₹11.53 ಲಕ್ಷ ಸಾಲದ ಬಾಕಿಗಾಗಿ ಸುಮಾರು ₹4 ಕೋಟಿ ಮೌಲ್ಯದ ರೈತರ ಜಮೀನನ್ನು ಕೇವಲ ₹34.80 ಲಕ್ಷಕ್ಕೆ ಹರಾಜು ಮಾಡಿರುವ ತುರುವೇಕೆರೆಯ ಕರ್ನಾಟಕ ಬ್ಯಾಂಕ್ ಕ್ರಮವನ್ನು ವಿರೋಧಿಸಿ, ನವೆಂಬರ್ 2ರ ಸೋಮವಾರ ರೈತ ಸಂಘದ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಹಾಗೂ ಜಿಲ್ಲಾಧ್ಯಕ್ಷ ಎ. ಗೋವಿಂದರಾಜು ತಿಳಿಸಿದರು.
ತುಮಕೂರು ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತನ ಭೂಮಿಯನ್ನು ವಾಪಸ್ ನೀಡಬೇಕು ಹಾಗೂ ಆನ್‌ಲೈನ್ ಹರಾಜನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದರು. “ಇ-ಹರಾಜಿನ ಹೆಸರಿನಲ್ಲಿ ರೈತರ ಹೆಚ್ಚು ಬೆಲೆಬಾಳುವ ಭೂಮಿಯನ್ನು ಕಡಿಮೆ ಬೆಲೆಗೆ ಹರಾಜು ಮಾಡಿ ಕಬಳಿಸುವ ಬ್ಯಾಂಕ್ ಅಧಿಕಾರಿಗಳ ಹುನ್ನಾರವನ್ನು ತಡೆಯಲು ಈ ಹೋರಾಟ ಮಹತ್ವದ ಹೆಜ್ಜೆ” ಎಂದು ಹೇಳಿದರು.
ತುರುವೇಕೆರೆ ಕಸಬಾ ಹೋಬಳಿಯ ತಾಳೆಕೆರೆ ಗ್ರಾಮದ ದಲಿತ ಸಮುದಾಯದ ಚಂದ್ರಯ್ಯ, ಕೃಷ್ಣಪ್ಪ, ನಾಗರಾಜು ಮತ್ತು ಆನಂದ ಅವರು ತಮ್ಮ ಸುಮಾರು 4.14 ಎಕರೆ ಜಮೀನನ್ನು ಅಡಮಾನವಿಟ್ಟು 2005ರಲ್ಲಿ ಟ್ರ್ಯಾಕ್ಟರ್ ಹಾಗೂ ಬೆಳೆ ಸಾಲ ಪಡೆದಿದ್ದರು. ಹಲವು ಕಂತುಗಳನ್ನು ಪಾವತಿಸಿದ್ದರೂ, ಕುಟುಂಬದ ಹಿರಿಯರ ಸಾವು ಮತ್ತು ಬರದಿಂದಾಗಿ 2013ರ ನಂತರ ಕಂತು ಕಟ್ಟಲು ಸಾಧ್ಯವಾಗಿರಲಿಲ್ಲ.

ಬ್ಯಾಂಕ್ ₹11.58 ಲಕ್ಷಕ್ಕೆ ಟ್ರಿಬ್ಯುನಲ್‌ನಿಂದ ಡಿಕ್ರಿ ಪಡೆದು ಸುಮಾರು ಒಂಬತ್ತು ವರ್ಷ ಯಾವುದೇ ಕ್ರಮ ಕೈಗೊಳ್ಳದೆ, 2024ರಲ್ಲಿ ಆನ್‌ಲೈನ್ ಬಿಡ್ ಮೂಲಕ ಭೂಮಿಯನ್ನು ₹34.80 ಲಕ್ಷಕ್ಕೆ ಹರಾಜು ಮಾಡಿದೆ. ಈ ಬಗ್ಗೆ ಮಾಲೀಕರಿಗೆ ಮಾಹಿತಿ ನೀಡಿಲ್ಲ ಮತ್ತು ಸಾಲ ಬಾಕಿ ಕಳೆದು ಉಳಿದ ಹಣವನ್ನೂ ಕುಟುಂಬಕ್ಕೆ ನೀಡಿಲ್ಲ ಎಂದು ಅವರು ಆರೋಪಿಸಿದರು.
ರೈತ ಮುಖಂಡರೊಂದಿಗೆ ಬ್ಯಾಂಕ್ ಅಧಿಕಾರಿಗಳು ಮಾಡಿಕೊಂಡ ದ್ವಿಪಕ್ಷೀಯ ಒಪ್ಪಂದದಂತೆ ₹9 ಲಕ್ಷ ಪಾವತಿಸಲು ಕುಟುಂಬ ಒಪ್ಪಿ, ₹5 ಲಕ್ಷದ ಡಿಡಿಯನ್ನೂ ನೀಡಿತ್ತು. ಆದರೂ ಭೂಮಿಯನ್ನು ಹಿಂದಿರುಗಿಸದೆ ಬಿಡ್ಡುದಾರರಿಗೆ ಸ್ವಾಧೀನ ನೀಡಲು ಬ್ಯಾಂಕ್ ಮುಂದಾಗಿದೆ ಎಂದು ಹೇಳಿದರು. ₹9 ಲಕ್ಷ ಮರುಪಾವತಿ ಪಡೆದು ಭೂಮಿ ಹಸ್ತಾಂತರಿಸಬೇಕು, ಇ-ಹರಾಜು ರದ್ದುಪಡಿಸಿ ಹಿಂದಿನಂತೆ ಬಹಿರಂಗ ಹರಾಜು ಜಾರಿಗೆ ತರಬೇಕು ಹಾಗೂ ಲೀಡ್ ಬ್ಯಾಂಕ್ ರೈತ ಹೋರಾಟಗಾರರೊಂದಿಗೆ ಮಾತುಕತೆ ನಡೆಸಿ ಅನ್ಯಾಯ ಸರಿಪಡಿಸಬೇಕು ಎಂಬುದು ಸಂಘದ ಒತ್ತಾಯ.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಸಿ. ಶಂಕರಪ್ಪ ಮಾತನಾಡಿ, ರಾಜ್ಯದಲ್ಲಿ ಬರಗಾಲ ತಾಂಡವವಾಡುತ್ತಿದ್ದು ಶೇ. 90ರಷ್ಟು ಬೆಳೆ ನಾಶವಾಗಿದೆ. ಜನ-ಜಾನುವಾರುಗಳಿಗೆ ಕುಡಿಯುವ ನೀರು, ಮೇವಿನ ಕೊರತೆ ಉಂಟಾಗಿದೆ. ಸರ್ಕಾರ ಕೂಡಲೇ ರೈತರ ಸಾಲ ಮನ್ನಾ ಮಾಡಿ, ಎಕರೆಗೆ ನಿಗದಿತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ತುಮಕೂರು ತಾಲೂಕು ಅಧ್ಯಕ್ಷ ಚಿಕ್ಕಬೋರೇಗೌಡ ಮಾತನಾಡಿ, ಜಿಲ್ಲೆಯ ಎಲ್ಲಾ ತಾಲೂಕುಗಳಿಂದ 2 ಸಾವಿರಕ್ಕೂ ಅಧಿಕ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಪ್ರತಿಭಟನೆಯಲ್ಲಿ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ, ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ್, ಕಾರ್ಯಾಧ್ಯಕ್ಷರಾದ ಜೆ.ಎಂ. ವೀರಸಂಗಯ್ಯ, ಎ. ಗೋವಿಂದರಾಜು, ರಾಜ್ಯ ಕಾರ್ಯದರ್ಶಿಗಳಾದ ವಸಂತಕುಮಾರ್, ರವಿಕಿರಣ್ ಪುಣಚ್ಚ, ಗೋಪಾಲ್ ಪಾಪೇಗೌಡ ಸೇರಿದಂತೆ ರಾಜ್ಯ ಉಪಾಧ್ಯಕ್ಷರು, ಮಹಿಳಾ ಘಟಕದ ಅಧ್ಯಕ್ಷರು, ವಿಭಾಗೀಯ ಮುಖಂಡರು ಹಾಗೂ ಜಿಲ್ಲೆಯ ಎಲ್ಲಾ ತಾಲೂಕು ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ತುರುವೇಕೆರೆ ತಾಲೂಕು ಅಧ್ಯಕ್ಷ ಶ್ರೀನಿವಾಸಗೌಡ, ಯುವ ಘಟಕದ ಮಂಜುನಾಥ್, ಲೋಕೇಶ್, ಸಿದ್ದಗಂಗಣ್ಣ, ಉದಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.




