ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕೋರಮಂಗಲ ಕಣಿವೆ ಜಲಮಾರ್ಗ (ರಾಜಕಾಲುವೆ) ಯೋಜನೆಯನ್ನು ಆಗಸ್ಟ್ 15 ರಂದು ಪೂರ್ಣಗೊಳಿಸಲು ಮುಂದಾಗಿದೆ. ಇದೀಗ, ಈ ಪ್ರದೇಶ ಸಂಪೂರ್ಣವಾಗಿ ಕೊಳಚೆ ಮುಕ್ತವಾಗಿದೆ.
ಕೆ.ಆರ್.ಮಾರುಕಟ್ಟೆಯಲ್ಲಿ ಕಣಿವೆಯ ಮೇಲ್ದಂಡೆಯಲ್ಲಿರುವ ಕೊಳಚೆ ನೀರು ಸಂಸ್ಕರಣಾ ಘಟಕ (ಎಸ್‌ಟಿಪಿ) ಒಂದು ತಿಂಗಳಲ್ಲಿ ಕಾರ್ಯಾರಂಭ ಮಾಡಲು ನಿರ್ಧರಿಸಲಾಗಿದೆ. ಆದರೆ, ಪಾಲಿಕೆಯೂ ಸ್ವಾತಂತ್ರ್ಯ ದಿನಾಚರಣೆಯ ವೇಳೆಗೆ ಇನ್ನಿತರ ಕಾರ್ಯಗಳನ್ನು ಪೂರ್ಣಗೊಳಿಸಲು ಯೋಜಿಸಿದೆ. ಆದರೂ, ಈ ಯೋಜನೆಯನ್ನು ಪೂರ್ಣ ಮಾಡಲು ಇದು ಮೂರನೇ ಗಡುವಾಗಿದೆ.
“ಕಣಿವೆಗೆ 97% ರಷ್ಟು ಒಳಚರಂಡಿ ನೀರು ಪೋಲಾಗುವುದನ್ನು ಕಡಿಮೆ ಮಾಡಿದ್ದೇವೆ. ನಾಲೆಯಲ್ಲಿ ಕಪ್ಪು ನೀರು ಹರಿಯುವುದನ್ನು ನಾಗರಿಕರು ಗಮನಿಸಿದರೆ, ಈ ಯೋಜನೆ ಯಶಸ್ವಿಯಾಗುವುದಿಲ್ಲ. ಆದ್ದರಿಂದ, ಕೊಳಚೆ ನೀರನ್ನು ನೇರವಾಗಿ ಕಣಿವೆಗೆ ಬಿಡುತ್ತಿರುವ ಎಲ್ಲ ಖಾಸಗಿ ಸಂಸ್ಥೆಗಳನ್ನು ಗುರುತಿಸಲು ಬಿಎಬ್ಲೂಎಸ್‌ಎಸ್‌ಬಿ ಎಂಜಿನಿಯರ್‌ಗಳಿಗೆ ಹೇಳಲಾಗಿದೆ” ಎಂದು ಬಿಬಿಎಂಪಿಯ ಮುಖ್ಯ ಎಂಜಿನಿಯರ್ ಬಿ.ಎಸ್.ಪ್ರಹ್ಲಾದ್ ತಿಳಿಸಿದರು.
9.6 ಕಿ.ಮೀ ಕೋರಮಂಗಲದ ಕಣಿವೆಯನ್ನು ಗುಜರಾತ್‌ನ ಸಬರಮತಿ ನದಿಯ ಮುಂಭಾಗದಂತೆಯೇ ಜಲಾಭಿಮುಖವಾಗಿ ಪರಿವರ್ತಿಸುವ ಭರವಸೆಯೊಂದಿಗೆ ಬಿಬಿಎಂಪಿಯು 2021ರಲ್ಲಿ ಕೆ-100 ಕಣಿವೆಗೆ ₹175 ಕೋಟಿ ವೆಚ್ಚದ ಯೋಜನೆಯನ್ನು ಪ್ರಾರಂಭ ಮಾಡಿತ್ತು. ಗುತ್ತಿಗೆದಾರರು 10 ತಿಂಗಳ ಅವಧಿಯಲ್ಲಿ ಯೋಜನೆಯನ್ನು ಪೂರ್ಣಗೊಳಿಸಿ ಸಾರ್ವಜನಿಕರ ಸೇವೆಗೆ ಒದಗಿಸಬೇಕು ಎಂದು ಹೇಳಲಾಗಿತ್ತು. ಆದರೆ, ನೀರೀಕ್ಷಯಂತೆ ಯೋಜನೆ ಪೂರ್ಣವಾಗಿರಲಿಲ್ಲ.
ಕೆ.ಆರ್.ಮಾರುಕಟ್ಟೆಯಲ್ಲಿ ಎಸ್‌ಟಿಪಿ ಸಿದ್ಧವಾಗಿದೆ. ವಿದ್ಯುತ್ ತನಿಖಾಧಿಕಾರಿಗಳು ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ಸ್ಥಾವರಕ್ಕೆ ಅನುಮೋದನೆ ನೀಡಿದೆ. ಸರಬರಾಜು ಮಾರ್ಗ ಸಿದ್ಧವಾದ ನಂತರ ಸಂಸ್ಕರಣಾ ಸೌಲಭ್ಯವನ್ನು ಕಾರ್ಯಗತಗೊಳಿಸುತ್ತೇವೆ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಂಸ್ಕರಿಸಿದ ನೀರನ್ನು ಬಿಡುಗಡೆ ಮಾಡಲಾಗುತ್ತದೆ. ಕಣಿವೆಗೆ, ಇದುವರೆಗೆ ಎಲ್ಲ ಮೂಲೆಗಳಿಂದ ಕೊಳಚೆನೀರು ತುಂಬಿತ್ತು. ತಡೆಗೋಡೆಗಳು ಮತ್ತು ಪಾದಚಾರಿ ಮಾರ್ಗಗಳ ನಿರ್ಮಾಣ, ಕೋರ್ ಸಿವಿಲ್ ಕಾಮಗಾರಿಗಳು ಸಹ ಸುಮಾರು 85% ಪೂರ್ಣಗೊಂಡಿವೆ. ಕೋರಮಂಗಲದ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಬಳಿ ಒತ್ತುವರಿ ತೆರವು ಮಾಡುವಲ್ಲಿ ಕೆಲವು ತೊಂದರೆಗಳನ್ನು ಎದುರಿಸಿದ್ದೇವೆ. ಆದರೆ, ಉನ್ನತ ಅಧಿಕಾರಿಗಳ ಮಧ್ಯಸ್ಥಿಕೆಯಿಂದ ಸಮಸ್ಯೆಯನ್ನು ಪರಿಹರಿಸಲಾಗಿದೆ. ಆಗಸ್ಟ್ 15 ರೊಳಗೆ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು ಎಂದು ಪ್ರಹ್ಲಾದ್ ಹೇಳಿದರು.
‘ಕೆ-100 ರಾಜಕಾಲುವೆ’ ಯೋಜನೆಯಡಿ ರಾಜಕಾಲುವೆಗಳು ಹರಿಯುವ ಪ್ರದೇಶಗಳ ಅಭಿವೃದ್ಧಿಗೆ ರೂಪರೇಷೆ ರೂಪಿಸಲಾಗಿತ್ತು. ಕೆ.ಆರ್. ಮಾರುಕಟ್ಟೆಯಿಂದ ಬೆಳ್ಳಂದೂರು ಕೆರೆಗೆ ಹರಿಯುವ ಕೋರಮಂಗಲ ಕಣಿವೆಯನ್ನು ಜಲಮಾರ್ಗ ಯೋಜನೆಗಾಗಿ ಅಭಿವೃದ್ಧಿಗೊಳಿಸುವ ಮತ್ತು ಸುಂದರೀಕರಣಗೊಳಿಸುವ ಯೋಜನೆಗೆ ಚಾಲನೆ ನೀಡಲಾಗಿತ್ತು.
ಬೆಂಗಳೂರು ನಗರದಲ್ಲಿ ನಾಲ್ಕು ಬೃಹತ್ ಮಳೆ ರಾಜಕಾಲುವೆಗಳಿದ್ದು, ಇವುಗಳು ನಿರ್ಲಕ್ಷ್ಯಕ್ಕೊಳಗಾಗಿವೆ. ಇಂತಹ ರಾಜಕಾಲುವೆಗಳನ್ನು ಹಲವಾರು ನಗರ ಪಟ್ಟಣಗಳಲ್ಲಿ ಜಲಮಾರ್ಗವಾಗಿ ಅಭಿವೃದ್ಧಿಪಡಿಸಲಾಗಿದೆ. ಬೆಂಗಳೂರು ನಗರದ ಕೋರಮಂಗಲ ರಾಜಕಾಲುವೆಯನ್ನು ಸಹ ಜಲಮಾರ್ಗವಾಗಿ ಕೆ.ಆರ್.ಮಾರುಕಟ್ಟೆಯಿಂದ ಬೆಳ್ಳಂದೂರು ಕೆರೆಯವರೆಗೆ ಪರಿವರ್ತಿಸಲು ಉದ್ದೇಶಿಸಲಾಗಿತ್ತು.
ಈ ಸುದ್ದಿ ಓದಿದ್ದೀರಾ? ಬಿಬಿಎಂಪಿ | 3 ವರ್ಷಗಳ ಬಳಿಕ ಎಲ್‌ಇಡಿ ದೀಪ ಅಳವಡಿಕೆ ಯೋಜನೆಗೆ ಮರುಜೀವ
ಜಲಮಾರ್ಗದ ಯೋಜನೆಯಲ್ಲಿ ನಾಗರಿಕ ಒಳಚರಂಡಿ ಕೈಗಾರಿಕಾ ತ್ಯಾಜ್ಯ ನೀರನ್ನು ರಾಜಕಾಲುವೆಯಿಂದ ಬೇರ್ಪಡಿಸಿ ಪರಿಸರ ಹಾನಿಯನ್ನು ನಿಯಂತ್ರಿಸುವುದು. ಕಲುಷಿತಗೊಂಡಿರುವ ರಾಜಕಾಲುವೆಯ ತಳಭಾಗವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ನೀರು ಇಂಗುವಂತೆ ವಿನ್ಯಾಸಗೊಳಿಸುವುದು. ಪಾದಚಾರಿ ಮಾರ್ಗವನ್ನು ಚರ್ಚ್ ಸ್ಟ್ರೀಟ್ ಮಾದರಿಯಲ್ಲಿ ನಿರ್ಮಿಸಿ ಒಂದು ನಗರ ಪ್ರದೇಶದಿಂದ ಮತ್ತೊಂದು ನಗರ ಪ್ರದೇಶಕ್ಕೆ ಸುಲಲಿತವಾಗಿ ಕಾಲ್ನಡಿಗೆಯಲ್ಲಿ ತೆರಳುವಂತೆ ಮಾಡುವುದು ಇದರ ಉದ್ದೇಶವಾಗಿತ್ತು.
ವರ್ಷದ 365 ದಿನವು ಜಲಮಾರ್ಗದಲ್ಲಿ ಶುದ್ಧೀಕರಿಸಿದ ನೀರು ಹರಿಯುವಂತೆ ಮಾಡಲು 5 ಎಂಎಲ್‌ಡಿ ಎಸ್‌ಟಿಪಿಯನ್ನು ಸ್ಥಾಪಿಸುವುದು. ಸಾರ್ವಜನಿಕರ ಅನುಕೂಲಕ್ಕಾಗಿ ಉದ್ಯಾನವನ, ಕಾರಂಜಿ, ಶೌಚಾಲಯವನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ.