ಕರ್ನಾಟಕ ಉಪ ಲೋಕಾಯುಕ್ತ ನ್ಯಾಯಮೂರ್ತಿಗಳಾದ ಬಿ. ವೀರಪ್ಪ ಅವರು ಫೆಬ್ರವರಿ 26 ಮತ್ತು 27ರಂದು ಉಡುಪಿ ಜಿಲ್ಲೆಯಲ್ಲಿ ಬಾಕಿ ಇರುವ ದೂರು ಪ್ರಕರಣಗಳನ್ನು ಇತ್ಯರ್ಥಪಡಿಸಲು ಹಾಗೂ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಲು ಶಿಬಿರ ಹಮ್ಮಿಕೊಂಡಿದ್ದರು. ಈ ಅವಧಿಯಲ್ಲಿ ಅವರು ಜಿಲ್ಲೆಯ ವಿವಿಧ ಸರ್ಕಾರಿ ಕಚೇರಿಗಳು ಮತ್ತು ಇಲಾಖೆಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಹಲವೆಡೆ ಕರ್ತವ್ಯ ಲೋಪಗಳು ಕಂಡುಬಂದ ಹಿನ್ನೆಲೆ, ವಿವಿಧ ಅಧಿಕಾರಿಗಳ ವಿರುದ್ಧ ಒಟ್ಟು 17 ಸ್ವಯಂ ಪ್ರೇರಿತ ಪ್ರಕರಣಗಳನ್ನು ದಾಖಲಿಸಲಾಗಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯದ ಅವಧಿಯಲ್ಲಿ ಅನುಮತಿ ಪಡೆಯದೇ ಸಿಬ್ಬಂದಿಗಳು ಹೊರಗಡೆಯಾಗಿರುವುದು, ಅಧಿಕಾರಿಗಳು ಅಗತ್ಯ ದಾಖಲೆಗಳನ್ನು ನೀಡಲು ವಿಫಲರಾಗಿರುವುದು, ಸಿಬ್ಬಂದಿಗಳು ಗುರುತಿನ ಚೀಟಿ ಧರಿಸದಿರುವುದು ಹಾಗೂ ಹಾಜರಾತಿ, ನಗದು ಮತ್ತು ಚಲನವಲನ ವಹಿಗಳನ್ನು ಸರಿಯಾಗಿ ನಿರ್ವಹಿಸದಿರುವುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಸಂಬಂಧಿತ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಕಳೆದ ಎರಡು ವರ್ಷಗಳ ಯೋಜನೆಗಳು ಮತ್ತು ಅನುದಾನಗಳ ಕುರಿತು ಕೇಳಿದ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡದಿರುವುದು ಕಂಡುಬಂದಿದೆ. ಸಮಾಜ ಕಲ್ಯಾಣ ಇಲಾಖೆಯಲ್ಲಿ ಹಾಸ್ಟೆಲ್‌ಗಳ ಸ್ವಚ್ಛತೆ, ವಿದ್ಯಾರ್ಥಿಗಳಿಗೆ ನೀಡುವ ಆಹಾರ, ಕುಡಿಯುವ ನೀರು ಮತ್ತು ಆರೋಗ್ಯ ತಪಾಸಣೆ ಕುರಿತ ವಿವರಗಳನ್ನು ನೀಡಲು ವಿಫಲರಾದ ಹಿನ್ನೆಲೆಯಲ್ಲಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಕ್ವಾರಿಗಳು, ಕ್ರಷರ್‌ಗಳು, ಪರವಾನಗಿ ಉಲ್ಲಂಘನೆಗಳು ಹಾಗೂ ಕಾರ್ಮಿಕರ ವಿಮೆ ಕುರಿತು ಮಾಹಿತಿ ನೀಡದಿರುವುದು ಬೆಳಕಿಗೆ ಬಂದಿದೆ. ತೆಂಕನಿಡಿಯೂರು ಪೊಟ್ಟು ಕೆರೆಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ನಗರಸಭೆ ಅಧಿಕಾರಿಗಳ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.
ಮಣಿಪಾಲ ಪೊಲೀಸ್ ಠಾಣೆಯಲ್ಲಿ ಡ್ರಗ್ಸ್ ವಿರುದ್ಧ ಕ್ರಮ ಕೈಗೊಳ್ಳದಿರುವುದು ಹಾಗೂ ನಿಟ್ಟೂರು ಕೊಳಚೆ ನೀರು ಶುದ್ಧೀಕರಣ ಘಟಕದಲ್ಲಿ ಮಾಲಿನ್ಯ ಸಮಸ್ಯೆಗಳನ್ನು ನಿಯಂತ್ರಿಸಲು ವಿಫಲವಾದ ಬಗ್ಗೆ ಸಂಬಂಧಿತ ಅಧಿಕಾರಿಗಳ ವಿರುದ್ಧ ದೂರು ದಾಖಲಾಗಿದೆ. ಇದೇ ವೇಳೆ ಮಲ್ಪೆ ಪ್ರದೇಶದಲ್ಲಿ ಸ್ವಚ್ಛತೆ ಕೊರತೆ ಮತ್ತು ಪ್ಲಾಸ್ಟಿಕ್ ತ್ಯಾಜ್ಯ ಸಮಸ್ಯೆಗೂ ಅಧಿಕಾರಿಗಳ ನಿರ್ಲಕ್ಷ್ಯ ಕಾರಣವೆಂದು ತಿಳಿದುಬಂದಿದೆ.
ಮೀನುಗಾರಿಕೆ, ಸಾರಿಗೆ, ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಪ್ರವಾಸೋದ್ಯಮ ಇಲಾಖೆಗಳಲ್ಲಿಯೂ ಅಗತ್ಯ ಮಾಹಿತಿಗಳನ್ನು ನೀಡಲು ಅಧಿಕಾರಿಗಳು ವಿಫಲರಾಗಿದ್ದಾರೆ. ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಕಡತಗಳು ವರ್ಷಗಳಿಂದ ಬಾಕಿ ಉಳಿದಿರುವುದು ಹಾಗೂ ಇ-ಕಚೇರಿ ವ್ಯವಸ್ಥೆ ಜಾರಿಗೆ ತರದಿರುವುದು ಪತ್ತೆಯಾಗಿದೆ.
ಭೂದಾಖಲೆ ಇಲಾಖೆ, ನಗರಸಭೆ, ಜಿಲ್ಲಾ ಆಸ್ಪತ್ರೆ, ಉಪ ನೋಂದಣಿ ಕಚೇರಿ ಮತ್ತು ತಹಶೀಲ್ದಾರ್ ಕಚೇರಿಗಳಲ್ಲಿಯೂ ವಿವಿಧ ರೀತಿಯ ಆಡಳಿತ ವೈಫಲ್ಯಗಳು, ದಾಖಲೆ ನಿರ್ವಹಣೆಯ ಕೊರತೆ ಮತ್ತು ಅನಧಿಕೃತ ಚಟುವಟಿಕೆಗಳು ಕಂಡುಬಂದ ಹಿನ್ನೆಲೆಯಲ್ಲಿ ಸಂಬಂಧಿತ ಅಧಿಕಾರಿಗಳ ವಿರುದ್ಧ ಸ್ವಯಂ ಪ್ರೇರಿತವಾಗಿ ಪ್ರಕರಣಗಳನ್ನು ದಾಖಲಿಸಲಾಗಿದೆ.
ಒಟ್ಟಾರೆ, ಉಪ ಲೋಕಾಯುಕ್ತರ ದಿಢೀರ್ ಪರಿಶೀಲನೆ ವೇಳೆ ಜಿಲ್ಲೆಯ ಹಲವಾರು ಇಲಾಖೆಗಳ ಕಾರ್ಯಪದ್ಧತಿಯಲ್ಲಿ ಗಂಭೀರ ಕೊರತೆಗಳು ಬಹಿರಂಗಗೊಂಡಿದ್ದು, ಆಡಳಿತ ವ್ಯವಸ್ಥೆಗೆ ಎಚ್ಚರಿಕೆಯ ಸಂದೇಶ ನೀಡಲಾಗಿದೆ.





