ತಮಿಳುನಾಡಿನ ಪ್ರಸಿದ್ಧ ಗ್ರಾನೈಟ್ ಉದ್ಯಮಿ (‘ಜೆಮ್ ಗ್ರಾನೈಟ್ಸ್’) ಆರ್. ವೀರಮಣಿ ವಿರುದ್ಧ ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಹೊಸ ದೂರು ದಾಖಲಾಗಿದ್ದು, ಅವರ ವಿರುದ್ಧದ ಪೋಕ್ಸೊ ಪ್ರಕರಣಗಳ ಒಟ್ಟು ಸಂಖ್ಯೆ 8ಕ್ಕೆ ಏರಿಕೆಯಾಗಿದೆ.
ದಾಖಲಾಗಿರುವ ಎಲ್ಲಾ 8 ಪೋಕ್ಸೊ ಪ್ರಕರಣಗಳ ಅಡಿಯಲ್ಲಿಯೂ ವೀರಮಣಿ ಅವರನ್ನು ಅಧಿಕೃತವಾಗಿ ಬಂಧಿಸಲಾಗಿದ್ದು, ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡವು ಈ ಲೈಂಗಿಕ ಶೋಷಣೆ ಪ್ರಕರಣಗಳ ತನಿಖೆಯನ್ನು ತೀವ್ರಗೊಳಿಸಿದ್ದು, ಪ್ರಕರಣದಲ್ಲಿ ಶಾಮೀಲಾದ ಎಲ್ಲರ ವಿರುದ್ಧದ ಸಾಕ್ಷ್ಯಗಳನ್ನು ಕಲೆಹಾಕುತ್ತಿದೆ.
ಇದನ್ನೂ ಓದಿ: ‘ವೀರಮಣಿ ಅತ್ಯಾಚಾರ ಪ್ರಕರಣ ಮುಚ್ಚುವುದರ ಹಿಂದೆ ಯಾವ ಒಪ್ಪಂದವಿತ್ತು’?; ಡಿಎಂಕೆ ವಿರುದ್ಧ ಸಿಎಂ ವಿಜಯ್ ವಾಗ್ದಾಳಿ
ಉದ್ಯಮಿಗೆ ಸಹಕರಿಸಿದ ಆರೋಪದ ಮೇರೆಗೆ ಅವರ ಆಪ್ತ ಸಹಾಯಕಿ ಶಾಂತಿ, ಆಕೆಯ ಪತಿ ಮಹೇಂದ್ರ ಸಿಂಹನ್ ಮತ್ತು ಚಾಲಕರು ಸೇರಿದಂತೆ ಒಟ್ಟು 8 ಜನರನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಪ್ರಕರಣದ ಪ್ರಮುಖ ಆರೋಪಿಗಳು ಮತ್ತು ಶಂಕಿತರು ವಿದೇಶಕ್ಕೆ ಪರಾರಿಯಾಗುವುದನ್ನು ತಡೆಯಲು ಪೊಲೀಸರು ಲುಕ್‌ಔಟ್ ಸರ್ಕ್ಯುಲರ್ (LOC) ಜಾರಿಗೊಳಿಸಿದ್ದು, ವಿದೇಶಕ್ಕೆ ಓಡಿಹೋಗದಂತೆ ತಡೆಯಲು ಕ್ರಮಗಳನ್ನು ಕೈಗೊಂಡಿದ್ದಾರೆ.
ಈ ದೂರುಗಳನ್ನು ಮರೆಮಾಚಲು ಮತ್ತು ಸಾಕ್ಷ್ಯಗಳನ್ನು ನಾಶಪಡಿಸಲು ಉದ್ಯಮಿಯಿಂದ ಕೋಟ್ಯಂತರ ರೂಪಾಯಿ ಹಣದ ವ್ಯವಹಾರ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಎಸ್‌ಐಟಿ ಈ ಆರ್ಥಿಕ ಶೋಧನೆಯನ್ನೂ ತೀವ್ರಗೊಳಿಸಿದೆ.





