ತುಮಕೂರು ಜಿಲ್ಲೆಯ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಚಿಕ್ಕತೊಟ್ಲು ಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹೀರೆತೊಟ್ಲು ಗ್ರಾಮದಲ್ಲಿ ಕಳೆದ ಎರಡು ವರ್ಷಗಳಿಂದ ಮುಂದುವರಿದಿದ್ದ ಕುಡಿಯುವ ನೀರಿನ ಸಮಸ್ಯೆಯನ್ನು ಕುರಿತು ಈದಿನ.ಕಾಮ್ ಭಾನುವಾರ ಪ್ರಕಟಿಸಿದ ಸುದ್ದಿಗೆ ಅಧಿಕಾರಿಗಳು ಸ್ಪಂದಿಸಿದ್ದಾರೆ.
ಈದಿನ.ಕಾಮ್ ʼಡಿಸಿಎಂ ಕ್ಷೇತ್ರದಲ್ಲಿ ಕುಡಿಯುವ ನೀರಿಗಾಗಿ ಪರದಾಟʼ ಎಂಬ ತಲೆಬರಹದಡಿ ಸುದ್ದಿ ಪ್ರಕಟಿಸಿದ್ದು, ಗ್ರಾಮಕ್ಕೆ ನೀರು ಪೂರೈಸುವ ಬೋರ್‌ವೆಲ್ ತಿಂಗಳಿಗೆ ಸರಾಸರಿ ಎರಡು ಬಾರಿ ಕೆಟ್ಟು ಹೋಗುತ್ತಿರುವುದರಿಂದ ದಿನಗಟ್ಟಲೆ ಕುಡಿಯುವ ನೀರಿಗಾಗಿ ಜನರು ಪರದಾಡುವ ಪರಿಸ್ಥಿತಿ, ಕೊಳವೆಬಾವಿ ದುರಸ್ತಿಗೆ ವಿಳಂಬವಾಗುವುದರಿಂದ ಮಹಿಳೆಯರು ಹಾಗೂ ವೃದ್ಧರು ದೂರದ ಪ್ರದೇಶಗಳಿಂದ ನೀರು ತಂದುಕೊಳ್ಳಬೇಕಾದ ಸಮಸ್ಯೆಯ ಕುರಿತು ಈ ಸುದ್ದಿ ಬೆಳಕು ಚೆಲ್ಲಿತ್ತು.
ಸುದ್ದಿ ಪ್ರಕಟವಾದ ಬೆನ್ನಲ್ಲೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ರಾತ್ರೋರಾತ್ರಿ ಟ್ಯಾಂಕರ್ ಮೂಲಕ ಗ್ರಾಮಕ್ಕೆ ಕುಡಿಯುವ ನೀರು ಪೂರೈಸುವ ವ್ಯವಸ್ಥೆ ಮಾಡಿದ್ದಾರೆ. ನೀರಿನ ತೀವ್ರ ಕೊರತೆಯಿಂದ ಸಂಕಷ್ಟ ಅನುಭವಿಸುತ್ತಿದ್ದ ಗ್ರಾಮಸ್ಥರು ಟ್ಯಾಂಕರ್ ಬಂದ ತಕ್ಷಣ ಸಂತೋಷದಿಂದ ನೀರನ್ನು ಸಂಗ್ರಹಿಸಿಕೊಂಡರು.
ಈ ಕುರಿತು ಈದಿನ.ಕಾಮ್ ಜೊತೆ ಮಾತನಾಡಿದ ಗ್ರಾಮಸ್ಥ ನರಸಿಂಹಮೂರ್ತಿ “ನಮ್ಮ ಗ್ರಾಮದ ನೀರಿನ ಸಮಸ್ಯೆಯನ್ನು ಸುದ್ದಿ ಮೂಲಕ ಬೆಳಕಿಗೆ ತಂದ ನಂತರ ಅಧಿಕಾರಿಗಳು ರಾತ್ರೋರಾತ್ರಿ ಟ್ಯಾಂಕರ್ ಮೂಲಕ ನೀರು ಪೂರೈಸಿದ್ದಾರೆ. ಇದರಿಂದ ನಮಗೆ ತಾತ್ಕಾಲಿಕವಾಗಿ ಬಹಳ ನೆರವಾಗಿದೆ. ಅಧಿಕಾರಿಗಳು ಸ್ಪಂದಿಸಿರುವುದಕ್ಕೆ ನಾವು ಸಂತೋಷವಿದೆ. ಆದರೆ, ಟ್ಯಾಂಕರ್ ಮೂಲಕ ನೀರು ನೀಡುವುದು ಶಾಶ್ವತ ಪರಿಹಾರವಲ್ಲ. ಕಳೆದ ಎರಡು ವರ್ಷಗಳಿಂದ ಅನುಭವಿಸುತ್ತಿರುವ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಪದೇ ಪದೇ ಕೆಡುವ ಬೋರ್‌ವೆಲ್ ದುರಸ್ತಿ ಮಾಡುವ ಬದಲು ಹೊಸ ವ್ಯವಸ್ಥೆ ಮಾಡಬೇಕು. ಮುಂದಿನ ದಿನಗಳಲ್ಲಿ ಯಾವುದೇ ಬಡಾವಣೆ, ವಿಶೇಷವಾಗಿ ದಲಿತ ಬಡಾವಣೆಗಳು, ನೀರಿನ ಸಮಸ್ಯೆ ಎದುರಿಸದಂತೆ ಕ್ರಮ ಕೈಗೊಳ್ಳಬೇಕು.” ಎಂದು ಆಗ್ರಹಿಸಿದ್ದಾರೆ.
ಗ್ರಾಮಸ್ಥರು ತಾತ್ಕಾಲಿಕವಾಗಿ ನೀರು ಪೂರೈಸಿರುವುದಕ್ಕೆ ಅಧಿಕಾರಿಗಳಿಗೆ ಧನ್ಯವಾದ ತಿಳಿಸಿದರೂ, “ಟ್ಯಾಂಕರ್ ನೀರು ಶಾಶ್ವತ ಪರಿಹಾರವಲ್ಲ ಎಂದು ಅಭಿಪ್ರಾಯಪಟ್ಟಿದ್ದು, ಪದೇ ಪದೆ ಬೋರ್‌ವೆಲ್ ಕೆಡುವ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಿ, ಎಲ್ಲ ಬಡಾವಣೆಗಳಿಗೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆ ಆಗುವಂತೆ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದ್ದಾರೆ.
ಸುದ್ದಿಯ ಪರಿಣಾಮವಾಗಿ ಅಧಿಕಾರಿಗಳು ತ್ವರಿತವಾಗಿ ಸ್ಪಂದಿಸಿರುವುದು ಗ್ರಾಮಸ್ಥರಲ್ಲಿ ಆಶಾಭಾವನೆ ಮೂಡಿಸಿದೆ. ಆದರೆ ಮುಂದಿನ ದಿನಗಳಲ್ಲಿ ಇಂತಹ ಸಮಸ್ಯೆ ಮರುಕಳಿಸದಂತೆ ಶಾಶ್ವತ ನೀರಿನ ವ್ಯವಸ್ಥೆ ಕಲ್ಪಿಸುವುದು ಅತ್ಯಗತ್ಯವಾಗಿದೆ.




