ನಿಟ್ಟೆ ಗ್ರಾಮದ ಬೋರ್ಕಲ್ಲುಗುಡ್ಡೆ ಪ್ರದೇಶದಲ್ಲಿ ಬಾವಿಗೆ ಬಿದ್ದಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಮಂಗಳವಾರ ಯಶಸ್ವಿಯಾಗಿ ರಕ್ಷಿಸಿದ್ದಾರೆ.
ಬೇಟೆ ಅರಸಿ ಬಂದಿದ್ದ ಚಿರತೆ, ಕರಿಯ ಪೂಜಾರಿ ಎಂಬವರ ಮನೆಯ ಗದ್ದೆ ಸಮೀಪ ಇರುವ ಆವರಣವಿಲ್ಲದ ಬಾವಿಗೆ ಬಿದ್ದಿದೆ ಎಂದು ತಿಳಿದುಬಂದಿದೆ. ಇಂದು ಬೆಳಗ್ಗೆ ಈ ಘಟನೆ ಗಮನಿಸಿದ ಮನೆಯವರು ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು.
ಮಾಹಿತಿ ಪಡೆದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಬಲೆ ಹಾಗೂ ಬೋನುಗಳ ಸಹಾಯದಿಂದ ಬಾವಿಗೆ ಬಿದ್ದಿದ್ದ ಚಿರತೆಯನ್ನು ಸುರಕ್ಷಿತವಾಗಿ ಹೊರತೆಗೆದರು. ಬಳಿಕ ಅದನ್ನು ಸಮೀಪದ ಅರಣ್ಯ ಪ್ರದೇಶಕ್ಕೆ ಬಿಡುಗಡೆ ಮಾಡಲಾಯಿತು. ಅಧಿಕಾರಿಗಳ ಪ್ರಕಾರ, ಇದು ಸುಮಾರು ಒಂದು ವರ್ಷದ ಗಂಡು ಚಿರತೆ.
ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ರುತ್ರನ್ ಹಾಗೂ ಮೂಡುಬಿದರೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪಿ. ಶ್ರೀಧರ್ ಅವರ ಮಾರ್ಗದರ್ಶನದಲ್ಲಿ ಕಾರ್ಕಳ ವಲಯದ ಸಿಬ್ಬಂದಿಗಳು ಈ ಕಾರ್ಯಾಚರಣೆ ನಡೆಸಿದರು. ಸಿಬ್ಬಂದಿಗಳಾದ ಹುಕ್ರಪ್ಪ, ಉಪ ವಲಯ ಅರಣ್ಯ ಅಧಿಕಾರಿಗಳಾದ ಚಂದ್ರಕಾಂತ್, ಕರುಣಾಕರ್, ಗಸ್ತು ಅರಣ್ಯ ಪಾಲಕರಾದ ಸುರೇಶ್, ಪ್ರಕಾಶ್, ಶ್ರೀಧರ್, ಯಮನೂರು, ಅರಣ್ಯ ವೀಕ್ಷಕ ಮಂಜುನಾಥ್, ವಾಹನ ಚಾಲಕ ವಿತೇಶ್ ಸೇರಿದಂತೆ ತಂಡವು ಸ್ಥಳೀಯರ ಸಹಕಾರದೊಂದಿಗೆ ಚಿರತೆಯನ್ನು ರಕ್ಷಿಸುವಲ್ಲಿ ಯಶಸ್ವಿಯಾಯಿತು.





