ರಾಷ್ಟ್ರೀಯ ಹೆದ್ದಾರಿ 150’ಎ ಮಾರ್ಗದಲ್ಲಿನ ಕಾಡೇನಹಳ್ಳಿ ಬಳಿ ಸಿಗುವ ತಿರುವಿನಲ್ಲಿ ಬೈಕ್ ಮತ್ತು ಸ್ಕೂಟರ್ ನಡುವೆ ಅಪಘಾತ ಸಂಭವಿಸಿದೆ. ಬೈಕ್ ಸವಾರ ಮಂಜುನಾಥ್ ಆಚಾರ್ (45) ತಲೆಗೆ ತೀವ್ರ ಗಾಯಗೊಂಡು ಜಿಲ್ಲಾಸ್ಪತ್ರೆಯಲ್ಲಿ ಮೃತರಾಗಿದ್ದಾರೆ. ಸ್ಕೂಟರ್ ಸವಾರನಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಮೃತ ಮಂಜುನಾಥ್ ಆಚಾರ್ ತಮ್ಮ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಚಿಕ್ಕನಾಯಕನಹಳ್ಳಿ ಟೌನ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿ, ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಶುಕ್ರವಾರ ಬೆಳಗ್ಗೆ ಜಕ್ಕನಹಳ್ಳಿಯಲ್ಲಿ ಮಂಜುನಾಥ್ ಆಚಾರರ ಅಂತಿಮದರ್ಶನ ಮುಗಿಸಿ, ಜಕ್ಕನಹಳ್ಳಿಯಲ್ಲೇ ಅಂತಿಮ ಸಂಸ್ಕಾರ ನಡೆಸಲಾಗುವುದು ಎಂದು ಅವರ ಕುಟುಂಬದವರು ಹಾಗೂ ಸ್ನೇಹಿತರು ತಿಳಿಸಿದ್ದಾರೆ.
ದಸಂಸ ಹೋರಾಟಗಳ ಸಂಗಾತಿ :
ಮೂಲತಃ ತಿಪಟೂರು ತಾಲ್ಲೂಕು ಜಕ್ಕನಹಳ್ಳಿ ಗ್ರಾಮದ ನಿವಾಸಿಯಾಗಿದ್ದ ಮೃತ ಮಂಜುನಾಥ್ ಆಚಾರ್, ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿ ಚಿನಿವಾರ-ಅಂಗಡಿಯೊಂದನ್ನು ಹೊಂದಿದ್ದರು. ಚಿನ್ನ-ಬೆಳ್ಳಿ ಕಸುಬುದಾರಿಕೆಯ ಜೊತೆಗೆ, ದಸಂಸ(ಅಂಬೇಡ್ಕರವಾದ) ಹೋರಾಟಗಳ ಶಾಶ್ವತ ಸಂಗಾತಿಯಾಗಿ ಸಮಾನತೆ-ಸಾಮಾಜಿಕ ನ್ಯಾಯದ ಸಾಕಾರದಲ್ಲಿ ಕ್ರಿಯಾಶೀಲರಾಗಿದ್ದರು. ಚಿಕ್ಕನಾಯಕನಹಳ್ಳಿ ತಾಲ್ಲೂಕು ದಸಂಸ(ಅಂಬೇಡ್ಕರವಾದ) ಸಂಘಟನಾ-ಸಂಚಾಲಕನಾಗಿ ಅವರು ಸಕ್ರಿಯರಾಗಿದ್ದವರು.
ದಕ್ಷ ಸಂಘಟಕ ; ಪ್ರಾಮಾಣಿಕ ಕಾರ್ಯಕರ್ತ :
ತಮ್ಮ ಗೆಳೆಯ ಹಾಗೂ ಹೋರಾಟದ ಸಂಗಾತಿ ಮಂಜುನಾಥ್ ಆಚಾರ್’ರ ಅಕಾಲಿಕ ಅಗಲಿಕೆಯ ಆಘಾತದಲ್ಲಿದ್ದ ದಸಂಸ-ಅಂಬೇಡ್ಕರವಾದದ ಜಿಲ್ಲಾಸಂಚಾಲಕ ಕುಂದೂರು ಮುರಳಿ ಆಂದೋಲನಕ್ಕೆ ಮಾತನಾಡಿ,
ಸಂಘರ್ಷ ಸಮಿತಿಯ ಎಲ್ಲ ಸಂದರ್ಭಗಳಲ್ಲೂ ಹೋರಾಟದ ಹಿರಿಯ ಚೇತನರಾದ ಕುಂದೂರು ತಿಮ್ಮಯ್ಯನವರ ನೆರಳಿನಂತೇ ಸುಳಿದಾಡುತ್ತಿದ್ದ ಮಂಜುನಾಥ್ ಆಚಾರ್ ಸ್ವತಃ ಒಬ್ಬ ಮೈಕ್ರೋಮೈನಾರಿಟಿ ಸಮುದಾಯಕ್ಕೆ ಸೇರಿದ ಧೀಮಂತ ವ್ಯಕ್ತಿ. ದಲಿತ ಮತ್ತು ಹಿಂದುಳಿದ ವರ್ಗಗಳ ಮೇಲೆ ಅಪಾರ ಪ್ರೀತಿ ಮತ್ತು ಕಕ್ಕುಲಾತಿ ಹೊಂದಿದ್ದಂಥವರು. ದಸಂಸ-ಅಂಬೇಡ್ಕರವಾದದ ಕಟ್ಟಾಳು. ದಕ್ಷ ಸಂಘಟಕ. ಪ್ರಾಮಾಣಿಕ ಕಾರ್ಯಕರ್ತ. ಮಂಜುಆಚಾರ್ ಎಂಬ ಹೆಸರಲ್ಲೇ ಫೇಮಸ್ ಆಗಿದ್ದ ಮಂಜುನಾಥ್ ನಮಗೆ ತೀರಾ ಆತ್ಮೀಯವಾಗಿದ್ದ ಹೋರಾಟದ-ಸಂಗಾತಿ. ಅವರ ಬಗ್ಗೆ ಮಾತನಾಡಲು ಬಹಳಷ್ಟಿದೆ. ಆದರೆ, ಅವರ ಅಗಲಿಕೆ ಕೊಟ್ಟಿರುವ ಆಘಾತಕ್ಕೆ ಗಂಟಲುಕಟ್ಟುತ್ತಿದೆ ಎಂದು ಗದ್ಗದಿತರಾದರು.
ಮಂಜುಆಚಾರ್ ಅಕಾಲಿಕ ಅಗಲಿಕೆ ಭರಿಸಲಾಗದ ನಷ್ಟ ಎಂದು ಹೇಳಿ ಕೈ-ಕೈ ಹಿಸುಕಿಕೊಂಡ ದಸಂಸ-ಅಂಬೇಡ್ಕರವಾದ ತಾಲ್ಲೂಕು ಸಂಚಾಲಕ ರಮೇಶ್ ಯರೆಕಟ್ಟೆ, ಮಿತ್ರನೂ ಕಾರ್ಯಕರ್ತನೂ ಆಗಿದ್ದ ಮಂಜುಆಚಾರ್’ರ ಅಕಾಲಿಕ ಅಗಲಿಕೆ ಉಂಟುಮಾಡಿರುವ ನಷ್ಟ ಭರಿಸಲಾಗದ್ದು ಎಂದರು. ನಮ್ಮ ಜನಪರ ಚಳವಳಿಗಳು, ಸಂಘಟನೆಗಳು ನೆಲಮಟ್ಟದಿಂದ ರೂಪಿಸಿಕೊಡುವ ಇಂಥ ಅಪ್ಪಟ-ಜನನಾಯಕರನ್ನು ಈ-ಕಾಲದಲ್ಲಿ ನಾವು ಮತ್ತೆ ಹುಟ್ಟುಹಾಕಿಕೊಳ್ಳುವುದು ಕಷ್ಟ. ವೈಯಕ್ತಿಕವಾಗಿ ಅವರ ಕುಟುಂಬಕ್ಕೆ, ನಮಗೆ ಆದ ನಷ್ಟವಂತೂ ಅಗಣಿತ. ಅದೇರೀತಿ ಚಳುವಳಿಗೆ ಬಿದ್ದಹೊಡೆತ ಕೂಡ ಭರಿಸಲಾಗದ್ದು ಎಂದು ಹೇಳಿ ನೊಂದುಕೊಂಡರು.
ಸ್ವಗ್ರಾಮ ಜಕ್ಕನಹಳ್ಳಿಯಲ್ಲಿ ಹೊಸ ಮನೆ ಕಟ್ಟಿಸಿ ಮೊನ್ನೆತಾನೆ ಸಡಗರದ ಗೃಹಪ್ರವೇಶ ಮಾಡಿಕೊಂಡಿದ್ದ ಮಂಜುಆಚಾರ್ ಹೀಗೆ ಏಕಾಏಕಿ ನಿಧನರಾದ ಸುದ್ದಿಯಿಂದ ದುಃಖಿತರಾದ ದಸಂಸ-ಅಂಬೇಡ್ಕರವಾದ ಖಜಾಂಚಿ ಇರ್ಫಾನ್ ಮಾತನಾಡಿ, ನಮಗೆಲ್ಲರಿಗೂ ಆಪ್ತರಾಗಿದ್ದ ಮಂಜುಆಚಾರ್’ರ ಸಾವು ಚಳವಳಿಯ ಗೆಳೆಯರನ್ನು ಒಮ್ಮೆಲೇ ಸ್ತಬ್ಧಗೊಳಿಸಿದೆ. ನಮ್ಮ ಪಾಲಿಗಿದು ಅನಿರೀಕ್ಷಿತವಾದ ಶೋಕವಾರ್ತೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬಕ್ಕೆ ದುಃಖಭರಿಸುವ ಶಕ್ತಿ ಸಿಗಲಿ ಎಂದು ನಾವು ಪ್ರಾರ್ಥಿಸುತ್ತೇವೆ ಎಂದರು.
ಶಿಲ್ಪಿ ವಿಶ್ವನಾಥ್, ಗೋಡೆಕೆರೆ ತಿಮ್ಮೇಗೌಡ, ತೌಹೀದ್, ಕಿರಣ್, ಮಹಮದ್ ಅಪ್ಸರ್, ಶಂಕರ್, ಪ್ರವೀಣ್, ಸೇರಿದಂತೆ ಮಂಜುಆಚಾರ್ ಹೊಂದಿದ್ದ ಅಪಾರ ಸ್ನೇಹಿತರು ಮತ್ತು ಹೋರಾಟದ ಗೆಳೆಯರು ಅವರ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ.




