ಅಂಬೇಡ್ಕರ್ ಅವರ ತತ್ವಗಳು ಸಮಾಜದಲ್ಲಿ ಸಮಾನತೆ, ನ್ಯಾಯ ಮತ್ತು ವ್ಯಕ್ತಿ ಗೌರವವನ್ನು ಸ್ಥಾಪಿಸಲು ರೂಪುಗೊಂಡಿವೆ. ʼದೇಶದ ಸಂಪತ್ತು ಜನರದ್ದಾಗಿರಬೇಕುʼ ಎಂಬ ಮೂಲಭಾವನೆ ಈ ಕೃತಿಯ ಆತ್ಮವಾಗಿದೆ. ಹೀಗಾಗಿ ʼStates and Minoritiesʼ ಕೃತಿ ಕೇವಲ ಒಂದು ಆರ್ಥಿಕ ಯೋಜನೆ ಮಾತ್ರವಲ್ಲ, ಸಮಾನತೆ ಆಧಾರಿತ ಭಾರತದ ಕನಸಿನ ನಕ್ಷೆಯಾಗಿದೆ.
ಡಾ. ಬಿ.ಆರ್. ಅಂಬೇಡ್ಕರ್ ಅವರ ಬರಹಗಳು ಮತ್ತು ಭಾಷಣಗಳಲ್ಲಿ ಸಾಮಾಜಿಕ ನ್ಯಾಯ ಮತ್ತು ಸಾಮಾಜಿಕ ಸಮಾನತೆಯ ಕಾಳಜಿಗಳು ಕೇಂದ್ರಬಿಂದುವಾಗಿವೆ. ಭಾರತದಲ್ಲಿ ಪ್ರಜಾಪ್ರಭುತ್ವ ಸೇರಿದಂತೆ ಎಲ್ಲದಕ್ಕೂ ನ್ಯಾಯವು ಮೊದಲಿನದು. ಹಾಗಾಗಿ ಪ್ರಜಾಪ್ರಭುತ್ವವು ನ್ಯಾಯಯುತವಾಗಿರಬೇಕು. ಧಾರ್ಮಿಕ ಅಲ್ಪಸಂಖ್ಯಾತರಲ್ಲದೆ, ಜಾತಿ ಅಲ್ಪಸಂಖ್ಯಾತರಿಗೂ ಸಾಮಾಜಿಕ ನ್ಯಾಯವನ್ನು ಒದಗಿಸುವಂತೆ ಅಂಬೇಡ್ಕರ್ ಅವರು ವಿವಿಧ ಕೃತಿಗಳಲ್ಲಿ ತಿಳಿಸಿದ್ದಾರೆ. ಆದರೆ ಅವರ ರಾಜ್ಯಗಳು ಮತ್ತು ಅಲ್ಪಸಂಖ್ಯಾತರು(ಸ್ಟೇಟ್ಸ್ ಅಂಡ್ ಮೈನಾರಿಟೀಸ್-1945) ಎಂಬ ಪುಸ್ತಕವು ಭಾರತದ ಕಟ್ಟ ಕಡೆಯ ವ್ಯಕ್ತಿಗೂ ಸಮಾನತೆ, ನ್ಯಾಯ ಹಾಗೂ ಅವುಗಳ ಅನುಷ್ಠಾನದ ಬಗ್ಗೆ ಅವರ ನಂಬಿಕೆ, ಮೌಲ್ಯಗಳಿಗೆ ತಕ್ಕಂತೆ ಗಮನಾರ್ಹ ಉದಾಹರಣೆಯಾಗಿದೆ.
ಅಂಬೇಡ್ಕರ್ ಅವರು 1940ರಲ್ಲಿ ಅವರೇ ಸ್ಥಾಪಿಸಿದ್ದ ಪರಿಶಿಷ್ಟ ಜಾತಿ ಒಕ್ಕೂಟವು ಮನವಿ ಮಾಡಿದ್ದರಿಂದ ರಾಜ್ಯಗಳು ಮತ್ತು ಅಲ್ಪಸಂಖ್ಯಾತರ ಪಟ್ಟಿಯನ್ನು ಸಿದ್ಧಪಡಿಸಿದ್ದರು. ಸಂವಿಧಾನ ಸಭೆಯ ಮೂಲಭೂತ ಹಕ್ಕುಗಳ ಉಪ ಸಮಿತಿಯ ಸದಸ್ಯರೂ ಆಗಿದ್ದ ಅವರಿಗೆ ಸಭೆಯು ಭಾರತದ ಸಂವಿಧಾನದಲ್ಲಿ ಸೇರಿಸಬೇಕಾದ ಎಲ್ಲ ಮೂಲಭೂತ ಹಕ್ಕುಗಳ ಪಟ್ಟಿಯನ್ನು ಸಿದ್ಧಪಡಿಸಲು ಕೇಳಿತ್ತು.
ಈ ಹಿನ್ನೆಲೆಯಲ್ಲಿ, 1945ರಲ್ಲಿ ಪ್ರಕಟವಾದ ‘ರಾಜ್ಯಗಳು ಮತ್ತು ಅಲ್ಪಸಂಖ್ಯಾತರು’ ಎಂಬ ಪುಸ್ತಕವನ್ನೇ 1947ರಲ್ಲಿ ನಡೆದ ಸಂವಿಧಾನ ಸಭೆಯ ಮೂಲಭೂತ ಹಕ್ಕುಗಳ ಉಪ ಸಮಿತಿಗೆ ಸ್ವತಂತ್ರ ಪುಸ್ತಕವಾಗಿ ಸಲ್ಲಿಸಿದ್ದರು. ಅಂದು ನಡೆದ ಸಂವಿಧಾನ ಸಭೆಯ ಚರ್ಚೆಯಲ್ಲಿ ಅವರು ಸ್ಪಷ್ಟವಾಗಿ ಹೇಳಿದ, ”Rights for minorities should be absolute rights. They should not be subject to any consideration as to what another party may like to do to minorities within its jurisdiction” ಎಂಬ ಮಾತು ಇಂದಿಗೂ ಪ್ರಸ್ತುತವಾಗಿದೆ. ಅಂದರೆ, “ಅಲ್ಪಸಂಖ್ಯಾತರ ಹಕ್ಕುಗಳು ಸಂಪೂರ್ಣ ಹಕ್ಕುಗಳಾಗಿರಬೇಕು. ಇನ್ನೊಂದು ಪಕ್ಷ ಅಥವಾ ಬಹುಸಂಖ್ಯಾತರು ತಮ್ಮ ಅಧಿಕಾರ ವ್ಯಾಪ್ತಿಯೊಳಗೆ ಅಲ್ಪಸಂಖ್ಯಾತರ ಹಕ್ಕುಗಳನ್ನು ಕಸಿಯುವಂತಹ ಅವರ ಇಚ್ಛೆಗೆ ಒಳಪಡಿಸಬಾರದು” ಎಂದು ಉಲ್ಲೇಖಿಸಿದ್ದರು.
ಪರಿಶಿಷ್ಟ ಜಾತಿ ಸಮುದಾಯದ ಜನರ ಮೂಲಭೂತ ಹಕ್ಕುಗಳನ್ನು ಮುಂದಿಡುವುದು ಒಕ್ಕೂಟದ ಮುಖ್ಯ ಉದ್ದೇಶವಾಗಿದ್ದರೂ, ರಾಜ್ಯಗಳು ಮತ್ತು ಅಲ್ಪಸಂಖ್ಯಾತರು ಕೃತಿಯಲ್ಲಿ ಅವರ ಕೆಲಸವು ಉದ್ದೇಶವನ್ನು ಮೀರಿ ಸಾಗಿದೆ.
ಬಹುಸಂಖ್ಯಾತರ ಆತಿಕ್ರಮಣದ ಭಯ
ರಾಜ್ಯಗಳು ಮತ್ತು ಅಲ್ಪಸಂಖ್ಯಾತರು ಕೃತಿಯನ್ನು ಮಿನಿ-ಸಂವಿಧಾನ ಎಂದು ಗುರುತಿಸಬಹುದು. ಏಕೆಂದರೆ ಇದು ಪೀಠಿಕೆ, ರಾಜ್ಯಗಳನ್ನು ಒಕ್ಕೂಟಕ್ಕೆ ಸೇರಿಸುವ ಮತ್ತು ಭಾರತೀಯ ನಾಗರಿಕರ ಮೂಲಭೂತ ಹಕ್ಕುಗಳಿಗೆ ಸಂಬಂಧಿಸಿದ ಕರಡು ಲೇಖನಗಳನ್ನೂ ಒಳಗೊಂಡಿದೆ. ಈ ದಾಖಲೆಯು ಭಾರತದಲ್ಲಿ ಅಲ್ಪಸಂಖ್ಯಾತರು ಮತ್ತು ಪರಿಶಿಷ್ಟ ಜಾತಿಗಳ ಮೂಲಭೂತ ಹಕ್ಕುಗಳನ್ನು ಬಲವಾಗಿ ಪ್ರಸ್ತಾಪಿಸಲು, ಅವರ ರಕ್ಷಣೆ ಹಾಗೂ ಸಬಲೀಕರಣಕ್ಕಾಗಿ ಮಾರ್ಗಗಳನ್ನು ಸೂಚಿಸುವ ಒಂದು ರೀತಿಯ ದಾಖಲೆಯಾಗಿದೆ.
ಅಲ್ಲದೆ, ಭಾರತದ ಇತರ ಅಲ್ಪಸಂಖ್ಯಾತರು ಹಾಗೂ ಇತರೆ ಸಮುದಾಯಗಳಿಗಿಂತ ಪರಿಶಿಷ್ಟ ಜಾತಿಗಳು ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದ್ದವು. ಪರಿಶಿಷ್ಟ ಜಾತಿಗಳು ಇತರೆ ಅಲ್ಪಸಂಖ್ಯಾತರಿಗಿಂತ ಸಾಮಾಜಿಕವಾಗಿ ತಾರತಮ್ಯ ಮತ್ತು ಅಸಮಾನತೆಗಳನ್ನು ತೀವ್ರವಾಗಿ ಅನುಭವಿಸಿದ್ದರು. ಅಂತಹ ತಾರತಮ್ಯಗಳನ್ನು ತೊಡೆದುಹಾಕದೆ, ಸಮಗ್ರ ಮತ್ತು ಜಾತ್ಯತೀತ ಭಾರತ ನಿರ್ಮಾಣ ಮಾಡುವುದು ಸುಲಭವಾಗಿರಲಿಲ್ಲ. ಅದಕ್ಕಾಗಿ ಪರಿಶಿಷ್ಟ ಜಾತಿಗಳ ಹಕ್ಕುಗಳನ್ನು ರಕ್ಷಿಸಬೇಕೆಂಬ ಅವರ ಪ್ರತಿಪಾದನೆಯು ‘ಅಸ್ಪೃಶ್ಯತೆ’ಯನ್ನು ಕಿತ್ತೊಗೆಯಲೂ ಹುಟ್ಟಿಕೊಂಡಿರಬಹುದು.
ಅಂಬೇಡ್ಕರ್ ಅವರು ಭಾರತದ ಜಾತಿ ವ್ಯವಸ್ಥೆಯನ್ನು ಸ್ವತಃ ಅನುಭವಿಸಿದ್ದರು. ಅಲ್ಲದೆ ಸಾಮಾಜಿಕ ಪದ್ಧತಿಗಳನ್ನೂ ಆಳವಾಗಿ ಅಧ್ಯಯನ ಮಾಡಿದ್ದರು. ಹಾಗಾಗಿ, “ಹಿಂದೂ ಸಮಾಜ ʼCommunal Majorityʼ ಸಂಖ್ಯೆಯಲ್ಲಿ ಮಾತ್ರವಲ್ಲ, ಜನ್ಮಜಾತ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಶಕ್ತಿಯನ್ನು ಹೊಂದಿದೆ. ಇಂತಹ ಬಹುಸಂಖ್ಯಾತರು ತಮ್ಮ ವರ್ತನೆಗಳನ್ನು ಸುಲಭವಾಗಿ ಅಲ್ಪಸಂಖ್ಯಾತರ ಮೇಲೆ ಹೇರುತ್ತಾರೆ” ಎಂದು ಎಚ್ಚರಿಸಿದ್ದರು.
ಚುನಾವಣೆಯಲ್ಲಿ ಬದಲಾಗುವ ಬಹುಸಂಖ್ಯಾತರು(ʼPolitical Majorityʼ) ಮತ್ತು ಸಮುದಾಯಗಳ ಬಹುಸಂಖ್ಯಾತ(ʼCommunal Majorityʼ)ರ ನಡುವೆ ಸ್ಪಷ್ಟ ವ್ಯತ್ಯಾಸವನ್ನು ತೋರಿಸಿದ್ದರು. ರಾಜಕೀಯ ಬಹುಸಂಖ್ಯಾತರು ಬದಲಾಗಬಹುದು. ಆದರೆ ಹಿಂದೂ ಸಮಾಜದಲ್ಲಿನ ಸಾಮಾಜಿಕ ಬಹುಸಂಖ್ಯಾತರು ಎಂದಿಗೂ ಬದಲಾಗುವುದಿಲ್ಲ. ಆದ್ದರಿಂದ ಅಲ್ಪಸಂಖ್ಯಾತರು ಬಹುಸಂಖ್ಯಾತರ ದಬ್ಬಾಳಿಕೆಗೆ ಒಳಗಾಗಬಹುದು, ಹಕ್ಕುಗಳನ್ನು ಕಳೆದುಕೊಳ್ಳಬಹುದು. ಇದು ಅಪಾಯಕಾರಿ ಎಂದು ವಾದಿಸಿದ್ದರು.
ಅಸ್ಪೃಶ್ಯರು ಹಿಂದೂ ಸಮಾಜದ ಅಲ್ಪಸಂಖ್ಯಾತರು
ದಲಿತರು(ಅಸ್ಪೃಶ್ಯರು) ಹಿಂದೂ ಸಮಾಜದ ಒಳಗಿನ ಅಲ್ಪಸಂಖ್ಯಾತರು(Scheduled Castes are a minority). ಇದು ಹೊಸ ತತ್ವವಲ್ಲ, ಬದಲಾಗಿ ಬಹುಸಂಖ್ಯಾತರ ದಬ್ಬಾಳಿಕೆಗಳಿಗೆ ಒಳಗಾಗದಂತೆ ರಕ್ಷಿಸುವುದು ಅಗತ್ಯವಾಗಿದೆ ಎಂಬುದನ್ನು ಒತ್ತಿ ಹೇಳಿದರು.
ಸ್ವಾತಂತ್ರ್ಯ ನಂತರದ ಭಾರತ ಹೇಗಿರಬೇಕು ಮತ್ತು ಬ್ರಿಟಿಷ್ ಆಳ್ವಿಕೆಯಿಂದ ನಲುಗಿದ್ದ ದೇಶವನ್ನು ಸರಿಪಡಿಸಲು ಯಾವ ಸಾಮಾಜಿಕ-ಆರ್ಥಿಕ ಸುಧಾರಣೆಗಳನ್ನು ಕೈಗೊಳ್ಳಬೇಕು ಎಂಬುದನ್ನು ಅಂಬೇಡ್ಕರ್ ಅವರು ಅಂದೇ ಊಹಿಸಿದ್ದರು. ಆದ್ದರಿಂದ, ಅಂಬೇಡ್ಕರ್ ಅವರು ಪ್ರತಿಯೊಬ್ಬ ವ್ಯಕ್ತಿಯ ಮೂಲಭೂತ ಹಕ್ಕುಗಳು, ಅಲ್ಪಸಂಖ್ಯಾತರ ಹಕ್ಕುಗಳು ಮತ್ತು ಪರಿಶಿಷ್ಟ ಜಾತಿಗಳಿಗೆ ರಕ್ಷಣೆ ಒದಗಿಸುವ ಪ್ರಯತ್ನ ಮಾಡಿದ್ದರು. ಯಾಕೆಂದರೆ, ಪರಿಶಿಷ್ಟ ಜಾತಿಗಳನ್ನು ಅಲ್ಪಸಂಖ್ಯಾತರೆಂದು ಪರಿಗಣಿಸಿದ್ದರಿಂದಲ್ಲ, ಬದಲಾಗಿ ಹಿಂದೂ ಸಮಾಜದಲ್ಲಿ ಅವರನ್ನು ಅಸ್ಪೃಶ್ಯರೆಂದು ಪರಿಗಣಿಸಿದ್ದರಿಂದ ಪರಿಶಿಷ್ಟ ಜಾತಿಗಳನ್ನು ಅಲ್ಪಸಂಖ್ಯಾತರೆಂದು ನೋಡಬೇಕು. ಅವರ ಹಕ್ಕುಗಳನ್ನು ರಕ್ಷಿಸಬೇಕು ಎಂಬುದನ್ನು ಪ್ರತಿಪಾದಿಸಿದ್ದರು.
ಭಾರತೀಯ ಸಮಾಜದಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಸಾಮಾಜಿಕ ಸ್ಥಾನಮಾನ ಅವರ ಜಾತಿ, ಧರ್ಮಗಳನ್ನು ಲೆಕ್ಕಿಸದೆ ಎಲ್ಲರಿಗೂ ಸಮಾನವಾಗಿರಬೇಕು. ಹಾಗಾಗಿ ಅಲ್ಪಸಂಖ್ಯಾತರು ಮತ್ತು ಇತರ ಸಮುದಾಯಗಳಿಗೆ ನೀಡುವ ರಕ್ಷಣೆಯನ್ನು ಪರಿಶಿಷ್ಟ ಜಾತಿಗಳಿಗೂ ನೀಡಬೇಕು. ಒಂದು ವೇಳೆ ಮೂಲಭೂತ ಹಕ್ಕುಗಳಿಗೆ ಧಕ್ಕೆ ಹಾಗೂ ತಾರತಮ್ಯ ಉಂಟಾದರೆ ಸುಪ್ರೀಂ ಕೋರ್ಟ್ ಮತ್ತು ಶಾಸಕಾಂಗ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ಪ್ರತಿಪಾದಿಸಿದರು.
ಅಲ್ಪಸಂಖ್ಯಾತರು ಮತ್ತು ಪರಿಶಿಷ್ಟ ಜಾತಿಗಳಿಗೆ ಸಮಾನತೆಯನ್ನು ಒದಗಿಸಲು, ಅರ್ಥಪೂರ್ಣ ಕೆಲಸಗಳನ್ನು ಮಾಡಲು ಶಿಕ್ಷಣದ ಹಕ್ಕು ನೀಡಲು ಪ್ರಯತ್ನಿಸಿದರು. ಜತೆಗೆ ಎಲ್ಲ ರೀತಿಯ ತಾರತಮ್ಯ, ದೌರ್ಜನ್ಯಗಳನ್ನು ನಾಶಮಾಡಲು ಆರ್ಥಿಕ ಅಭಿವೃದ್ಧಿ ಮುಖ್ಯ ಎಂದು ಅರಿತ ಅವರು, ಒಂದು ತಂತ್ರವನ್ನು ರೂಪಿಸಿ ‘ರಾಜ್ಯ ಸಮಾಜವಾದ’ ಎಂಬ ಆರ್ಥಿಕ ಅಭಿವೃದ್ಧಿಯ ಮಾದರಿಯನ್ನು ರಾಜ್ಯಗಳು ಮತ್ತು ಅಲ್ಪಸಂಖ್ಯಾತರು ಎಂಬ ಕೃತಿಯ ಮೂಲಕ ಪ್ರಸ್ತಾಪಿಸಿದರು.

ಆರ್ಥಿಕ ಅಭಿವೃದ್ಧಿಯಲ್ಲಿ ಕೈಗಾರಿಕೆ
ಅಂಬೇಡ್ಕರ್ ಅವರು ಕೈಗಾರಿಕೆಗಳು(industries) ದೇಶದ ಆರ್ಥಿಕ ಶಕ್ತಿಯ ಮೂಲ ಎಂಬುದನ್ನು ನಂಬಿದ್ದರು. ಹಾಗಾಗಿ ಇವುಗಳು ಖಾಸಗಿ ವ್ಯಕ್ತಿಗಳ ಕೈಯಲ್ಲಿ ಇದ್ದರೆ, ಸಂಪತ್ತು ಕೆಲವೇ ಕೆಲವರ ಪಾಲಾಗುತ್ತದೆ. ಇದರಿಂದಾಗಿ ಕಾರ್ಮಿಕರ ಮೇಲೆ ಶೋಷಣೆ ನಡೆಯುತ್ತದೆ, ಸಮಾಜದಲ್ಲಿ ಅಸಮಾನತೆ ಹೆಚ್ಚಾಗುತ್ತದೆ. ಇದನ್ನು ತೊಡೆದುಹಾಕಲು ಕಲ್ಲಿದ್ದಲು, ವಿದ್ಯುತ್, ಸಾರಿಗೆ ಮುಂತಾದ ಪ್ರಮುಖ ಕೈಗಾರಿಕೆಗಳು ಸರ್ಕಾರದ ನಿಯಂತ್ರಣದಲ್ಲಿ ಇರಬೇಕು. ಇದರಿಂದ ಬರುವ ಲಾಭ ಜನರಿಗೇ ಮರಳಿ ದೊರೆಯಬೇಕು, ಕಾರ್ಮಿಕರಿಗೆ ನ್ಯಾಯಯುತ ವೇತನ ಸಿಗಬೇಕು. ಅಲ್ಲದೆ ರಾಷ್ಟ್ರದ ಸಂಪತ್ತು ಸಮಾನವಾಗಿ ಹಂಚಿಕೆಯಾಗಬೇಕು ಎಂಬುದನ್ನು ಪ್ರತಿಪಾದಿಸಿದ್ದರು.
ಕೃಷಿಯಲ್ಲಿ ಆರ್ಥಿಕಾಭಿವೃದ್ಧಿ
ಭಾರತ ಕೃಷಿ ಪ್ರಧಾನ ದೇಶ. ಆದರೆ ಅಂಬೇಡ್ಕರ್ ಕಾಲದಲ್ಲಿ ಭೂಮಿ ಜಮೀನ್ದಾರರ ಕೈಯಲ್ಲಿತ್ತು. ರೈತರು ಬಾಡಿಗೆದಾರರಾಗಿ ಭೂಮಿಯಲ್ಲಿ ದುಡಿಯುತ್ತಿದ್ದರು. ಅಲ್ಲದೆ ಶೋಷಿತರಾಗುತ್ತಿದ್ದರು. ಇದರಿಂದಾಗಿ ಸಮಾನ ಹಕ್ಕುಗಳನ್ನು ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ಅಂಬೇಡ್ಕರ್ ಅವರು ʼಕೃಷಿ ಭೂಮಿ ಸರ್ಕಾರದ ನಿಯಂತ್ರಣದಲ್ಲಿ ಇರಬೇಕು. ಉಳ್ಳವರಿಂದ ಭೂಮಿಯನ್ನು ಪಡೆದು ಇದರ ಮಾಲೀಕತ್ವವನ್ನು ಸರ್ಕಾರವೇ ಹೊತ್ತು, ಭೂಮಿಯನ್ನು ರೈತರಿಗೆ ಸಮಾನವಾಗಿ ಹಂಚಿಕೆ ಮಾಡಬೇಕು. ಈ ಜಮೀನಿನಲ್ಲಿ ರೈತರು ಗುಂಪು ಕೃಷಿ(collective farming) ಮಾಡಬೇಕು. ಇದರಲ್ಲಿ ಯಾವುದೇ ಮಧ್ಯವರ್ತಿಗಳ(landlords) ಪಾತ್ರ ಇರದಂತೆ ನೋಡಿಕೊಳ್ಳಬೇಕು. ಅಲ್ಲದೆ ಉತ್ಪನ್ನಗಳನ್ನು ಸರ್ಕಾರವೇ ಖರೀದಿಸಬೇಕು. ಇದರಿಂದ ರೈತರಿಗೆ ಭದ್ರತೆ ಸಿಗುತ್ತದೆ. ಉತ್ಪಾದನೆ ಹೆಚ್ಚಾಗುತ್ತದೆ. ಇದರಿಂದ ಗ್ರಾಮೀಣ ಭಾಗಗಳಲ್ಲಿ ಶೋಷಣೆ ಇಲ್ಲದೆ ಅಭಿವೃದ್ಧಿಯಾಗುವುದರಿಂದ ಬಡತನ ನಿರ್ಮೂಲನೆಯಾಗುತ್ತದೆ ಎಂಬುದನ್ನು ಒತ್ತಿ ಹೇಳಿದ್ದರು.
ಉತ್ಪಾದನೆಯ ಸಂಪನ್ಮೂಲ
ಉತ್ಪಾದನೆಯ ಸಂಪನ್ಮೂಲಗಳಾದ ಭೂಮಿ, ಯಂತ್ರೋಪಕರಣಗಳು, ಹಣ ಮತ್ತು ಬಂಡವಾಳ ಹಾಗೂ ಪ್ರಕೃತಿ ಸಂಪನ್ಮೂಲಗಳು ಕೆಲವರ ಕೈಯಲ್ಲಿ ಮಾತ್ರ ಸೀಮಿತವಾಗಬಾರದು; ದೇಶದ ಸಂಪತ್ತು ಎಲ್ಲರಿಗೂ ಸಮಾನವಾಗಿ ಹಂಚಿಕೆಯಾಗಬೇಕು. ಇದರಿಂದ ಪ್ರತಿಯೊಬ್ಬರಿಗೂ ಕೆಲಸ ಮಾಡುವ ಅವಕಾಶ ದೊರೆಯಬೇಕು. ಪ್ರತಿಯೊಬ್ಬರೂ ಶೋಷಣೆಮುಕ್ತವಾಗಿ ದುಡಿಯಬೇಕು. ಇದರಿಂದ ದಾರಿದ್ರ್ಯ, ಬಡತನ ನಿವಾರಣೆಯಾಗಬೇಕು ಎಂಬುದನ್ನು ಪ್ರತಿಪಾದಿಸಿದ್ದರು.
ಒಟ್ಟಾರೆಯಾಗಿ, ಈ ಮೂರು ಅಂಶಗಳು ಅಂಬೇಡ್ಕರ್ ಅವರ ʼರಾಜ್ಯ ಸಮಾಜವಾದʼ ತತ್ವದ ಮೂಲಸ್ತಂಭಗಳಾಗಿವೆ. ಅವರ ಪ್ರಕಾರ ರಾಜಕೀಯ ಪ್ರಜಾಪ್ರಭುತ್ವ ಮಾತ್ರ ಸಾಕಾಗುವುದಿಲ್ಲ; ಅದರೊಂದಿಗೆ ಆರ್ಥಿಕ ಸಮಾನತೆ ಕೂಡ ಇರಬೇಕು. ಮತದಾನದ ಹಕ್ಕು ಇರುವುದರಿಂದ ಮಾತ್ರ ಜನರಿಗೆ ಸಂಪೂರ್ಣ ಸ್ವಾತಂತ್ರ್ಯ ಸಿಗುವುದಿಲ್ಲ. ಜೀವನೋಪಾಯ, ಉದ್ಯೋಗ ಮತ್ತು ಸಂಪತ್ತಿನ ಸಮಾನ ಹಕ್ಕುಗಳೂ ಸಮಾನವಾಗಿ ದೊರೆಯುವುದು ಅಗತ್ಯ. ಅಲ್ಲದೆ ಪ್ರತಿಯೊಬ್ಬ ಶ್ರಮಿಕ ವ್ಯಕ್ತಿಗೆ ವಿಮೆಯ ಅಗತ್ಯವಿದೆ. ಹಾಗಾಗಿ ವಿಮಾ ಉದ್ಯಮ ರಾಷ್ಟ್ರೀಕರಣವಾಗುವುದರಿಂದ ಶ್ರಮಿಕರ ಬದುಕಿಗೆ ನೆರವಾಗುತ್ತದೆ ಎಂಬುದನ್ನು ಅಂಬೇಡ್ಕರ್ ನಂಬಿದ್ದರು.
ಇದನ್ನೂ ಓದಿದ್ದೀರಾ? ಪ್ರಸ್ತುತ ಭಾರತಕ್ಕೆ ಡಾ. ಬಿ ಆರ್ ಅಂಬೇಡ್ಕರ್ ಅವರು ಏಕೆ ಅನಿವಾರ್ಯ?
ಸಾರಾಂಶವಾಗಿ ಹೇಳುವುದಾದರೆ, ಅಂಬೇಡ್ಕರ್ ಅವರು ಪ್ರತಿಪಾದಿಸಿದ ಕೃಷಿ, ಕೈಗಾರಿಕೆ ಮತ್ತು ಉತ್ಪಾದನಾ ಸಂಪನ್ಮೂಲಗಳಂತಹ ತತ್ವಗಳು ಸಮಾಜದಲ್ಲಿ ಸಮಾನತೆ, ನ್ಯಾಯ ಮತ್ತು ವ್ಯಕ್ತಿ ಗೌರವವನ್ನು ಸ್ಥಾಪಿಸಲು ರೂಪುಗೊಂಡಿವೆ. ʼದೇಶದ ಸಂಪತ್ತು ಜನರದ್ದಾಗಿರಬೇಕುʼ ಎಂಬ ಅಂಶ ʼStates and Minoritiesʼ ಕೃತಿಯ ಆತ್ಮವಾಗಿದೆ. ಹೀಗಾಗಿ ಈ ಕೃತಿ ಕೇವಲ ಒಂದು ಆರ್ಥಿಕ ಯೋಜನೆ ಮಾತ್ರವಲ್ಲ, ಸಮಾನತೆ ಆಧಾರಿತ ಭಾರತದ ಕನಸಿನ ನಕ್ಷೆಯಾಗಿದೆ.




