ತುಮಕೂರು | ಅರಣ್ಯ ಇಲಾಖೆ, ಪೊಲೀಸ್‌ ಅಧಿಕಾರಿಗಳಿಂದ ಹಲ್ಲೆ; ರೈತರಿಗೆ ಗಂಭೀರ ಗಾಯ

Date:

  • ಬಗರ್ ಹುಕುಂ ಸಾಗುವಳಿ ಭೂಮಿಯಲ್ಲಿ ಗುಂಡಿ ತೋಡಲು ಮುಂದಾದ ಅರಣ್ಯ ಇಲಾಖೆ ಸಿಬ್ಬಂದಿ
  • ಬಗರ್‌ ಹುಕುಂ ಸಾಗುವಳಿದಾರರನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು

ಅರಣ್ಯ ಇಲಾಖೆ ಮತ್ತು ಪೊಲೀಸ್‌ ಇಲಾಖೆ ಅಧಿಕಾರಿಗಳು ಬಗರ್ ಹುಕುಂ ಸಾಗುವಳಿದಾರರ ಮೇಲೆ ಲಾಠಿ ಚಾರ್ಜ್‌ ನಡೆಸಿದ್ದು, ಹಲವು ರೈತರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಚೇಳೂರು ಹೋಬಳಿಯ ಗಂಗಯ್ಯನ ಪಾಳ್ಯ ಗ್ರಾಮದಲ್ಲಿ ನಡೆದಿದೆ.

ಅರಣ್ಯ ಇಲಾಖೆ ಸಿಬ್ಬಂದಿ ಏಕಾಏಕಿ ಬಂದು ಬಗರ್ ಹುಕುಂ ಸಾಗುವಳಿ ಭೂಮಿಯಲ್ಲಿ ಗುಂಡಿ ತೋಡುವುದಕ್ಕೆ ಮುಂದಾಗಿದ್ದರು. ಅದನ್ನು ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್‌) ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಪೊಲೀಸ್‌ ಇಲಾಖೆ ಸಿಬ್ಬಂದಿ ಬಗರ್ ಹುಕುಂ ಸಾಗುವಳಿದಾರರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.

“ಚೇಳೂರು ಹೋಬಳಿಯ 35 ಗ್ರಾಮಗಳ ಬಗರ್‌ ಹುಕುಂ ರೈತರು ಕಳೆದ 70 ವರ್ಷಗಳಿಂದ ಉಳುಮೆ ಮಾಡುತ್ತಿರುವ ಜಮೀನನ್ನು ಅರಣ್ಯಭೂಮಿಯೆಂದು ಈ ಹಿಂದೆಯೂ ಅತಿಕ್ರಮಕ್ಕೆ ಮುಂದಾಗಿದ್ದರು” ಎಂದು ರೈತರು ಆರೋಪಿಸಿದ್ದಾರೆ.

“ಅತಿಕ್ರಮಣವನ್ನು ಖಂಡಿಸಿ ರೈತರು ಹೋರಾಟ ಮಾಡಿದ್ದರಿಂದ, ಸ್ಥಳೀಯ ರಾಜಕೀಯ ಮುಖಂಡ ನಾಗರಾಜ್‌, ಡಿವೈಎಸ್‌ಪಿ ನಾಗರಾಜ್‌ ಸಮ್ಮುಖದಲ್ಲಿ ಅರಣ್ಯ ಇಲಾಖೆ ರೈತರ ಸ್ವಾಧೀನಕ್ಕೆ ಅಡ್ಡಿಪಡಿಸುವುದಿಲ್ಲ ಎಂದು ಹೇಳಿದ್ದರು. ಆ ಮಾತಿಗೆ ತಪ್ಪಿ ಬಗರ್‌ ಹುಕುಂ ಸಾಗುವಳಿದಾರರನ್ನು ಒಕ್ಕಲೆಬ್ಬಿಸಲು ಗುರುವಾರ ಏಕಾಏಕಿ ಹಲ್ಲೆ ಮಾಡಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆಪಿಆರ್‌ಎಸ್‌ ರಾಜ್ಯ ಕಾರ್ಯದರ್ಶಿ ಟಿ ಯಶ್ವಂತ್‌ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಗಂಗಯ್ಯನ ಪಾಳ್ಯ ಗ್ರಾಮದ ರೈತರ ಹೋರಾಟಕ್ಕೆ ಬೆಂಬಲವಾಗಿ ನಿಂತಿದ್ದ ಕೆಪಿಆರ್‌ಎಸ್‌ ಗುಬ್ಬಿ ತಾಲೂಕು ಅಧ್ಯಕ್ಷ ದೊಡ್ಡನಂಜಯ್ಯ ಅವರನ್ನು ಗುರಿಯಾಗಿಸಿಕೊಂಡು ಅರಣ್ಯ ಇಲಾಖೆ ಸಿಬ್ಬಂದಿ ತೀವ್ರವಾಗಿ ಹಲ್ಲೆ ನಡೆಸಿ ಅಪಹರಿಸಿದ್ದರೆಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ” ಎಂದು ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಗದಗ | ಮನರೇಗಾ ಯೋಜನೆ ಗ್ರಾಮದ ಮನೆ ಮನೆಗೂ ತಲುಪಲಿ: ಗ್ರಾ.ಪಂ ಅಧ್ಯಕ್ಷ ಲಕ್ಷ್ಮಣ ಕಂಬಳಿ

“ಘಟನೆಯಲ್ಲಿ ರೈತ ಮುಖಂಡ ದೊಡ್ಡನಂಜಯ್ಯ ಅವರನ್ನು ಗುರಿಯಾಗಿಸಿ, ಲಾಠಿಯನ್ನು ಮನಸ್ಸೋ ಇಚ್ಛೆ ಥಳಿಸಿ, ಕಾಲಲ್ಲಿ ತುಳಿದು ತಮ್ಮ ಜೀಪಿನಲ್ಲಿ ಅಪಹರಿಸಿದ್ದರು. ನಂತರ ರೈತರೆಲ್ಲ ಸೇರಿ ಪ್ರತಿಭಟನೆಯನ್ನು ತೀವ್ರಗೊಳಿಸಿ ದೊಡ್ಡನಂಜಯ್ಯ ಅವರ ಬಿಡುಗಡೆಗೆ ಆಗ್ರಹಿಸಿದ್ದರಿಂದ ಅವರನ್ನು ಜಿಲ್ಲಾಸ್ಪತ್ರೆ ಬಳಿ ಬಿಟ್ಟು ಹೋಗಿದ್ದರು” ಎಂದು ಯಶ್ವಂತ್‌ ಆರೋಪಿಸಿದ್ದಾರೆ.

“ಸುಮಾರು ಎರಡು ಗಂಟೆಗಳ ಕಾಲ ನಿರಂತರವಾಗಿ ಅವರ ಮೇಲೆ ಹಲ್ಲೆ ಮಾಡಿದ್ದರಿಂದ ತಲೆಗೆ ತೀವ್ರತರವಾದ ಪೆಟ್ಟು ಬಿದ್ದಿದ್ದು, 34 ಹೊಲಿಗೆ ಹಾಕಲಾಗಿದೆ. ಅಲ್ಲದೆ, ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆಯರು, ವೃದ್ಧರು ಸೇರಿದಂತೆ ಹಲವರು ಗಂಭೀರ ಗಾಯಗೊಂಡಿದ್ದಾರೆ” ಎಂದರು.

“ಅರಣ್ಯ ಇಲಾಖೆ ಸಿಬ್ಬಂದಿ ಲಾಠಿ ಚಾರ್ಜ್ ಮಾಡುವ ಅಧಿಕಾರ ಕೊಟ್ಟವರು ಯಾರು? ದೌರ್ಜನ್ಯಕ್ಕೆ ಕಾರಣರಾಗಿರುವ ಅರಣ್ಯ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಅಮಾನತು ಮಾಡಬೇಕು. ಘಟನೆ ಸಂಬಂಧ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೂಡಲೇ ಕ್ರಮಕೈಗೊಳ್ಳಬೇಕು. ಬಗರ್ ಹುಕುಂ ಸಾಗುವಳಿ ರೈತರಿಗೆ ನ್ಯಾಯ ಸಿಗಬೇಕು” ಎಂದು ಆಗ್ರಹಿಸಿದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೊಪ್ಪಳ | ವಿಜಯನಗರ ಸಾಮ್ರಾಜ್ಯದ ಮೂಲ ನೆಲೆ ಕುಮ್ಮಟದುರ್ಗ; ಶಾಸಕ ಗಾಲಿ ಜನಾರ್ದನರೆಡ್ಡಿ

ವಿಶ್ವದ ಶ್ರೀಮಂತ ರಾಜ ಮನೆತನಗಳಲ್ಲಿ ಒಂದಾದ ಐತಿಹಾಸಿಕ ವಿಜಯನಗರ ಸಾಮ್ರಾಜ್ಯದ ಮೂಲ...

ವಿಜಯಪುರ | ಅಂಬೇಡ್ಕರ 67ನೇ ಮಹಾ ಪರಿನಿರ್ವಾಣ ಶೋಕ ಆಚರಿಸಿದ ದಲಿತ ವಿದ್ಯಾರ್ಥಿ ಪರಿಷತ್

ವಿಜಯಪುರ ನಗರದ ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಕಚೇರಿಯಲ್ಲಿ ಡಾ. ಬಾಬಾ...

ರಾಷ್ಟ್ರದ ಭವಿಷ್ಯ ಯುವ ಸಮೂಹದ ಕೈಯಲ್ಲಿದೆ : ಮುಖ್ಯ ಆಯುಕ್ತ ತುಷಾರ್ ಗಿರಿನಾಥ್

"ರಾಷ್ಟ್ರದ ಭವಿಷ್ಯ ಯುವ ಸಮೂಹದ ಕೈಯಲ್ಲಿದ್ದು, ಎಲ್ಲರೂ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿ...