ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರು ಹೋಬಳಿಯ ಮುತುಗದಹಳ್ಳಿ ಗ್ರಾಮದ ಸರ್ವೇ ನಂ.31ರಲ್ಲಿ ಅರಣ್ಯ ಇಲಾಖೆಯು ಹೈಕೋರ್ಟ್ ಆದೇಶದ ಅನುಷ್ಠಾನದ ಭಾಗವಾಗಿ ನಡೆಸಿದ ತೆರವು ಕಾರ್ಯಾಚರಣೆ ವೇಳೆ ಸಾವಿರಾರು ಅಡಿಕೆ, ತೆಂಗು ಹಾಗೂ ಇತರೆ ಫಲಭರಿತ ಮರಗಳನ್ನು ನೆಲಸಮಗೊಳಿಸಲಾಯಿತು. ದಶಕಗಳ ಕಾಲ ಬೆಳೆಸಿದ ತೋಟಗಳು ಕ್ಷಣಾರ್ಧದಲ್ಲಿ ಧರೆಗುರುಳಿದ ದೃಶ್ಯ ರೈತರಲ್ಲಿ ಆಕ್ರಂದನ ಮೂಡಿಸಿತು.
ಸ್ಥಳದಲ್ಲಿ ಭಾರೀ ಪೊಲೀಸ್ ಭದ್ರತೆಯೊಂದಿಗೆ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿತು. ಅಧಿಕಾರಿಗಳ ಕಾಲಿಗೆ ಬಿದ್ದು, ಕೈಮುಗಿದು ವಿನಂತಿಸಿಕೊಂಡರೂ ತೆರವು ಕಾರ್ಯಾಚರಣೆ ನಿಲ್ಲಲಿಲ್ಲ ಎಂದು ರೈತರು ಅಳಲು ತೋಡಿಕೊಂಡರು.
40 ವರ್ಷಗಳ ಹಿಂದಿನ ಮಂಜೂರಾತಿ, ಇಂದಿನ ವಿವಾದ ರೈತರ ಹೇಳಿಕೆಯ ಪ್ರಕಾರ, 1982ರಲ್ಲಿ ಈ ಸರ್ವೇ ಸಂಖ್ಯೆಯ ಜಮೀನನ್ನು 59 ಮಂದಿಗೆ ಸಾಗುವಳಿಯಾಗಿ ಮಂಜೂರು ಮಾಡಲಾಗಿತ್ತು. ಬಳಿಕ 1990ರಲ್ಲಿ ಕೆಲವರು ಈ ಜಮೀನನ್ನು ಶುದ್ಧ ಕ್ರಯದ ಮೂಲಕ ಖರೀದಿಸಿದ್ದರು. ಕಳೆದ ಎರಡು ದಶಕಗಳಿಂದ ಮಲ್ಲಿಕಾರ್ಜುನಯ್ಯ, ಭಾಗ್ಯಮ್ಮ ಹಾಗೂ ಗೀತಮ್ಮ ಅವರು ಅಡಿಕೆ, ತೆಂಗು ಮತ್ತು ಬಾಳೆ ಬೆಳೆದು ಜೀವನ ನಡೆಸುತ್ತಿದ್ದರು. ಇತರ ರೈತರು ಮಳೆ ಆಧಾರಿತ ಬೆಳೆಗಳನ್ನು ಬೆಳೆಯುತ್ತಿದ್ದರು.

ಆದರೆ ಹಲವು ವರ್ಷಗಳ ನಂತರ ಈ ಭೂಮಿ ಅರಣ್ಯ ಇಲಾಖೆಗೆ ಸೇರಿದೆ ಎಂದು ನೋಟಿಸ್ ನೀಡಲಾಗಿದ್ದು, ಜಂಟಿ ಸರ್ವೆ ಬಳಿಕ ಜಮೀನಿನ ಪಹಣಿಯನ್ನು ಅರಣ್ಯ ಇಲಾಖೆಯ ಹೆಸರಿಗೆ ವರ್ಗಾಯಿಸಲಾಯಿತು ಎಂದು ತಿಳಿದುಬಂದಿದೆ. ಈ ಕ್ರಮವನ್ನು ಪ್ರಶ್ನಿಸಿ ಕೆಲವು ರೈತರು ನ್ಯಾಯಾಲಯದ ಮೊರೆ ಹೋದರೂ, ಲಭ್ಯ ದಾಖಲೆಗಳ ಆಧಾರದ ಮೇಲೆ ಭೂಮಿ ಅರಣ್ಯ ಇಲಾಖೆಗೆ ಸೇರಿದ್ದು ಎಂಬ ತೀರ್ಪು ಬಂದ ಹಿನ್ನೆಲೆಯಲ್ಲಿ ತೆರವು ಕಾರ್ಯಾಚರಣೆಗೆ ದಾರಿ ಮಾಡಿಕೊಟ್ಟಿತು.
ಈ ಹಿಂದೆ ಬೆಳೆ ಕಟಾವಿಗೆ ಕಾಲಾವಕಾಶ ಕೋರಿದ್ದ ರೈತರಿಗೆ ಕೆಲವು ತಿಂಗಳ ಅವಕಾಶ ನೀಡಲಾಗಿತ್ತು. ಆದರೆ ಈ ಬಾರಿ ಡಿಸೆಂಬರ್ವರೆಗೆ ಅವಧಿ ವಿಸ್ತರಿಸುವಂತೆ ಮನವಿ ಮಾಡಿದರೂ ಅಧಿಕಾರಿಗಳು ಒಪ್ಪಲಿಲ್ಲ.
“ಈ ವರ್ಷದ ಅಡಿಕೆ ಫಸಲು ಸಿಕ್ಕರೆ ಮಕ್ಕಳ ವಿದ್ಯಾಭ್ಯಾಸಕ್ಕೆ ಹಣ ಸಿಗುತ್ತದೆ. ಡಿಸೆಂಬರ್ವರೆಗೆ ಮಾತ್ರ ಅವಕಾಶ ನೀಡಿ. ಬಳಿಕ ನಾವೇ ಸ್ವಂತ ಖರ್ಚಿನಲ್ಲಿ ಜಾಗವನ್ನು ತೆರವುಗೊಳಿಸಿ ಇಲಾಖೆಗೆ ಹಸ್ತಾಂತರಿಸುತ್ತೇವೆ” ಎಂದು ರೈತರು ಲಿಖಿತ ಬಾಂಡ್ ನೀಡಲು ಸಹ ಸಿದ್ಧತೆ ವ್ಯಕ್ತಪಡಿಸಿದರು. ಆದರೆ ಅಧಿಕಾರಿಗಳು ಕೋರ್ಟ್ ಆದೇಶವನ್ನು ಉಲ್ಲೇಖಿಸಿ ಮನವಿಯನ್ನು ತಿರಸ್ಕರಿಸಿದರು.
ಅರಣ್ಯ ಇಲಾಖೆಯ ಆರ್ಎಫ್ಒ ಚಂದನ್ ಅವರು, “ಇದು ನ್ಯಾಯಾಲಯದ ಆದೇಶದ ಅನ್ವಯ ನಡೆಯುತ್ತಿರುವ ಪ್ರಕ್ರಿಯೆ. ಅರಣ್ಯ ಎಂದು ಘೋಷಿತ ಭೂಮಿಯಲ್ಲಿ ಇಲಾಖೆಯ ಅನುಮತಿ ಇಲ್ಲದೆ ಸಾಗುವಳಿ ಮಂಜೂರು ಮಾಡುವ ಅವಕಾಶವಿಲ್ಲ. ಕಾನೂನು ಪಾಲನೆ ನಮ್ಮ ಕರ್ತವ್ಯ” ಎಂದು ತಿಳಿಸಿದ್ದಾರೆ.
ತಹಶೀಲ್ದಾರ್ ಮಮತಾ ಅವರು, “35-40 ವರ್ಷಗಳ ಹಿಂದೆ ಇಲಾಖೆಗಳ ನಡುವಿನ ಸಮನ್ವಯದ ಕೊರತೆಯಿಂದ ಈ ಸಮಸ್ಯೆ ಉಂಟಾಗಿದೆ. ಈಗ ನ್ಯಾಯಾಲಯದ ಆದೇಶ ಇರುವುದರಿಂದ ನಿಯಮ ಮೀರಿ ಯಾವುದೇ ಸಡಿಲಿಕೆ ನೀಡಲು ಸಾಧ್ಯವಿಲ್ಲ” ಎಂದು ಹೇಳಿದರು.

“ಭೂಮಿ ಅರಣ್ಯ ಪ್ರದೇಶವಾಗಿದ್ದರೆ ಅಂದೇ ಸಾಗುವಳಿ ಮಂಜೂರು ಹೇಗೆ ಮಾಡಲಾಯಿತು? ಅಧಿಕಾರಿಗಳ ತಪ್ಪಿಗೆ ಇಂದು ರೈತರು ಶಿಕ್ಷೆ ಅನುಭವಿಸಬೇಕೇ?” ಎಂದು ರೈತರು ಪ್ರಶ್ನಿಸಿದ್ದಾರೆ. ಅಂದಿನ ನಿರ್ಧಾರಗಳ ಹೊಣೆಗಾರಿಕೆ ಬಗ್ಗೆ ತನಿಖೆ ನಡೆಸಬೇಕೆಂಬ ಆಗ್ರಹವೂ ವ್ಯಕ್ತವಾಗಿದೆ.
ಅರಣ್ಯ ಇಲಾಖೆ 5ರಿಂದ 6 ಜೆಸಿಬಿಗಳು, ನೂರಕ್ಕೂ ಹೆಚ್ಚು ಕಾರ್ಮಿಕರು ಹಾಗೂ ಹಲವು ಮರ ಕಡಿಯುವ ಯಂತ್ರಗಳೊಂದಿಗೆ ಕಾರ್ಯಾಚರಣೆ ನಡೆಸಿತು. ಕೆಲವೇ ಗಂಟೆಗಳಲ್ಲಿ ಸಾವಿರಾರು ಅಡಿಕೆ ಮತ್ತು ತೆಂಗಿನ ಮರಗಳನ್ನು ತೆರವುಗೊಳಿಸಿ ಸ್ಥಳವನ್ನು ಸಂಪೂರ್ಣ ಖಾಲಿ ಮಾಡಲಾಯಿತು.
ರೈತರ ಪ್ರತಿರೋಧದ ಸಾಧ್ಯತೆಯನ್ನು ಗಮನಿಸಿ ಡಿವೈಎಸ್ಪಿ ಉಮೇಶ್ ನೇತೃತ್ವದಲ್ಲಿ ಸಿಪಿಐ ಚಂದ್ರಶೇಖರ್, ಪಿಎಸ್ಐ ಜನಾರ್ಧನ್ ಸೇರಿದಂತೆ ತಿಪಟೂರು, ತಿಪಟೂರು ಗ್ರಾಮಾಂತರ, ಹುಳಿಯಾರು, ಹೊನ್ನವಳ್ಳಿ, ಕೆ.ಬಿ. ಕ್ರಾಸ್, ನೊಣವಿನಕೆರೆ, ಚಿಕ್ಕನಾಯಕನಹಳ್ಳಿ ಹಾಗೂ ಹಂದನಕೆರೆ ಠಾಣೆಗಳ ನೂರಾರು ಪೊಲೀಸರು ಸ್ಥಳದಲ್ಲಿ ಭದ್ರತೆ ಒದಗಿಸಿದ್ದರು.
ಮಾನವೀಯತೆ ಮತ್ತು ಕಾನೂನು ನಡುವಿನ ಸಂಘರ್ಷ ಮುತುಗದಹಳ್ಳಿ ಸರ್ವೇ ನಂ.31ರ ಪ್ರಕರಣವು ದಶಕಗಳ ಹಿಂದಿನ ಆಡಳಿತಾತ್ಮಕ ಲೋಪ, ಅರಣ್ಯ ಸಂರಕ್ಷಣೆ ಮತ್ತು ರೈತರ ಜೀವನೋಪಾಯದ ನಡುವಿನ ಸಂಘರ್ಷವನ್ನು ಮತ್ತೊಮ್ಮೆ ಬೆಳಕಿಗೆ ತಂದಿದೆ. ಒಂದೆಡೆ ನ್ಯಾಯಾಲಯದ ಆದೇಶವನ್ನು ಜಾರಿಗೊಳಿಸುವ ಅನಿವಾರ್ಯತೆ ಇದ್ದರೆ, ಮತ್ತೊಂದೆಡೆ ಹಲವು ವರ್ಷಗಳಿಂದ ಅದೇ ಭೂಮಿಯನ್ನು ನಂಬಿ ಬದುಕು ಕಟ್ಟಿಕೊಂಡ ರೈತರ ಜೀವನೋಪಾಯಕ್ಕೆ ತೀವ್ರ ಹೊಡೆತ ಬಿದ್ದಿರುವುದು ಈ ಪ್ರಕರಣದ ಮಾನವೀಯ ಆಯಾಮವಾಗಿ ಪರಿಣಮಿಸಿದೆ.




