ಪ್ರಪಂಚದಲ್ಲೇ ಬೃಹತ್ ಲಿಖಿತ ಸಂವಿಧಾನವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಭಾರತದ ಸಂವಿಧಾನವು ಏಕಕಾಲಕ್ಕೆ ದೇಶದ ಚರಿತ್ರೆ, ವರ್ತಮಾನ ಮತ್ತು ಭವಿಷ್ಯವನ್ನು ಪ್ರತಿನಿಧಿಸುತ್ತದೆ ಎಂದು ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಹಾಗೂ ಚಿಂತಕ ಎ. ನಾರಾಯಣ ಅಭಿಪ್ರಾಯಪಟ್ಟರು.
ಮಧುಗಿರಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ‘ಸಂವಿಧಾನ ಅರಿವು’ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾವ ವ್ಯವಸ್ಥೆಯಲ್ಲಿ ಪ್ರಭುಗಳಿರುವುದಿಲ್ಲವೋ ಅದೇ ಪ್ರಜಾಪ್ರಭುತ್ವ. ಯಾವ ವ್ಯವಸ್ಥೆಯಲ್ಲಿ ಪ್ರತಿನಿಧಿಗಳು ಸೇರಿದಂತೆ ಯಾರೂ ಜನರಿಗಿಂತ ಮೇಲಿರುವುದಿಲ್ಲವೋ, ಎಲ್ಲರೂ ಜನಸಾಮಾನ್ಯರ ಅಧೀನದಲ್ಲಿರುತ್ತಾರೋ ಅದೇ ಗಣರಾಜ್ಯ ವ್ಯವಸ್ಥೆಯಾಗಿದೆ ಎಂದು ವಿವರಿಸಿದರು.

ಭಾರತದ ಸಂವಿಧಾನದಲ್ಲಿರುವ 395 ಮೂಲ ವಿಧಿಗಳು, 22 ಭಾಗಗಳು ಮತ್ತು 12 ಅನುಸೂಚಿಗಳ ಸಾರವನ್ನು ಕೆಲವೇ ಪದಗಳಲ್ಲಿ ಸಾಂದ್ರಗೊಳಿಸಿ ಸಂವಿಧಾನದ ಪೀಠಿಕೆಯಲ್ಲಿ ಅಭಿವ್ಯಕ್ತಪಡಿಸಲಾಗಿದೆ. ದೇಶವು ಕೋಮುಗಲಭೆ ಮತ್ತು ಪ್ರಕ್ಷುಬ್ಧ ವಾತಾವರಣದಂತಹ ಕಠಿಣ ಪರಿಸ್ಥಿತಿಗಳನ್ನು ಎದುರಿಸುತ್ತಿದ್ದ ಸಂದರ್ಭದಲ್ಲಿಯೂ ಸಂವಿಧಾನ ರಚನಾ ಸಮಿತಿಯ ಸದಸ್ಯರು ಸಮಚಿತ್ತದಿಂದ, ಪಾರದರ್ಶಕವಾಗಿ ಹಾಗೂ ಸುದೀರ್ಘ ಚರ್ಚೆ ಮತ್ತು ಸಂವಾದಗಳ ಮೂಲಕ ರಾಷ್ಟ್ರಕ್ಕೆ ಅಗತ್ಯವಾದ ಸಾರ್ವಕಾಲಿಕ ಮೌಲ್ಯಗಳನ್ನು ರೂಪಿಸಿಕೊಟ್ಟಿದ್ದಾರೆ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಕುಮಾರ್ ಮಾತನಾಡಿದರು. ನಿವೃತ್ತ ಪ್ರಾಂಶುಪಾಲ ಡಿ.ಎಸ್. ಮುನೀಂದ್ರಕುಮಾರ್, ಪ್ರಾಧ್ಯಾಪಕರಾದ ಗೋವಿಂದರಾಯ, ಬಿ. ಮಂಜುನಾಥ್, ನಾಗರಾಜ್, ಲತಾ, ರಂಗಸ್ವಾಮಯ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.




