‘ಶಾಲಾ ಅಭಿವೃದ್ಧಿ’ಯ ಆಕರ್ಷಕ ನೆಪವೊಡ್ಡಿ ರಾಜ್ಯದ ಸರ್ಕಾರಿ ಶಾಲೆಗಳನ್ನು ಖಾಸಗಿ ಕಾರ್ಪೊರೇಟ್ ಸಂಸ್ಥೆಗಳು, ಸಿಎಸ್‌ಆರ್ (CSR) ನಿಧಿಗಳು ಹಾಗೂ ಪ್ರಭಾವಿ ವ್ಯಕ್ತಿಗಳ ಸುಪರ್ದಿಗೆ ಒಪ್ಪಿಸಲು ಮುಂದಾಗಿರುವ ರಾಜ್ಯ ಸರ್ಕಾರದ ನಡೆಯನ್ನು ‘ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ’ (SIO) ಕರ್ನಾಟಕ ಶಾಖೆಯು ತೀವ್ರವಾಗಿ ಖಂಡಿಸಿದೆ.
ಶಿಕ್ಷಣವು ಪ್ರತಿಯೊಬ್ಬ ನಾಗರಿಕನ ಸಾಂವಿಧಾನಿಕ ಮೂಲಭೂತ ಹಕ್ಕಾಗಿದ್ದು, ಸಾರ್ವಜನಿಕ ಶಿಕ್ಷಣ ಸಂಸ್ಥೆಗಳ ಒಡೆತನ, ಆಡಳಿತ ಮತ್ತು ನಿರ್ವಹಣೆಯ ಜವಾಬ್ದಾರಿ ಕಡ್ಡಾಯವಾಗಿ ಸರ್ಕಾರದ ಬಳಿಯೇ ಇರಬೇಕು. ಬಡ, ದಲಿತ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಲಕ್ಷಾಂತರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಏಕೈಕ ಆಶಾಕಿರಣ ಸರ್ಕಾರಿ ಶಾಲೆಗಳು. ಇಂತಹ ಸಾರ್ವಜನಿಕ ಆಸ್ತಿಯನ್ನು ಖಾಸಗಿಯವರ ಕೈಗಿಡುವುದು ಅಸಹಾಯಕ ಸಮುದಾಯಗಳ ಶಿಕ್ಷಣದ ಹಕ್ಕನ್ನು ಕಸಿದುಕೊಂಡಂತೆ. ಇದು ಸಮಾಜದಲ್ಲಿ ಶೈಕ್ಷಣಿಕ ಅಸಮಾನತೆಯನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದು ಸಂಘಟನೆ ಕಳವಳ ವ್ಯಕ್ತಪಡಿಸಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರದ ಇಬ್ಬಗೆಯ ನೀತಿಯನ್ನು ತೀವ್ರವಾಗಿ ಟೀಕಿಸಿರುವ ಎಸ್‌ಐಒ, “ರಾಷ್ಟ್ರಮಟ್ಟದಲ್ಲಿ ‘ಸಂವಿಧಾನ ಉಳಿಸಿ’ ಎಂದು ಘೋಷಣೆ ಕೂಗುವ ಕಾಂಗ್ರೆಸ್ ಪಕ್ಷ, ತಾನು ಅಧಿಕಾರದಲ್ಲಿರುವ ಕರ್ನಾಟಕದಲ್ಲಿ 2010ರ ಶಿಕ್ಷಣ ಹಕ್ಕು (RTE) ಕಾಯ್ದೆಯ ಆಶಯಗಳನ್ನು ಹಳ್ಳಹಿಡಿಸಲು ಹೊರಟಿರುವುದು ವಿಪರ್ಯಾಸ. ತನ್ನ ಕರ್ತವ್ಯವನ್ನು ಖಾಸಗಿಯವರಿಗೆ ಹೊರಗುತ್ತಿಗೆ ನೀಡುವ ಹುನ್ನಾರ ಬಿಟ್ಟು, ಸಂವಿಧಾನದ ಆಶಯದಂತೆ ಮಕ್ಕಳಿಗೆ ಉಚಿತ ಹಾಗೂ ಗುಣಮಟ್ಟದ ಶಿಕ್ಷಣವನ್ನು ಖಾತ್ರಿಪಡಿಸುವುದು ಸರ್ಕಾರದ ಮೊದಲ ಆದ್ಯತೆಯಾಗಬೇಕು” ಎಂದು ಎಚ್ಚರಿಸಿದೆ.
ಶಾಲೆಗಳ ಖಾಸಗೀಕರಣದಂತಹ ಶಾರ್ಟ್‌ಕಟ್‌ಗಳ ಬದಲು ಸರ್ಕಾರ ಮೂಲಭೂತ ಸಮಸ್ಯೆಗಳತ್ತ ಗಮನಹರಿಸಬೇಕು. ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಪ್ರಸ್ತುತ 40,000ಕ್ಕೂ ಹೆಚ್ಚು ಶಿಕ್ಷಕರ ಹುದ್ದೆಗಳು ಖಾಲಿ ಬಿದ್ದಿವೆ. ಈ ಬಹುದಿನಗಳ ಕೊರತೆ ನೀಗಿಸಲು ಕೂಡಲೇ ಯುದ್ಧೋಪಾದಿಯಲ್ಲಿ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು. ಕೇವಲ ಖಾಸಗಿಯವರ ದಾನ-ಧರ್ಮವನ್ನು ನೆಚ್ಚಿಕೊಳ್ಳದೆ, ಕೊಠಾರಿ ಆಯೋಗದ ಶಿಫಾರಸಿನಂತೆ ಜಿಡಿಪಿಯ ಶೇ 6ರಷ್ಟು ಅನುದಾನವನ್ನು ಶಿಕ್ಷಣ ಕ್ಷೇತ್ರಕ್ಕೆ ಮೀಸಲಿಡಲು ದಿಟ್ಟ ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.





