೆಲಮಹಡಿಯಲ್ಲಿ ಎಲೆಕ್ಟ್ರಿಕ್ ವಾಹನದ (ಇವಿ) ಬ್ಯಾಟರಿಯನ್ನು ಚಾರ್ಜ್ಗೆ ಹಾಕಿದ್ದಾಗ ಉಂಟಾದ ಕಿಡಿಯೇ ಈ ದುರಂತಕ್ಕೆ ಕಾರಣ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಕಟ್ಟಡದ ಮಾಲೀಕನ ವಿರುದ್ಧ ಎಫ್ಐಆರ್ ದಾಖಲಿಸಿರುವ ಪೊಲೀಸರು, ಆತನನ್ನು ವಶಕ್ಕೆ ಪಡೆದಿದ್ದಾರೆ.
ಇಂದು ಫೇಸ್-3 ಪೊಲೀಸ್ ಠಾಣಾ ವ್ಯಾಪ್ತಿಯ ಮಮುರಾದ ಗಲ್ಲಿ ನಂಬರ್ 2ರಲ್ಲಿರುವ 4 ಅಂತಸ್ತಿನ (G+4) ವಸತಿ ಕಟ್ಟಡದಲ್ಲಿ ಈ ಘಟನೆ ನಡೆದಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ನೆಲಮಹಡಿಯಲ್ಲಿ ಇವಿ ಬ್ಯಾಟರಿಯನ್ನು ಚಾರ್ಜ್ ಮಾಡುತ್ತಿದ್ದಾಗ ಅದಕ್ಕೆ ಬೆಂಕಿ ಹೊತ್ತಿಕೊಂಡಿದೆ. ಅಲ್ಲಿಂದ ಹಾರಿದ ಕಿಡಿಯು ಪಕ್ಕದಲ್ಲೇ ನಿಲ್ಲಿಸಿದ್ದ ಪೆಟ್ರೋಲ್ ಚಾಲಿತ ವಾಹನಗಳಿಗೂ ಆವರಿಸಿದೆ. ನೋಡನೋಡುತ್ತಿದ್ದಂತೆಯೇ ಕಟ್ಟಡದ ಕೆಳಭಾಗದೆಲ್ಲೆಡೆ ಬೆಂಕಿ ವ್ಯಾಪಿಸಿ, ದಟ್ಟವಾದ ಹೊಗೆ ಆವರಿಸಿಕೊಂಡಿತು ಎಂದು ಪೊಲೀಸರು ತಿಳಿಸಿದ್ದಾರೆ.
ಮಾಹಿತಿ ತಿಳಿದ ತಕ್ಷಣವೇ 7 ಅಗ್ನಿಶಾಮಕ ವಾಹನಗಳು, ಹೈಡ್ರಾಲಿಕ್ ಪ್ಲಾಟ್ಫಾರ್ಮ್ ಹಾಗೂ ಮುಖ್ಯ ಅಗ್ನಿಶಾಮಕ ಅಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದರು. ಸ್ಥಳೀಯ ಪೊಲೀಸರು ಕೂಡ ರಕ್ಷಣಾ ಕಾರ್ಯಾಚರಣೆಯಲ್ಲಿ ಕೈಜೋಡಿಸಿದರು. ಈ ಕಟ್ಟಡದಲ್ಲಿ ಸುಮಾರು 50 ಕುಟುಂಬಗಳು ವಾಸವಾಗಿದ್ದವು.
ದಟ್ಟ ಹೊಗೆಯಿಂದ ಆವೃತವಾಗಿದ್ದ ಕಟ್ಟಡದಲ್ಲಿ ಸಿಲುಕಿದ್ದ ಎಲ್ಲ ನಿವಾಸಿಗಳನ್ನು ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಸುರಕ್ಷಿತವಾಗಿ ಹೊರತಂದರು. ಆದರೆ, ಹೊಗೆಯನ್ನು ಉಸಿರಾಡಿದ ಕಾರಣ ಇಬ್ಬರು ನಿವಾಸಿಗಳು ಗಂಭೀರವಾಗಿ ಅಸ್ವಸ್ಥರಾದರು. ಅವರನ್ನು ತಕ್ಷಣವೇ ಆಂಬ್ಯುಲೆನ್ಸ್ ಮೂಲಕ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅವರು ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಮೃತರನ್ನು ಓರ್ವ ಪುರುಷ ಹಾಗೂ ಓರ್ವ ಮಹಿಳೆ ಎಂದು ಗುರುತಿಸಲಾಗಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ನಿರ್ಲಕ್ಷ್ಯ ಆರೋಪದಡಿ ಕಟ್ಟಡದ ಮಾಲೀಕ/ಗುತ್ತಿಗೆದಾರನ ವಿರುದ್ಧ ಸೂಕ್ತ ಕಾನೂನು ಸೆಕ್ಷನ್ಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ಮುಂದಿನ ಕಾನೂನು ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.




