ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ 2016ರಲ್ಲಿ ಜಾರಿಗೆ ತಂದ ನೋಟು ಅಮಾನ್ಯೀಕರಣ (ನೋಟ್‌ಬಂಧಿ- Demonetisation) ನಿರ್ಧಾರಕ್ಕೆ 10 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. “2016ರ ನೋಟ್‌ಬಂಧಿಯು ದೇಶದ ಆರ್ಥಿಕತೆಯನ್ನು ಧ್ವಂಸಗೊಳಿಸಿದ್ದರೆ, ಪ್ರಸ್ತುತ ಸರ್ಕಾರದ ‘ವೋಟ್‌ಬಂಧಿ’ ಪ್ರಜಾಪ್ರಭುತ್ವ ಮತ್ತು ರಾಜಕೀಯ ವ್ಯವಸ್ಥೆಯನ್ನು ನಾಶಪಡಿಸುತ್ತಿದೆ” ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ.
ಸಾಮಾಜಿಕ ಜಾಲತಾಣ ‘ಎಕ್ಸ್’ (ಟ್ವಿಟರ್) ನಲ್ಲಿ ಈ ಕುರಿತು ಪ್ರಕ್ರಿಯಿಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಪರ್ಕ) ಜೈರಾಮ್ ರಮೇಶ್, 2016ರ ನವೆಂಬರ್ 8ರಂದು ಪ್ರಧಾನಿ ಮೋದಿ ಅವರು ಕೈಗೊಂಡ ‘ತುಘಲಕ್ ಮಾದರಿಯ ನಿರ್ಧಾರ’ವು ತನ್ನ ಯಾವುದೇ ಮೂಲ ಉದ್ದೇಶಗಳನ್ನು ಈಡೇರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮೋದಿ-ಶಾ ಚಕ್ರವ್ಯೂಹ | ಪ್ರಾದೇಶಿಕ ಪಕ್ಷಗಳ ಒಡೆದು, ಕಾಂಗ್ರೆಸ್ ಏಕಾಂಗಿ ಮಾಡುವುದೇ ಗುರಿ!
ನೋಟು ಅಮಾನ್ಯೀಕರಣದಿಂದಾಗಿ ಕಪ್ಪುಹಣ ನಿರ್ಮೂಲನೆಯಾಗಲಿಲ್ಲ, ಬದಲಾಗಿ ಲಕ್ಷಾಂತರ ಸಣ್ಣ ಉದ್ಯಮಗಳು ನಾಶವಾಗಿ, ಕೋಟಿಗಟ್ಟಲೆ ಜನರ ಜೀವನೋಪಾಯಕ್ಕೆ ಧಕ್ಕೆಯಾಯಿತು. ಆರ್ಥಿಕತೆಯನ್ನು ನಾಶಪಡಿಸಿದ ನಂತರ, ಪ್ರಸ್ತುತ ಸರ್ಕಾರವು ಚುನಾವಣಾ ಪ್ರಕ್ರಿಯೆ ಮತ್ತು ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ದುರ್ಬಲಗೊಳಿಸುವ ಮೂಲಕ ‘ವೋಟ್‌ಬಂಧಿ’ಯಲ್ಲಿ ತೊಡಗಿದೆ ಎಂದು ಕಾಂಗ್ರೆಸ್ ಟೀಕಿಸಿದೆ.
ಚಲಾವಣೆಯಲ್ಲಿರುವ ನಗದು ಪ್ರಮಾಣ ಕಡಿಮೆಯಾಗುವ ಬದಲು ಹೆಚ್ಚಾಗಿದೆ ಹಾಗೂ ಹೊಸ ನೋಟುಗಳಲ್ಲೂ ನಕಲಿ ಚಲಾವಣೆ ಮುಂದುವರಿದಿದೆ ಎಂದು ಮಾಧ್ಯಮ ವರದಿಗಳನ್ನು ಉಲ್ಲೇಖಿಸಿ ಜೈರಾಮ್ ರಮೇಶ್ ಬೆಟ್ಟುಮಾಡಿದ್ದಾರೆ. ಕೇಂದ್ರ ಸರ್ಕಾರದ ಈ ನಿರ್ಧಾರವು ಭಾರತೀಯ ಆರ್ಥಿಕ ಇತಿಹಾಸದಲ್ಲೇ ಅತ್ಯಂತ ದೊಡ್ಡ ವೈಫಲ್ಯಗಳಲ್ಲಿ ಒಂದಾಗಿ ಉಳಿಯಲಿದೆ ಎಂದು ಕಾಂಗ್ರೆಸ್ ಪ್ರತಿಪಾದಿಸಿದೆ.




