ಯುನಾನಿ ರಾಷ್ಟ್ರೀಯ ದಿನಾಚರಣೆಯ ಅಂಗವಾಗಿ ಜಮಾ ಆತೆ ಇಸ್ಲಾಮೀ ಹಿಂದ್ ಕಾಪು ಶಾಖೆ ಹಾಗೂ ಹೆಚ್.ಆರ್.ಎಸ್ ಕಾಪು ಗ್ರೂಪ್ ವತಿಯಿಂದ ಕೊಂಬಗುಡ್ಡೆಯ ಇಬ್ರಾಹೀಮ್ ಮಂಝಿಲ್‌ನಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ಹಿಜಾಮ (ಕಪಿಂಗ್ ಥೆರಪಿ) ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಉಡುಪಿ ಜಿಲ್ಲಾ ಆಯುಷ್ ವಿಭಾಗದ ವೈದ್ಯಾಧಿಕಾರಿ ಹಾಗೂ ಯುನಾನಿ ವೈದ್ಯರಾದ ಸಯ್ಯದ್ ಝಾಹಿದ್ ಹುಸೈನ್, ಹಿಜಾಮ ಚಿಕಿತ್ಸೆಯು ದೇಹದಲ್ಲಿರುವ ಮಲಿನ ರಕ್ತವನ್ನು ಹೊರತೆಗೆದು ಆರೋಗ್ಯ ಸುಧಾರಣೆಗೆ ಸಹಕಾರಿ ಎಂದು ತಿಳಿಸಿದರು. ಯುನಾನಿ ಚಿಕಿತ್ಸಾ ಪದ್ಧತಿ ಪ್ರಾಚೀನ ವೈದ್ಯಕೀಯ ವಿಧಾನವಾಗಿದ್ದು, ಇದರಿಂದ ಯಾವುದೇ ಅಡ್ಡಪರಿಣಾಮಗಳು ಉಂಟಾಗುವುದಿಲ್ಲ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಮಾ ಆತೆ ಇಸ್ಲಾಮೀ ಹಿಂದ್ ಕಾಪು ಶಾಖೆಯ ಅಧ್ಯಕ್ಷ ಅನ್ವರ್ ಅಲಿ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿ ಆರೋಗ್ಯವಂತರಾಗಿದ್ದರೆ ಕುಟುಂಬ ಹಾಗೂ ಸಮಾಜವೂ ಆರೋಗ್ಯವಂತವಾಗಿರುತ್ತದೆ ಎಂದರು. ಸ್ವಚ್ಛತೆ, ನಿಯಮಿತ ಜೀವನ, ಮಿತಾಹಾರ, ವ್ಯಾಯಾಮ ಹಾಗೂ ಮದ್ಯಪಾನ, ತಂಬಾಕು ಸೇರಿದಂತೆ ದುಷ್ಚಟಗಳಿಂದ ದೂರವಿರುವುದು ಉತ್ತಮ ಆರೋಗ್ಯಕ್ಕೆ ಅಗತ್ಯ ಎಂದು ಅವರು ಕರೆ ನೀಡಿದರು.

ಕಾರ್ಯಕ್ರಮವು ಮುಹಮ್ಮದ್ ಹಾಶಿಮ್ ಸಾಹೇಬರ ಕುರ್‌ಆನ್ ಪಠಣದೊಂದಿಗೆ ಆರಂಭವಾಯಿತು. ಕಾಪು ಶಾಖೆಯ ಕಾರ್ಯದರ್ಶಿ ಮುಹಮ್ಮದ್ ಇಕ್ಬಾಲ್ ಸಾಹೇಬ್ ಸ್ವಾಗತ ಹಾಗೂ ಪ್ರಾಸ್ತಾವಿಕ ಭಾಷಣ ಮಾಡಿದರು. ಮುಖ್ಯ ಅತಿಥಿಯಾಗಿ ಎಕ್ಕಾವನ್ ನಸೀರ್ ಅಹ್ಮದ್ ಶುಭ ಸಂದೇಶ ನೀಡಿದರು. ಶೇಖ್ ಮುಹಮ್ಮದ್ ಶರೀಫ್ ಧನ್ಯವಾದ ಸಲ್ಲಿಸಿದರು. ಹೆಚ್.ಆರ್.ಎಸ್ ಕಾಪು ಗ್ರೂಪ್ ಲೀಡರ್ ಮುಹಮ್ಮದ್ ಅಲಿ ಕಾರ್ಯಕ್ರಮ ನಿರೂಪಿಸಿದರು.
ಶಿಬಿರದಲ್ಲಿ ಬಹು ಸಂಖ್ಯೆಯ ಪುರುಷರು ಭಾಗವಹಿಸಿ ಹಿಜಾಮ ಚಿಕಿತ್ಸೆಯ ಪ್ರಯೋಜನ ಪಡೆದರು. ನುರಿತ ಯುನಾನಿ ವೈದ್ಯರು ಮತ್ತು ಅವರ ತಂಡ ಚಿಕಿತ್ಸೆ ನೀಡಿದರು.






