ಉಡುಪಿ ಜಿಲ್ಲೆಯಲ್ಲಿರುವ ಕೈಗಾರಿಕಾ ಘಟಕಗಳಿಗೆ ಅಗತ್ಯವಿರುವ ವೃತ್ತಿಪರ ಕೌಶಲ್ಯ ತರಬೇತಿಗಳನ್ನು ಯುವಜನರಿಗೆ ನೀಡುವ ಮೂಲಕ ಸ್ಥಳೀಯವಾಗಿ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಕೈಗಾರಿಕಾ ತರಬೇತಿ ಸಂಸ್ಥೆಗಳು ಕಾರ್ಯಪ್ರವೃತ್ತವಾಗಬೇಕು ಎಂದು ಸ್ವರೂಪ ಟಿ.ಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ರಜತಾದ್ರಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ, ಕೈಗಾರಿಕಾ ಸ್ಪಂದನ ಹಾಗೂ ಜಿಲ್ಲಾ ಮಟ್ಟದ ರಫ್ತು ಉತ್ತೇಜನ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಸಣ್ಣ, ಮಧ್ಯಮ ಹಾಗೂ ಬೃಹತ್ ಕೈಗಾರಿಕೆಗಳ ಸ್ಥಾಪನೆಯಿಂದ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ದೊರೆಯಲಿದ್ದು, ಉದ್ಯೋಗಕ್ಕಾಗಿ ಹೊರ ಜಿಲ್ಲೆಗಳಿಗೆ ತೆರಳುವ ಅವಶ್ಯಕತೆ ಕಡಿಮೆಯಾಗಲಿದೆ ಎಂದು ಹೇಳಿದರು. ಕೈಗಾರಿಕೆಗಳ ಸ್ಥಾಪನೆಗೆ ಅಗತ್ಯ ಮೂಲಸೌಕರ್ಯ ಒದಗಿಸಲು ಹೆಚ್ಚಿನ ಒತ್ತು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯ ಐಟಿಐ, ಡಿಪ್ಲೋಮಾ ಹಾಗೂ ಜಿಟಿಟಿಸಿ ಸಂಸ್ಥೆಗಳಲ್ಲಿ ಕೈಗಾರಿಕೆಗಳಿಗೆ ಅಗತ್ಯವಿರುವ ತರಬೇತಿ ಕೋರ್ಸ್‌ಗಳನ್ನು ಇದೇ ಶೈಕ್ಷಣಿಕ ವರ್ಷದಲ್ಲಿ ಆರಂಭಿಸಿ, ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್ ಹಾಗೂ ಅಪ್ರೆಂಟಿಸ್‌ಶಿಪ್ ಅವಕಾಶಗಳನ್ನು ಕಲ್ಪಿಸಬೇಕು ಎಂದು ಹೇಳಿದರು.
ಜಿಲ್ಲೆಯ 37 ಸಣ್ಣ ಕೈಗಾರಿಕೆಗಳಲ್ಲಿ ಶೇ.91.8, 47 ಮಧ್ಯಮ ಕೈಗಾರಿಕೆಗಳಲ್ಲಿ ಶೇ.95.1 ಮತ್ತು 7 ಬೃಹತ್ ಕೈಗಾರಿಕೆಗಳಲ್ಲಿ ಶೇ.92.4 ರಷ್ಟು ಸ್ಥಳೀಯರಿಗೆ ಉದ್ಯೋಗ ನೀಡಲಾಗಿದ್ದು, ಒಟ್ಟಾರೆ 91 ಘಟಕಗಳಲ್ಲಿ ಶೇ.93.7 ರಷ್ಟು ಉದ್ಯೋಗ ಸ್ಥಳೀಯರಿಗೆ ಲಭ್ಯವಾಗಿದೆ ಎಂದು ತಿಳಿಸಿದರು.
ಹೆಬ್ರಿ ತಾಲೂಕಿನ ಶಿವಪುರ (74.84 ಎಕರೆ), ಕೆರೆಬೆಟ್ಟು (38.75 ಎಕರೆ), ಕಾರ್ಕಳದ ನಿಟ್ಟೆ (50.42 ಎಕರೆ) ಹಾಗೂ ಬ್ರಹ್ಮಾವರ ತಾಲೂಕಿನ ಉಪ್ಪೂರು (101.19 ಎಕರೆ) ಪ್ರದೇಶಗಳಲ್ಲಿ ಹೊಸ ಕೈಗಾರಿಕಾ ವಲಯಗಳನ್ನು ಅಭಿವೃದ್ಧಿಪಡಿಸಲು ಭೂಸ್ವಾಧೀನ ಸೇರಿದಂತೆ ಅಗತ್ಯ ಪ್ರಕ್ರಿಯೆಗಳನ್ನು ತ್ವರಿತಗೊಳಿಸುವಂತೆ ಸೂಚಿಸಿದರು.
ಕೈಗಾರಿಕಾ ನಿವೇಶನಗಳನ್ನು ಪಡೆದು ಮೂರು-ನಾಲ್ಕು ವರ್ಷಗಳಾದರೂ ಘಟಕಗಳನ್ನು ಆರಂಭಿಸದ ಉದ್ಯಮಿಗಳಿಗೆ ಎರಡು ತಿಂಗಳ ಗಡುವು ನೀಡಿದ ಜಿಲ್ಲಾಧಿಕಾರಿ, ಈ ಅವಧಿಯಲ್ಲೂ ಕೈಗಾರಿಕೆ ಆರಂಭಿಸದಿದ್ದರೆ ನಿವೇಶನಗಳನ್ನು ಇತರರಿಗೆ ಮರುಹಂಚಿಕೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಶಿವಳ್ಳಿ ಕೈಗಾರಿಕಾ ಪ್ರದೇಶದಲ್ಲಿ ರೆಡಿ ಮಿಕ್ಸ್ ಕಾಂಕ್ರೀಟ್ ಘಟಕಗಳ ಸ್ಥಾಪನೆಗೆ ಬಂದಿರುವ ಅರ್ಜಿಗಳ ಕುರಿತು ಸುತ್ತಮುತ್ತಲಿನ ಕೈಗಾರಿಕೆಗಳಿಗೆ ಯಾವುದೇ ತೊಂದರೆ ಉಂಟಾಗದಂತೆ ಸಮಗ್ರ ಪರಿಶೀಲನೆ ನಡೆಸಿ ಬಳಿಕ ಅನುಮತಿ ನೀಡಬೇಕು ಎಂದು ಸೂಚಿಸಿದರು.
ಕಳೆದ ಸಾಲಿನಲ್ಲಿ ಮರೈನ್ ಉತ್ಪನ್ನಗಳು, ಗೋಡಂಬಿ ಹಾಗೂ ಕಾಫಿ ಬೀನ್ ಸೇರಿದಂತೆ ಒಂಬತ್ತು ಪ್ರಮುಖ ಉತ್ಪನ್ನಗಳ ರಫ್ತಿನಿಂದ ₹2,593 ಕೋಟಿಗೂ ಅಧಿಕ ವಹಿವಾಟು ನಡೆದಿದ್ದು, ಜಿಲ್ಲೆಯಿಂದ ಇನ್ನಷ್ಟು ರಫ್ತುಗಳನ್ನು ಉತ್ತೇಜಿಸಲು ಕ್ರಮ ಕೈಗೊಳ್ಳಬೇಕು ಎಂದರು.
ಜಿಲ್ಲೆಯ ಸ್ವಚ್ಛತೆ, ಒಣತ್ಯಾಜ್ಯ ಸಂಗ್ರಹ ಘಟಕಗಳ ಸ್ಥಾಪನೆ ಹಾಗೂ ಕೈಗಾರಿಕೆಗಳಲ್ಲಿ ಉತ್ಪತ್ತಿಯಾಗುವ ದ್ರವತ್ಯಾಜ್ಯಗಳ ಸಂಸ್ಕರಣೆಗೆ ಕೈಗಾರಿಕೋದ್ಯಮಗಳು ಸಹಕರಿಸಬೇಕು ಎಂದು ಕರೆ ನೀಡಿದರು.
ಸಭೆಯಲ್ಲಿ ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ್ ವಿ. ನಾಯಕ್, ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೇಶಕ ಸೀತಾರಾಮ ಶೆಟ್ಟಿ, ಸಣ್ಣ ಕೈಗಾರಿಕಾ ಸಂಘದ ಜಿಲ್ಲಾ ಅಧ್ಯಕ್ಷ ವಸಂತ ಕಿಣಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಉದ್ಯಮಿಗಳು ಉಪಸ್ಥಿತರಿದ್ದರು.






