ಕನ್ನಡ ಭಾಷೆಯ ಬೆಳವಣಿಗೆಗೆ ಜಾತಿ ಮತ್ತು ಧರ್ಮಗಳ ಗಡಿಗಳು ಎಂದಿಗೂ ಅಡ್ಡಿಯಾಗಿಲ್ಲ. ಪಂಪ, ರನ್ನ, ಜನ್ನ ಮೊದಲಾದವರು ಜೈನ ಧರ್ಮದವರಾಗಿದ್ದರೂ ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಇದು ಕನ್ನಡ ಭಾಷೆಯ ಸಾರ್ವತ್ರಿಕತೆ ಹಾಗೂ ಶ್ರೀಮಂತ ಪರಂಪರೆಗೆ ಸಾಕ್ಷಿಯಾಗಿದೆ ಎಂದು ಕರ್ನಾಟಕ ಕಲಾಶ್ರೀ ಹಾಗೂ ಶಿಶುನಾಳ ಷರೀಫ್ ಪ್ರಶಸ್ತಿ ಪುರಸ್ಕೃತ ಪ್ರೊ. ಎಸ್. ಮಲ್ಲಣ್ಣ ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದ ಕಲಾ ಕಾಲೇಜಿನಲ್ಲಿ ನ.14ರಂದು ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ಕೇವಲ ಸಂವಹನದ ಭಾಷೆಯಲ್ಲ. ಅದು ನಮ್ಮ ಬದುಕಿನ ಅಸ್ಮಿತೆ, ಸಂಸ್ಕೃತಿ ಮತ್ತು ಭಾವನೆಗಳ ಪ್ರತಿಬಿಂಬವಾಗಿದೆ. ಇತರ ಭಾಷೆಗಳನ್ನು ಕಲಿತು ಗೌರವಿಸುವ ನಾವು, ಕನ್ನಡವನ್ನು ಇತರರಿಗೆ ಕಲಿಸುವ ಪ್ರಯತ್ನವನ್ನೂ ಮಾಡಬೇಕು. ವಿಶೇಷವಾಗಿ ಮಕ್ಕಳಿಗೆ ಕನ್ನಡ ಕಲಿಸುವ ಜವಾಬ್ದಾರಿಯಿಂದ ಹಿಂದೆ ಸರಿಯಬಾರದು ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಂಪರೆಯಲ್ಲಿ ವಚನಕಾರರು ಮತ್ತು ದಾಸರು ಮಹತ್ವದ ಸಾಮಾಜಿಕ ಬದಲಾವಣೆಗೆ ಕಾರಣರಾಗಿದ್ದಾರೆ. ಬಸವಣ್ಣನವರ ವಚನಗಳು ಸಮಾನತೆ, ಕಾಯಕ, ದಾಸೋಹ ಮತ್ತು ಮಾನವೀಯ ಮೌಲ್ಯಗಳನ್ನು ಸಾರಿದರೆ, ಅಕ್ಕಮಹಾದೇವಿಯವರ ವಚನಗಳು ಮಹಿಳಾ ಸ್ವಾತಂತ್ರ್ಯ ಹಾಗೂ ಸ್ವಾಭಿಮಾನದ ಧ್ವನಿಯಾಗಿವೆ. ಕನಕದಾಸರು ಮತ್ತು ಪುರಂದರದಾಸರು ತಮ್ಮ ಕೀರ್ತನೆಗಳ ಮೂಲಕ ಸಾಮಾಜಿಕ ಸಮಾನತೆಯ ಸಂದೇಶವನ್ನು ಸಾರಿದ್ದಾರೆ ಎಂದರು.
ಕನ್ನಡದ ಬೆಳವಣಿಗೆಗೆ ಸಾಹಿತ್ಯದಷ್ಟೇ ಸಂಗೀತ, ನಾಟಕ ಮತ್ತು ಜನಪದ ಕಲೆಗಳ ಕೊಡುಗೆಯೂ ಮಹತ್ವದ್ದಾಗಿದೆ. ಕನ್ನಡ ಕೃತಕ ಭಾಷೆಯಾಗದೆ ಜನರು ದಿನನಿತ್ಯ ಬಳಸುವ ಸಹಜ ಭಾಷೆಯಾಗಬೇಕು. ವಿಶ್ವವಿದ್ಯಾಲಯಗಳ ನಾಲ್ಕು ಗೋಡೆಗಳಿಗೆ ಕನ್ನಡವನ್ನು ಸೀಮಿತಗೊಳಿಸದೆ ಜನರ ಬದುಕಿನ ಅವಿಭಾಜ್ಯ ಭಾಗವಾಗಿಸಬೇಕು ಎಂದು ಅಭಿಪ್ರಾಯಪಟ್ಟರು.
ತುಮಕೂರು ವಿಶ್ವವಿದ್ಯಾನಿಲಯದ ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಡಾ. ನಾಗಭೂಷಣ ಬಗ್ಗನಡು ಮಾತನಾಡಿ, ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆಯ ಬಗ್ಗೆ ಇಂದಿನ ಯುವಜನರಲ್ಲಿ ಅರಿವು ಮೂಡಿಸುವ ಅಗತ್ಯವಿದೆ. ಕನ್ನಡ ಭಾಷೆ ಮತ್ತು ಇತಿಹಾಸದ ಬಗ್ಗೆ ಯುವಜನರು ಜಾಗೃತರಾಗಬೇಕು. ಪರರ ವಿಚಾರ ಮತ್ತು ಧರ್ಮಗಳನ್ನು ಗೌರವಿಸುವ ವಿಶಾಲ ಮನೋಭಾವ ಕನ್ನಡ ಸಂಸ್ಕೃತಿಯ ಶಕ್ತಿಯಾಗಿದ್ದು, ಎಲ್ಲ ಸಮುದಾಯಗಳ ಕೊಡುಗೆಯಿಂದ ಕನ್ನಡ ಭಾಷೆ ಬೆಳೆದು ಬಂದಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಲಾ ಕಾಲೇಜಿನ ಪ್ರಾಂಶುಪಾಲರಾದ ಡಾ. ದಾಕ್ಷಾಯಣಿ ಜಿ. ಮಾತನಾಡಿ, ಕನ್ನಡಿಗರು ತಮ್ಮ ನೆಲದ ಇತಿಹಾಸ, ಬೇರು ಮತ್ತು ಅಸ್ತಿತ್ವವನ್ನು ಮರೆಯಬಾರದು. ಕನ್ನಡ ಉಳಿಸುವುದು ಸಾಹಿತ್ಯ ರಚನೆಗೆ ಮಾತ್ರ ಸೀಮಿತವಲ್ಲ. ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳುವ ಮೂಲಕವೂ ಭಾಷೆಯ ಬೆಳವಣಿಗೆಗೆ ಕೊಡುಗೆ ನೀಡಬಹುದು. ವಿದ್ಯಾರ್ಥಿಗಳು ಕನ್ನಡದ ಉಳಿವು ಮತ್ತು ಬೆಳವಣಿಗೆಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಗಾಯಕ ದಿಬ್ಬೂರು ಮಂಜಣ್ಣ ಗೀತೆಗಳನ್ನು ಹಾಡಿದರು. ಸಾಂಸ್ಕೃತಿಕ ಚಟುವಟಿಕೆಗಳ ಘಟಕದ ಸಂಚಾಲಕ ಡಾ. ಎಸ್. ಶಿವಣ್ಣ ಬೆಳವಾಡಿ ಸ್ವಾಗತಿಸಿದರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಅಧ್ಯಕ್ಷ ಸಿಬಂತಿ ಪದ್ಮನಾಭ ಕೆ.ವಿ. ನಿರೂಪಿಸಿದರು.
ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಸುದೀಪ್ ಕುಮಾರ್ ಆರ್., ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಹೆಚ್.ಆರ್. ರೇಣುಕಾ, ರಾಜ್ಯಶಾಸ್ತ್ರ ವಿಭಾಗದ ಡಾ. ಶ್ರೀಪಾದ ಕುಲಕರ್ಣಿ ಹಾಗೂ ಇತಿಹಾಸ ವಿಭಾಗದ ಟಿ.ಎನ್. ಹರಿಪ್ರಸಾದ್ ಉಪಸ್ಥಿತರಿದ್ದರು.



