ನಮ್ಮ ಹಿರಿಯರು ಮಣ್ಣಿನ ಮನೆಗಳಲ್ಲಿ, ಅಂಗಳದ ನೆರಳಿನಲ್ಲಿ ಹಾಯಾಗಿರುತ್ತಿದ್ದರು. ಅಲ್ಲಿ ಮನೆಗಳೂ ಉಸಿರಾಡುತ್ತಿದ್ದವು. ಇಂದು ನಾವು ಗಾಜಿನ ಗೂಡು ಕಟ್ಟಿಕೊಂಡು, ಉಸಿರುಗಟ್ಟಿಸಿಕೊಂಡು, ಯಂತ್ರಗಳ ಮೂಲಕ ಉಸಿರು ಹುಡುಕುತ್ತಿದ್ದೇವೆ. ನಾವು ಎಸಿಯಿಂದ ಪಡೆಯುತ್ತಿರುವ ಆ ತಂಪು ಗಾಳಿ ನಿಜಕ್ಕೂ ಉಚಿತವಾಗಿ ಸಿಗುತ್ತಿದೆಯೇ? ಖಂಡಿತ ಇಲ್ಲ. ಅದರ ಪ್ರತಿಯೊಂದು ಡಿಗ್ರಿ ತಂಪಿಗೂ ನಾವು ಈ ಭೂಮಿಯ ಭವಿಷ್ಯವನ್ನು ಅಡವಿಡುತ್ತಿದ್ದೇವೆ.
ಒಂದು ಕಡೆ ಯುದ್ಧದ ಕಿಚ್ಚು ಜಗತ್ತನ್ನು ಸುಡುತ್ತಿದ್ದರೆ, ಇನ್ನೊಂದೆಡೆ ಅತಿಯಾದ ಬಿಸಿಲು ಪ್ರಕೃತಿಯನ್ನೂ ನಮ್ಮನ್ನೂ ಬಳಲಿಸುತ್ತಿದೆ. ಬೇಸಿಗೆಯಂತೂ ಅಕ್ಷರಶಃ ಬೆಂಕಿ ಉಗುಳುತ್ತಿದೆ. ಮನೆಯಿಂದ ಹೊರಗೆ ಕಾಲಿಟ್ಟರೆ ಸಾಕು, ಸೂರ್ಯ ನಮ್ಮನ್ನು ಸುಟ್ಟು ಬೂದಿ ಮಾಡಿಯೇ ಬಿಡುತ್ತಾನೇನೋ ಎನ್ನುವಷ್ಟು ಪ್ರಖರತೆ. ಈ ಕಾಂಕ್ರೀಟ್ ರಸ್ತೆಗಳ ಮೇಲಿನ ಆ ಬಿಸಿಲ ಝಳ ನೋಡಿದರೆ ಕಣ್ಣು ಮಂಜಾಗುತ್ತದೆ. ಸಂಜೆಯ ಹೊತ್ತಿಗಂತೂ ಮನುಷ್ಯ ಬಾಡಿ ತರಗೆಲೆಯಾಗುತ್ತಾನೆ. ಈ ಉರಿ ಬಿಸಿಲಿನಲ್ಲಿ ಅತ್ತಿತ್ತ ಅಲೆದಾಡಿ ಮನೆಗೆ ಬಂದು AC ರಿಮೋಟ್‌ನ ಒಂದು ಗುಂಡಿ ಒತ್ತಿದ ಕೂಡಲೇ ಬರುವ ತಣ್ಣನೆಯ ಗಾಳಿ ಇದೆಯಲ್ಲ… ಅಬ್ಬಾ! ಅದು ನಿಜಕ್ಕೂ ಸ್ವರ್ಗದ ಅನುಭೂತಿ. ಇನ್ನು ಫ್ರಿಜ್‌ನಿಂದ ಐಸ್‌ನಂತಹ ನೀರು ತೆಗೆದು ಗಟಗಟ ಗಂಟಲಿಗೆ ಸುರಿದಾಗ ಇಡೀ ದೇಹದ ಜತೆಗೆ ಆತ್ಮವೂ ಒಂದು ಕ್ಷಣ ತಣ್ಣಗಾಗುವಂಥ ಭಾಸ. ಆದರೆ, ಈ ಸಾಧನಗಳು ಹೊರ ಹಾಕುವ ಬಿಸಿ ಗಾಳಿ ಮತ್ತು ಕೆಮಿಕಲ್‌ಗಳು ಇಡೀ ಭೂಮಿಯನ್ನು ಒಂದು ದೊಡ್ಡ ಸೌದೆ ಒಲೆಯನ್ನಾಗಿ ಮಾಡುತ್ತಿವೆ ಎಂದರೆ ನಂಬಲೇಬೇಕು. ನಾವು ಎಸಿಯೊಳಗೆ ಆರಾಮವಾಗಿದ್ದಷ್ಟೂ ಹೊರಗಿನ ಪರಿಸರ ಕಾಯುತ್ತಿರುತ್ತದೆ.
ಬೇಸಿಗೆಯ ಬಿಸಿಯಿಂದ ಪಾರಾಗಲು ನಾವು ಅವಲಂಬಿಸಿರುವ ಎಸಿ (AC) ಮತ್ತು ರೆಫ್ರಿಜರೇಟರ್‌ಗಳು ವಾಸ್ತವದಲ್ಲಿ ‘ಗ್ಲೋಬಲ್ ವಾರ್ಮಿಂಗ್’ ಎಂಬ ಮಹಾಮಾರಿಯ ಬಾಯಿಗೆ ತುಪ್ಪ ಸುರಿಯುತ್ತಿವೆ ಎಂಬುದು ಗೊತ್ತೇ? ಹೌದು! ನಾವು AC ಆನ್ ಮಾಡಿ ಕೊಠಡಿಯನ್ನು ತಂಪು ಮಾಡಿದಷ್ಟೂ, ಮನೆಯ ಹೊರಗಿನ ಪರಿಸರಕ್ಕೆ ಸಾವಿರ ಪಟ್ಟು ಹೆಚ್ಚು ಶಾಖವನ್ನು ಬಿಡುಗಡೆ ಮಾಡುತ್ತಿದ್ದೇವೆ. ಆಧುನಿಕ ಬದುಕಿನ ಅನಿವಾರ್ಯತೆಯಂತಾಗಿರುವ ಈ ತಂಪು ಯಂತ್ರಗಳು ಭೂಮಿಯ ಸರಾಸರಿ ತಾಪಮಾನವನ್ನು ಏರಿಸುತ್ತಾ, ಮನುಕುಲವನ್ನೇ ಅಪಾಯದತ್ತ ದೂಡುತ್ತಿವೆ. ಇದರ ಹಿಂದಿರುವ ಅಪಾಯಕಾರಿ ವಿಜ್ಞಾನ ಇನ್ನಷ್ಟು ಆತಂಕಕಾರಿಯಾಗಿದೆ.
ಶಾಖದ ಸ್ಥಳಾಂತರ (Heat Transfer)
ಒಂದು ಜಾಗವನ್ನು ಬಿಸಿ ಮಾಡುವುದು ಅದನ್ನು ತಂಪು ಮಾಡುವುದಕ್ಕಿಂತಲೂ ಹೆಚ್ಚು ಸರಳ ಎನ್ನುತ್ತದೆ ಭೌತಶಾಸ್ತ್ರ. ಶಕ್ತಿಯನ್ನು ಸೃಷ್ಟಿಸಲಾಗಲಿ ಅಥವಾ ನಾಶಪಡಿಸಲಾಗಲಿ ಸಾಧ್ಯವಿಲ್ಲ, ಅದನ್ನು ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಬದಲಾಯಿಸಬಹುದಷ್ಟೇ. ಎಸಿ, ಫ್ರಿಜ್ ಅಥವಾ ಯಾವುದೇ ಕೂಲಿಂಗ್ ಯಂತ್ರಗಳು ಗಾಳಿಯನ್ನು ತಂಪು ಮಾಡುವುದಿಲ್ಲ. ಬದಲಾಗಿ ‘Heat Exchangers’ ಆಗಿ ಕೆಲಸ ಮಾಡುತ್ತವೆ. ಅಂದರೆ, ಇವು ನಿಮ್ಮ ಕೊಠಡಿ ಅಥವಾ ಫ್ರಿಜ್ ಒಳಗಿನ ಬಿಸಿಯನ್ನು ಹೀರಿಕೊಂಡು ಅದನ್ನು ಹೊರಗಿನ ವಾತಾವರಣಕ್ಕೆ ಚಿಮ್ಮಿಸುತ್ತವೆ. ಈ ಪ್ರಕ್ರಿಯೆಯನ್ನು ‘Heat Rejection’ ಎನ್ನಲಾಗುತ್ತದೆ.

ACಯನ್ನು ಗಮನಿಸಿ. ಅದರಲ್ಲಿ ಎರಡು ಘಟಕಗಳಿರುತ್ತವೆ. ಮನೆಯ ಒಳಗಿರುವ ಇಂಡೋರ್ ಯುನಿಟ್ ಮತ್ತು ಹೊರಗಿರುವ ಔಟ್‌ಡೋರ್ ಯುನಿಟ್. ಮನೆಯೊಳಗಿನ ಬಿಸಿ ಗಾಳಿಯನ್ನು ಎಸಿ ಹೀರಿಕೊಳ್ಳುತ್ತದೆ ಮತ್ತು ಅದರ ಒಳಗಿರುವ ‘ರೆಫ್ರಿಜರೆಂಟ್’ (Refrigerant) ಎಂಬ ದ್ರವವು ಆ ಬಿಸಿಯನ್ನು ಹೀರಿ ಅನಿಲವಾಗಿ ಬದಲಾಗುತ್ತದೆ. ಈ ಬಿಸಿಯನ್ನು ಹೊತ್ತುಕೊಂಡು ಹೊರಹೋಗುವ ಅನಿಲವು ಔಟ್‌ಡೋರ್ ಯುನಿಟ್ ಮೂಲಕ ವಾತಾವರಣಕ್ಕೆ ಉಷ್ಣವನ್ನು ಬಿಡುಗಡೆ ಮಾಡುತ್ತದೆ. ನೀವು 1 ಟನ್ AC ಬಳಸುತ್ತಿದ್ದೀರಿ ಎಂದರೆ, ಪ್ರತಿ ಗಂಟೆಗೆ ಸುಮಾರು 12,000 BTU (British Thermal Units) ಶಾಖವನ್ನು ನಿಮ್ಮ ಮನೆಯಿಂದ ಹೊರಗಿನ ಬೀದಿಗೆ ಸುರಿಯುತ್ತಿದ್ದೀರಿ ಎಂದರ್ಥ. ನಗರಗಳಲ್ಲಿ ಸಾವಿರಾರು ಎಸಿಗಳು ಒಟ್ಟಿಗೆ ಕೆಲಸ ಮಾಡುವಾಗ ಸೃಷ್ಟಿಯಾಗುವ ಈ ಬಿಸಿಯೇ ‘Urban Heat Island Effect’.
ರೆಫ್ರಿಜರೆಂಟ್ ಅನಿಲಗಳು
ಮೇಲೆ ಹೇಳಿದಂತೆ, ಎಸಿ ಮತ್ತು ಫ್ರಿಜ್‌ಗಳ ಒಳಗೆ ಉಷ್ಣವನ್ನು ವರ್ಗಾಯಿಸಲು ಈ ‘ರೆಫ್ರಿಜರೆಂಟ್’ ಎನ್ನುವ ದ್ರವ ಕೆಲಸ ಮಾಡುತ್ತದೆ. ಹಿಂದೆ ಇವುಗಳ ಜಾಗದಲ್ಲಿ CFC (Chlorofluorocarbons) ಎಂಬ ಅನಿಲಗಳನ್ನು ಬಳಸಲಾಗುತ್ತಿತ್ತು. ಇವು ಓಜೋನ್ ಪದರಕ್ಕೆ ದೊಡ್ಡ ರಂಧ್ರ ಕೊರೆಯುತ್ತವೆ ಎಂದು ತಿಳಿದ ಮೇಲೆ, ಅವುಗಳ ಬದಲಿಗೆ HFC (Hydrofluorocarbons) ಅನಿಲಗಳ ಬಳಕೆ ಶುರುವಾಯಿತು.
ಇಲ್ಲಿಯೂ ಸಮಸ್ಯೆ ಮುಂದುವರೆಯಿತು. ಈ HFC ಅನಿಲಗಳು ಓಜೋನ್ ಪದರಕ್ಕೆ ಹಾನಿ ಮಾಡದಿದ್ದರೂ, ಇವು ಭೀಕರವಾದ ‘ಹಸಿರುಮನೆ ಅನಿಲ’ಗಳು (Greenhouse Gases). ವೈಜ್ಞಾನಿಕ ಲೆಕ್ಕಾಚಾರದ ಪ್ರಕಾರ, ಒಂದು ಕೆಜಿ HFC ಅನಿಲವು ವಾತಾವರಣಕ್ಕೆ ಸೇರ್ಪಡೆಯಾದರೆ, ಅದು ಸಾವಿರಾರು ಕೆಜಿ ಕಾರ್ಬನ್ ಡೈಆಕ್ಸೈಡ್ ಉಂಟುಮಾಡುವಷ್ಟೇ ತಾಪಮಾನವನ್ನು ಹೆಚ್ಚಿಸುತ್ತದೆ. ಅಂದರೆ, ಒಂದು ಹನಿ HFC, ಸುಮಾರು 2 ಟನ್ ಇಂಗಾಲಕ್ಕೆ ಸಮನಾದ ಶಾಖವನ್ನು ಹಿಡಿದಿಟ್ಟುಕೊಳ್ಳುತ್ತದೆ. ಯಂತ್ರಗಳಲ್ಲಿ ಲೀಕೇಜ್ ಆದಾಗ ಅಥವಾ ಈ ಯಂತ್ರಗಳನ್ನು ಸರಿಯಾಗಿ ವಿಲೇವಾರಿ ಮಾಡದಿದ್ದಾಗ ಈ ಅನಿಲಗಳು ನೇರವಾಗಿ ವಾತಾವರಣಕ್ಕೆ ಸೇರಿ ಗ್ಲೋಬಲ್ ವಾರ್ಮಿಂಗ್‌ಗೆ ಕಾರಣವಾಗುತ್ತವೆ.

ವಿದ್ಯುತ್ ಬಳಕೆ ಮತ್ತು ಇಂಗಾಲದ ಹೊರಸೂಸುವಿಕೆ
ಎಸಿ ಮತ್ತು ಫ್ರಿಜ್‌ಗಳು ಕೆಲಸ ಮಾಡಲು ಭಾರೀ ಪ್ರಮಾಣದ ವಿದ್ಯುತ್ ಬೇಕು. ಇಂದಿಗೂ ಜಗತ್ತಿನ ಬಹುತೇಕ ಭಾಗಗಳಲ್ಲಿ ವಿದ್ಯುತ್ ಉತ್ಪಾದನೆಯಾಗುವುದು ಕಲ್ಲಿದ್ದಲು (Coal) ಸುಡುವುದರಿಂದ. ಬೇಸಿಗೆಯಲ್ಲಿ ಎಸಿ ಮತ್ತು ಫ್ರಿಜ್‌ಗಳ ಬಳಕೆ ಹೆಚ್ಚಾದಂತೆ ‘Peak Power Demand’ ಏರುತ್ತದೆ. ಪ್ರತಿ ಬಾರಿ ಎಸಿ ಆನ್ ಮಾಡಿದಾಗಲೂ, ಇನ್ನೆಲ್ಲೋ ಉಷ್ಣ ವಿದ್ಯುತ್ ಸ್ಥಾವರದಲ್ಲಿ ಕಲ್ಲಿದ್ದಲು ಉರಿಯುತ್ತಿರುತ್ತದೆ. ಈ ಕಲ್ಲಿದ್ದಲು ಸುಟ್ಟಾಗ ಬಿಡುಗಡೆಯಾಗುವ ಕಾರ್ಬನ್ ಡೈಆಕ್ಸೈಡ್ (CO2) ವಾತಾವರಣದ ಮೇಲ್ಪದರದಲ್ಲಿ ಒಂದು ಹೊದಿಕೆಯನ್ನು ನಿರ್ಮಿಸುತ್ತದೆ. ಈ ಹೊದಿಕೆಯು ಸೂರ್ಯನ ಶಾಖವು ಭೂಮಿಯಿಂದ ಮರಳಿ ಬಾಹ್ಯಾಕಾಶಕ್ಕೆ ಹೋಗದಂತೆ ತಡೆಯುತ್ತದೆ. ಇದನ್ನೇ ‘ಹಸಿರುಮನೆ ಪರಿಣಾಮ’ ಎನ್ನುವುದು. ಇದರಿಂದ ಭೂಮಿಯ ಸರಾಸರಿ ತಾಪಮಾನ ವರ್ಷದಿಂದ ವರ್ಷಕ್ಕೆ ಏರುತ್ತಲೇ ಇರುತ್ತದೆ.
ಅರ್ಬನ್ ಹೀಟ್ ಐಲ್ಯಾಂಡ್ (Urban Heat Island Effect)
ನಗರಗಳಲ್ಲಿ ಜನಸಂಖ್ಯೆ ಹೆಚ್ಚು, ಕಾಮಗಾರಿಗಳು ಹೆಚ್ಚು ಮತ್ತು ಪ್ರತಿಯೊಂದು ಮನೆಗೂ, ಕಚೇರಿಗೂ ಎಸಿ ಬೇಕೇ ಬೇಕು. ಒಂದು ಏರಿಯಾದಲ್ಲಿ ಸಾವಿರಾರು ಎಸಿಗಳು ಒಟ್ಟಿಗೆ ಬಿಸಿ ಗಾಳಿಯನ್ನು ಹೊರಹಾಕಿದಾಗ ಆ ಇಡೀ ಬಡಾವಣೆಯ ತಾಪಮಾನವು ಸುತ್ತಮುತ್ತಲಿನ ಹಳ್ಳಿಗಳಿಗಿಂತ 3ರಿಂದ 5 ಡಿಗ್ರಿ ಸೆಲ್ಸಿಯಸ್ ಅಧಿಕವಾಗಿರುತ್ತದೆ. ನಗರಗಳು ‘ಬಿಸಿ ದ್ವೀಪ’ಗಳಾಗಿ ಬದಲಾಗಲು ಎಸಿಗಳೇ ದೊಡ್ಡ ಕಾರಣ.
ಗ್ಲೋಬಲ್ ವಾರ್ಮಿಂಗ್‌ನ ವಿಷವರ್ತುಲ (The Vicious Cycle)
ಇದು ಅತ್ಯಂತ ಭಯಾನಕ ವಿಷಯ. ಇದು ಹೇಗೆ ಕೆಲಸ ಮಾಡುತ್ತದೆಂದರೆ, ಮೂಲದಲ್ಲಿ ವಾತಾವರಣ ಬಿಸಿಯಾಗುತ್ತದೆ (ಮನುಷ್ಯನ ದೇಹವೂ ಶಾಖ ಉತ್ಪತ್ತಿ ಮಾಡುತ್ತದೆ)- ಆಗ ಬಿಸಿ ತಡೆಯಲಾಗದೆ ಜನ ಹೆಚ್ಚು ಎಸಿ, ಫ್ರಿಜ್ ಖರೀದಿಸುತ್ತಾರೆ- ಇವುಗಳ ಬಳಕೆ ಹೆಚ್ಚಾದಂತೆ ಹೆಚ್ಚು ಬಿಸಿ ಗಾಳಿ ಮತ್ತು ಹಸಿರುಮನೆ ಅನಿಲಗಳು ಹೊರಬರುತ್ತವೆ- ಇದರಿಂದ ಭೂಮಿ ಮತ್ತಷ್ಟು ಬಿಸಿಯಾಗುತ್ತದೆ- ಭೂಮಿ ಮತ್ತಷ್ಟು ಬಿಸಿಯಾದಂತೆ ನಮಗೆ ಇನ್ನೂ ಶಕ್ತಿಯುತ ಎಸಿಗಳು ಬೇಕಾಗುತ್ತವೆ. ಇದೊಂದು ಕೊನೆ ಇಲ್ಲದ ಚಕ್ರದಂತೆ ಮುಂದುವರಿಯುತ್ತಲೇ ಇರುತ್ತದೆ. ಇಂದು ನಾವು ಅನುಭವಿಸುತ್ತಿರುವ ಈ 45-48 (ಒಮ್ಮೊಮ್ಮೆ 50ರ ಗಡಿ ದಾಟುತ್ತದೆ) ಡಿಗ್ರಿ ಸೆಲ್ಸಿಯಸ್ ತಾಪಮಾನಕ್ಕೆ ಈ ವಿಷವರ್ತುಲವೇ ಮೂಲ ಕಾರಣ.

ಹಾಗೆಂದು ನಾವು ಎಸಿ, ಫ್ರಿಜ್ ಬಳಸುವುದನ್ನೇ ನಿಲ್ಲಿಸಲು ಸಾಧ್ಯವಿಲ್ಲ. ಆದರೆ ಕೆಲವು ಬದಲಾವಣೆಗಳನ್ನಂತೂ ಮಾಡಿಕೊಳ್ಳಬಹುದು.
- ಇನ್ವರ್ಟರ್ ಎಸಿ ಬಳಕೆ: ಇವು ಸಾಮಾನ್ಯ ಎಸಿಗಳಿಗಿಂತ ಕಡಿಮೆ ವಿದ್ಯುತ್ ಬಳಸುತ್ತವೆ.
- ನೈಸರ್ಗಿಕ ತಂಪು: ಮನೆ ಕಟ್ಟುವಾಗ ಗಿಡ ಮರಗಳನ್ನು ಬೆಳೆಸುವುದು, ಕಿಟಕಿಗಳ ಮೂಲಕ ಗಾಳಿ ಬರುವಂತೆ ಮಾಡುವುದು ಮತ್ತು ಟೆರೇಸ್ ಮೇಲೆ ‘ವೈಟ್ ಕೂಲಿಂಗ್ ಪೇಂಟ್’ ಹಚ್ಚುವುದರಿಂದ ಮನೆಯ ಬಿಸಿ ಕಡಿಮೆಯಾಗುತ್ತದೆ.
- ತಾಪಮಾನ ನಿರ್ವಹಣೆ: ಎಸಿಯನ್ನು ಯಾವಾಗಲೂ 24°C ಅಥವಾ 25°C ನಲ್ಲಿರಿಸಿ.(26°C ಮೀರದಿರಲಿ) ಇದು ಮಾನವ ದೇಹಕ್ಕೂ ಉತ್ತಮ ಮತ್ತು ಪರಿಸರಕ್ಕೂ ಕಡಿಮೆ ಹಾನಿಕಾರಕ.
- ನಿಯಮಿತ ಸರ್ವಿಸ್: ಎಸಿ ಮತ್ತು ಫ್ರಿಜ್‌ಗಳನ್ನು ಸರಿಯಾಗಿ ಸರ್ವಿಸ್ ಮಾಡಿಸುವುದರಿಂದ ಗ್ಯಾಸ್ ಲೀಕ್ ಆಗುವುದನ್ನು ತಡೆಯಬಹುದು.
ನಮ್ಮ ಹಿರಿಯರು ಮಣ್ಣಿನ ಮನೆಗಳಲ್ಲಿ, ಅಂಗಳದ ನೆರಳಿನಲ್ಲಿ ಹಾಯಾಗಿರುತ್ತಿದ್ದರು. ಅಲ್ಲಿ ಮನೆಗಳೂ ಉಸಿರಾಡುತ್ತಿದ್ದವು. ಇಂದು ನಾವು ಗಾಜಿನ ಗೂಡು ಕಟ್ಟಿಕೊಂಡು, ಉಸಿರುಗಟ್ಟಿಸಿಕೊಂಡು, ಯಂತ್ರಗಳ ಮೂಲಕ ಉಸಿರು ಹುಡುಕುತ್ತಿದ್ದೇವೆ. ಪ್ರಕೃತಿಯನ್ನು ಹೊರತುಪಡಿಸಿ ನಾವು ಪಡೆಯುವ ಯಾವುದೇ ಹಿತ ಕೃತಕ ಮತ್ತು ತಾತ್ಕಾಲಿಕ. ತಂಪೂ ಕೂಡ. ಮರಗಳನ್ನು ಬೆಳೆಸುವುದು ಬಜೆಟ್ ಇಲ್ಲದ ಎಸಿ ಇದ್ದಂತೆ. ಒಂದು ಮರ ನೀಡುವ Natural Shading ಮತ್ತು Evapotranspiration (ಬಾಷ್ಪವಿಸರ್ಜನೆ/ ಆವಿಯಾಗುವಿಕೆ) ನೂರಾರು ಎಸಿಗಳಿಗೆ ಸಮಾನ. ಹೊಂಗೆ ಮರದ ತಂಪಿನ ಮುಂದೆ ಯಾವ ಎಸಿಯೂ ಬೇಕಾಗಿಲ್ಲ; ಗಡಿಗೆಯ ಮಜ್ಜಿಗೆ ಮುಂದೆ ನೂರು ಫ್ರಿಜ್‌ಗಳು ಕೆಲಸಕ್ಕೆ ಬರುವುದಿಲ್ಲ.
ಇದನ್ನೂ ಓದಿ: ದೇಶದ ಗಲ್ಲಿ ಗಲ್ಲಿಗಳಲ್ಲಿ ಬೇರೂರಿದೆ ಭೀಕರ ಅಸಮಾನತೆ; ‘ಕೇರಿ ಸಂಸ್ಕೃತಿʼ ಆಧುನಿಕ ರೂಪದಲ್ಲಿ ಮರುಸೃಷ್ಟಿ!
ಯೋಚಿಸಿ, ನಾವು ಎಸಿಯಿಂದ ಪಡೆಯುತ್ತಿರುವ ಆ ತಂಪು ಗಾಳಿ ನಿಜಕ್ಕೂ ಉಚಿತವಾಗಿ ಸಿಗುತ್ತಿದೆಯೇ? ಖಂಡಿತ ಇಲ್ಲ. ಅದರ ಪ್ರತಿಯೊಂದು ಡಿಗ್ರಿ ತಂಪಿಗೂ ನಾವು ಈ ಭೂಮಿಯ ಭವಿಷ್ಯವನ್ನು ಅಡವಿಡುತ್ತಿದ್ದೇವೆ. ಆಧುನಿಕತೆಯ ಓಟದಲ್ಲಿ ನಮಗೆ ಎಸಿ ಮತ್ತು ಫ್ರಿಜ್‌ಗಳು ಬೇಕು ಎನ್ನುವುದು ಎಷ್ಟು ನಿಜವೋ, ಅವುಗಳ ಮೇಲಿನ ಅತಿ ಅವಲಂಬನೆ ನಮ್ಮನ್ನು ವಿನಾಶದತ್ತ ದೂಡುತ್ತದೆ ಎನ್ನುವುದೂ ಅಷ್ಟೇ ನಿಜ. ನಾವು ಸೃಷ್ಟಿಸುತ್ತಿರುವ ಈ ‘ಕೃತಕ ಹಿಮಾಲಯ’ ನಮ್ಮನೆಯ ನಾಲ್ಕು ಗೋಡೆಗಳ ಒಳಗೆ ಮಾತ್ರ ಇರುತ್ತದೆ. ಆ ಗೋಡೆಗಳಾಚೆ ಸೃಷ್ಟಿಯಾಗುವ ‘ದಹಿಸುವ ಕುಂಡ’ದಲ್ಲಿ ನಮ್ಮ ಮುಂದಿನ ಪೀಳಿಗೆ ಬದುಕಬೇಕಿದೆ. ಮರಗಳನ್ನು ಕಡಿಯುತ್ತಾ, ಕಾಂಕ್ರೀಟ್ ಕಾಡುಗಳನ್ನು ನಿರ್ಮಿಸುತ್ತಾ, ಯಂತ್ರಗಳ ಮೊರೆ ಹೋಗುವುದು ಬೆಂಕಿಯನ್ನು ಆರಿಸಲು ಪೆಟ್ರೋಲ್ ಸುರಿದಂತೆ.
ಇನ್ನಾದರೂ ನಾವು ಎಚ್ಚೆತ್ತುಕೊಳ್ಳಬೇಕಿದೆ. ಮನೆಯ ಸುತ್ತ ಒಂದು ಗಿಡ ನೆಡುವುದು, ನೈಸರ್ಗಿಕ ಗಾಳಿ-ಬೆಳಕಿಗೆ ಜಾಗ ಬಿಡುವುದು ಮತ್ತು ಮಿತವಾಗಿ ತಂತ್ರಜ್ಞಾನವನ್ನು ಬಳಸುವುದು ಜಾಣತನ. ನೆನಪಿರಲಿ, ಭೂಮಿ ಬಿಸಿಯಾದಂತೆ ಮನುಕುಲದ ಆಯಸ್ಸಿನ ಬಾಲಕ್ಕೆ ಬೆಂಕಿ ಬೀಳುತ್ತದೆ!




