ಚಿರತೆ ಸೆರೆಹಿಡಿಯುವಲ್ಲಿ ನಿರ್ಲಕ್ಷ್ಯ ತೋರಿದ ಹಾಗೂ ಗ್ರಾಮಸ್ಥರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ, ತುಮಕೂರು ತಾಲೂಕಿನ ಹೆಬ್ಬೂರು ಹೋಬಳಿಯ ತಿಮ್ಮಸಂದ್ರ ಹಾಗೂ ಸುತ್ತಮುತ್ತಲ ಗ್ರಾಮಗಳ 150ಕ್ಕೂ ಹೆಚ್ಚು ಗ್ರಾಮಸ್ಥರು ಸೋಮವಾರ ಹೆಬ್ಬೂರು ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು. ಅರಣ್ಯಾಧಿಕಾರಿಗಳ ವಿರುದ್ಧ ಪ್ರತಿದೂರು ಸಲ್ಲಿಸಿ, ಎಫ್‌ಐಆರ್ ದಾಖಲಿಸುವಂತೆ ಆಗ್ರಹಿಸಿದರು.
ತಿಮ್ಮಸಂದ್ರ ಗ್ರಾಮದಲ್ಲಿ ಅಕ್ಟೋಬರ್ 22ರಂದು ಬೆಳಗಿನ ಜಾವ 5 ಗಂಟೆ ಸುಮಾರಿಗೆ ಚಿರತೆ ಕಾಣಿಸಿಕೊಂಡಿತ್ತು. ಆತಂಕಗೊಂಡ ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಆದರೆ, ಬೆಳಗ್ಗೆ 8 ಗಂಟೆಗೆ ಸ್ಥಳಕ್ಕೆ ಬಂದ ಅಧಿಕಾರಿಗಳು ಚಿರತೆ ಸೆರೆಗೆ ಅಗತ್ಯ ಪರಿಕರಗಳನ್ನು ತಂದಿರಲಿಲ್ಲ. ಚಿರತೆಯನ್ನು ಸೆರೆಹಿಡಿಯುವ ಬದಲು ಗಲಾಟೆ ಮಾಡಿ ಓಡಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು.
ಚಿರತೆಯನ್ನು ಸೆರೆಹಿಡಿದು ಗ್ರಾಮದಿಂದ ದೂರಕ್ಕೆ ಸಾಗಿಸುವಂತೆ ಒತ್ತಾಯಿಸಿದಾಗ, ಅರಣ್ಯಾಧಿಕಾರಿಗಳು ಮಹಿಳೆಯರು ಸೇರಿದಂತೆ ಗ್ರಾಮಸ್ಥರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂಬುದು ಪ್ರತಿಭಟನಾಕಾರರ ಆರೋಪ.
ಇದೇ ವೇಳೆ, ಅರಣ್ಯ ಇಲಾಖೆಯ ಡಾ. ಪ್ರಯಾಗ್ ನೀಡಿದ ದೂರಿನ ಆಧಾರದ ಮೇಲೆ ತಿಮ್ಮಸಂದ್ರದ 15 ರೈತರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ರೈತರ ವಿರುದ್ಧ ಪ್ರಕರಣ ದಾಖಲಿಸಿರುವ ಪೊಲೀಸರು, ಅರಣ್ಯಾಧಿಕಾರಿಗಳ ವಿರುದ್ಧದ ದೂರನ್ನೂ ಪರಿಗಣಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಅರಣ್ಯ ಇಲಾಖೆಯ ಡಾ. ಪ್ರಯಾಗ್ ಸೇರಿದಂತೆ ಎಸಿಎಫ್ ಮತ್ತು ಆರ್‌ಎಫ್‌ಒ ಅವರನ್ನು ಅಮಾನತುಗೊಳಿಸಿ, ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ನಾಳೆಯೊಳಗೆ ಅರಣ್ಯಾಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸದಿದ್ದರೆ ನಾಗವಲ್ಲಿಯಲ್ಲಿ ಬೃಹತ್ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಹೆತ್ತೇನಹಳ್ಳಿ ಮಂಜುನಾಥ್, ಕಾಡುಪ್ರಾಣಿಗಳಿಂದ ಜನರಿಗೆ ರಕ್ಷಣೆ ಒದಗಿಸುವುದು ಅರಣ್ಯ ಇಲಾಖೆಯ ಕರ್ತವ್ಯ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾಡುಪ್ರಾಣಿಗಳು ರೈತರ ಜಮೀನುಗಳಿಗೆ ಬರುತ್ತಿದ್ದು, ಅವುಗಳನ್ನು ಸೆರೆಹಿಡಿಯುವ ಬದಲು ರೈತರ ವಿರುದ್ಧವೇ ದೂರು ನೀಡಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಪ್ರಕರಣದಲ್ಲಿ ಲೋಪ ಎಸಗಿರುವ ಅಧಿಕಾರಿಗಳನ್ನು ಅಮಾನತುಗೊಳಿಸಿ ತನಿಖೆ ನಡೆಸಬೇಕು ಹಾಗೂ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಹೆಬ್ಬೂರು ರಾಜೇಶ್, ಚಿಕ್ಕಣ್ಣ, ವೈ.ಟಿ. ನಾಗರಾಜ್, ಮಲ್ಲೇಶ್, ಗಿರೀಶ್, ಮಂಜು, ವಿನೋದ್, ಮಂಜುನಾಥ್, ಕಿರಣ್, ಕಾಂತರಾಜು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.






