ಹಿಂದೂ ಧರ್ಮ ಬದಲಾವಣೆಯಾಗಬೇಕು. ಜಾತಿಯ ವ್ಯವಸ್ಥೆ ದೇಶದಲ್ಲಿ ಹೋಗಬೇಕು. ಎಲ್ಲಿಯವರೆಗೆ ದೇಶದಲ್ಲಿ ಜಾತಿ ವ್ಯವಸ್ಥೆ ಹೋಗುವುದಿಲ್ಲವೋ ಅಲ್ಲಿಯವರೆಗೂ ದೇಶದ ಜನರು ಒಂದೇ ಎಂಬ ಭಾವನೆ ಬರುವುದಿಲ್ಲ ಹಾಗೂ ದೇಶದ ಪ್ರಗತಿಯೂ ಸಾಧ್ಯವಿಲ್ಲ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ ಹೇಳಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತುಮಕೂರು ಮಹಾನಗರ ಪಾಲಿಕೆ, ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಮಹಾನಗರಪಾಲಿಕೆ ಮುಂಭಾಗದಲ್ಲಿ ಮಂಗಳವಾರ ಆಯೋಜಿಸಿದ್ದ ಡಾ. ಬಿ.ಆರ್.ಅಂಬೇಡ್ಕರ್ ಅವರು 135ನೇ ಹಾಗೂ ಡಾ: ಬಾಬು ಜಗಜೀವನರಾಮ್ ಅವರ 119ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬಾಬ ಸಾಹೇಬ್ ಅಂಬೇಡ್ಕರ್ ಅವರು ತಮ್ಮ ಕೊನೆ ದಿನಗಳಲ್ಲಿ ಅತ್ಯಂತ ಅಸಮಾನತೆ ಇರುವ ಹಿಂದೂ ಧರ್ಮದಲ್ಲಿ ನಾನು ಸಾಯುವುದಿಲ್ಲ ಎಂದು ಹೇಳಿ ಸಮಾನತೆಯನ್ನು ಸಾರುವ ಬೌದ್ಧ ಧರ್ಮಕ್ಕೆ ಮತಾಂತರವಾದರು. ಈ ಸಂದರ್ಭದಲ್ಲಿ ಅನೇಕರು ಟೀಕೆ ಮಾಡಿದರು. ಆದರೆ, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಜಾತಿ ತಾರತಮ್ಯ ಇರುವ ಧರ್ಮದಲ್ಲಿ ಇರಲು ಬಯಸಲಿಲ್ಲ. ಈ ಹಿನ್ನೆಲೆಯಲ್ಲಿ ವೈಯಕ್ತಿಕವಾಗಿ ಹೇಳುವುದಾದರೆ ಹಿಂದೂ ಧರ್ಮ ಬದಲಾಗಬೇಕು, ಹಿಂದೂ ಧರ್ಮದಲ್ಲಿನ ಜಾತೀಯತೆ ಹೋಗಬೇಕು. ಆಗ ಮಾತ್ರ ಈ ಧರ್ಮ ಉಳಿಯಲಿದೆ ಎಂದರು.

ಭಾರತ ಅತಿದೊಡ್ಡ ಜನಸಂಖ್ಯೆ ಹೊಂದಿರುವ ದೇಶ ಮತ್ತು ಅತಿ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿರುವ ದೇಶವಾಗಿದೆ. ಅಂತೆಯೇ, ಈ ದೇಶದಲ್ಲಿ ವರ್ಣಾಶ್ರಮ ಪದ್ಧತಿ ಹೇಗೆ ಬಂದಿದೆಯೋ ಗೊತ್ತಿಲ್ಲ, ಅದನ್ನೂ ಯಾರೂ ಸಮರ್ಥಿಸಿಕೊಳ್ಳುವುದಿಲ್ಲ. ಜಗತ್ತಿನ ಯಾವುದೇ ದೇಶದಲ್ಲಿ ಇಲ್ಲದ ಅಸಮಾನತೆಯ ಕಂದಕ ನಮ್ಮ ದೇಶದಲ್ಲಿದ್ದು, 5000 ವರ್ಷಗಳ ಇತಿಹಾಸದಲ್ಲಿ ಅಸಮಾನತೆಯ ತಾರತಮ್ಯವನ್ನು ಜನರು ಅನುಭವಿಸಿದ್ದಾರೆ ಎಂದರು.
ಬಾಬಾ ಸಾಹೇಬರು ಮತ್ತು ಬಾಬು ಜಗಜೀವನರಾಮ್ ಅವರು ಈ ಅಸಮಾನತೆಯ ತಾರತಮ್ಯ ಅನುಭವಿಸಿದ ಇಬ್ಬರು ಮಹಾನ್ ನಾಯಕರು. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ತಮ್ಮ ಸ್ವಂತ ಬದುಕಿನ ನೋವು ಮತ್ತು ಅಪಮಾನಗಳನ್ನು ದೇಶದ ಜನರೊಂದಿಗೆ ಹಂಚಿಕೊAಡರು. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಗಾಂಧೀಜಿಯವರ ಕೆಲವು ವಿಚಾರಗಳಲ್ಲಿ ಸಹಮತವಿಲ್ಲದಿದ್ದರೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದರು. ಹಂದಿ, ನಾಯಿಗಳು ಕುಡಿಯಬಹುದಾದ ಕೆರೆ ಕಟ್ಟೆಗಳನ್ನು ಶೋಷಿತರು ಮುಟ್ಟಬಾರದು ಎಂಬ ಈ ತಾರತಮ್ಯ ಅವರ ಮನಸ್ಸಿನಲ್ಲಿ ಆಳವಾಗಿ ಉಳಿದಿತ್ತು. ಮುಂದೆ ಭಾರತದ ಸಂವಿಧಾನ ರಚನೆ ಸಂದರ್ಭದಲ್ಲಿ ಅವರು ಜಗತ್ತಿನ ಶ್ರೇಷ್ಠ ಪ್ರಜಾಪ್ರಭುತ್ವವನ್ನು ಸಂವಿಧಾನದ ಮೂಲಕ ಪ್ರತಿಪಾದಿಸಿದರು. ಶ್ರೀಮಂತನಿಗೂ ಶ್ರೀಸಾಮಾನ್ಯನಿಗೂ ಒಂದೇ ಹಕ್ಕು ಎಂಬ ಮಹತ್ತರ ನಿರ್ಧಾರವನ್ನು ಸಂವಿಧಾನದಲ್ಲಿ ಅವರು ಕೊಟ್ಟಿದ್ದಾರೆ ಎಂದು ಹೇಳಿದರು.

ಮಹಿಳೆಯರು ಬಾಬಾ ಸಾಹೇಬರನ್ನು ಎಂದೂ ಮರೆಯುವಂತಿಲ್ಲ ಎಂದ ಅವರು, ಮಹಿಳೆಯರಿಗೂ ಸಮಾನ ಹಕ್ಕು ಸಿಗಬೇಕೆಂಬ ಉದ್ದೇಶದಿಂದ ಹಿಂದೂ ಕೋಡ್ ಬಿಲ್ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿದ್ದರು. ಆದರೆ ಇದನ್ನು ಕೆಲವು ಸಂಸದರು ವಿರೋಧಿಸಿದ್ದರಿಂದ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಆನಂತರ ರಾಜೀವ ಗಾಂಧಿ ಪ್ರಧಾನ ಮಂತ್ರಿ ಆಗಿದ್ದಾಗ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕಂಡಿದ್ದ ಕನಸನ್ನು ನನಸು ಮಾಡಿ ಎಲ್ಲಾ ಪಂಚಾಯತಿಗಳಲ್ಲಿ ಮಹಿಳೆಯರಿಗೆ ಸಮಾನ ಅವಕಾಶಗಳು ಸಿಗುವಂತೆ ಮಾಡಿದರು. ಅಲ್ಲದೆ, ಡಾ. ಮನಮೋಹನ್ ಸಿಂಗ್ ಪ್ರದಾನಮಂತ್ರಿಯಾಗಿದ್ದ ಸಂದರ್ಭದಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಲಾಗಿತ್ತು. ಆದರೆ ಅಂದಿನ ಸಂದರ್ಭದಲ್ಲಿ ರಾಜ್ಯ ಸಭೆಯಲ್ಲಿ ಈ ಮಸೂದೆ ಅಂಗೀಕಾರ ಆಗಲಿಲ್ಲ. ಇಂದಿನ ಕೇಂದ್ರ ಸರ್ಕಾರ ಈ ಮಸೂದೆಯನ್ನು ಪುನಃ ಮಂಡಿಸುತ್ತಿದೆ. ಇದನ್ನು ರಾಜ್ಯ ಸರ್ಕಾರದ ಪರವಾಗಿ ನಾವು ಸ್ವಾಗತಿಸುತ್ತೇವೆ. ಮಹಿಳೆಯರಿಗೆ ಹಾಗೂ ತಾಯಂದಿರಿಗೆ ಸಮಾನ ಹಕ್ಕು ಸಿಗಬೇಕೆಂಬುದು ಬಾಬಾ ಸಾಹೇಬರ ಪ್ರತಿಪಾದನೆ ಆಗಿತ್ತು ಎಂಬುದನ್ನು ನಾವು ಸ್ಮರಿಸಬೇಕು ಎಂದರು.
ಡಾ.ಬಾಬು ಜಗಜೀವನರಾಮ್ ಅವರು ಸ್ವಾತಂತ್ರ್ಯ ಭಾರತದಲ್ಲಿ ಹಸಿರು ಕ್ರಾಂತಿ ಮೂಲಕ ದೇಶದ ಆಹಾರ ಸಮಸ್ಯೆಯನ್ನು ನೀಗಿಸಿದ್ದನ್ನು ನಾವು ಸ್ಮರಿಸಬೇಕು. ಸ್ವಾತಂತ್ರ್ಯ ಭಾರತದ ಅಂದಿನ ಸ್ಥಿತಿಯಲ್ಲಿ ದೇಶದಲ್ಲಿ ಆಹಾರ ಉತ್ಪಾದನೆ ಅಷ್ಟೇನು ಸುಧಾರಣೆಯಿರಲಿಲ್ಲ. ಅಮೇರಿಕಾದಿಂದ ಮೆಕ್ಕೆಜೋಳ ತರಿಸಿಕೊಳ್ಳಲಾಗುತ್ತಿತ್ತು. ಆದರೆ, ಅಂದಿನ ಕೃಷಿ ಸಚಿವರಾಗಿದ್ದ ಡಾ: ಬಾಬು ಜಗಜೀವನರಾಂ ಅವರು ಹಸಿರು ಕ್ರಾಂತಿಯ ಮೂಲಕ ದೇಶವನ್ನು ಆಹಾರ ಸ್ವಾವಲಂಬಿ ರಾಷ್ಟçವಾಗಿಸಿದರು ಎಂದರು.

ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಬಡತನ ನಿರ್ಮೂಲನ ಮಾಡುವ ಉದ್ದೇಶದಿಂದ ಗ್ಯಾರಂಟಿ ಯೋಜನೆಗಳ ಮೂಲಕ ಸುಧಾರಣೆ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವ ಡಾ: ಜಿ. ಪರಮೇಶ್ವರ ತಿಳಿಸಿದರು.
ವಿಶೇಷ ಉಪನ್ಯಾಸ ನೀಡಿದ ಸಾಹಿತಿ ಮೋಹನ್ ಚಂದ್ರಗುತ್ತಿ ಮಾತನಾಡಿ, ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನ್ ರಾಮ್ ಅವರ ಅನುಯಾಯಿಗಳು ಅವರನ್ನು ಆರಾಧಿಸುವುದು ಸರಿಯಲ್ಲ. ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ತಮ್ಮ ಸಮುದಾಯಗಳನ್ನು ಜಾಗೃತರಾಗುವಂತೆ ಮಾಡಬೇಕೆಂದು ಪ್ರತಿಪಾದಿಸಿದರು.
ಆಧ್ಯಕ್ಷತೆ ವಹಿಸಿದ್ದ ಶಾಸಕ ಜಿ.ಬಿ.ಜ್ಯೋತಿ ಗಣೇಶ್ ಅವರು, ಡಾ.ಬಿ.ಆರ್.ಅಂಬೇಡ್ಕರ್ ಅವರು, ಕೇವಲ ಒಂದು ಜಾತಿಗೆ ಸೀಮಿತರಲ್ಲ, ದೇಶದ ಪ್ರತಿಯೊಬ್ಬರಿಗೂ ಅವರೇ ಸ್ಫೂರ್ತಿ ಎಂದರು.
ಕೇಂದ್ರ ಸರ್ಕಾರ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಸ್ಮರಿಸುವ ಉದ್ದೇಶದಿಂದ ಭೀಮ್ ಆಪ್, ಅಂಬೇಡ್ಕರ್ ಅವರು ಬದುಕಿದ ಪ್ರದೇಶಗಳ ಪಂಚ ಕ್ಷೇತ್ರಗಳ ಸ್ಮಾರಕ ಸೇರಿದಂತೆ ಅವರನ್ನು ನೆನಪಿಸುವ ಹಾಗೂ ಗೌರವಿಸುವ ಅನೇಕ ಕಾರ್ಯಕ್ರಮಗಳನ್ನು ಮಾಡಿದೆ ಎಂದರು.

ಡಾ: ಅಂಬೇಡ್ಕರ್ ಅವರು ಕೇವಲ ಮೀಸಲಾತಿಯ ಹರಿಕಾರರಷ್ಟೇ ಅಲ್ಲದೆ, ದೇಶದ ಎಲ್ಲರ ಭಾಗ್ಯವಿಧಾತ ಎಂದರು. ದೇಶದಲ್ಲಿರುವ ಅಸಮಾನತೆಯ ಬಿಡುಗನ್ನು ನಿವಾರಿಸುವ ಮೂಲಕ ನಮ್ಮ ತಲೆಗಳಿಂದ ಅಸಮಾನತೆಯ ಪಿಡುಗನ್ನು ತೆಗೆದು ಹಾಕುವ ಮೂಲಕ ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ 10 ಮಂದಿ ವಿದ್ಯಾರ್ಥಿಗಳು, 12 ಮಂದಿ ಸಾಧಕರಿಗೆ ಅಂಬೇಡ್ಕರ್ ಪ್ರಶಸ್ತಿ ಹಾಗೂ 10 ಮಂದಿ ಸಾಧಕರಿಗೆ ಡಾ.ಬಾಬು ಜಗಜೀವನರಾಂ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ವಿ.ಅಶ್ವಿಜ, ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ವಿ.ಅಶೋಕ್, ಜಿಲ್ಲಾ ಗ್ಯಾರಂಟಿ ಸಮಿತಿಯ ಅಧ್ಯಕ್ಷ ಚಂದ್ರಶೇಖರಗೌಡ, ಅಪರ ಜಿಲ್ಲಾಧಿಕಾರಿ ಡಾ.ಎನ್. ತಿಪ್ಪೇಸ್ವಾಮಿ, ಮಹಾನಗರ ಪಾಲಿಕೆ ಆಯುಕ್ತೆ ಶುಭ ಬಿ., ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ.ಗೋಪಾಲ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಶಶಿಧರ್, ತುಮಕೂರು ಉಪ ವಿಭಾಗಾಧಿಕಾರಿ ನಾಹೀದಾ ಜಮ್ ಜಮ್, ಜಿ.ಪಂ. ಉಪ ಕಾರ್ಯದರ್ಶಿಗಳಾದ ಸಂಜೀವಪ್ಪ, ಈಶ್ವರಪ್ಪ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಸೋನಿಯಾ ವರ್ಣೇಕರ್, ಜಿ.ಪಂ. ಮುಖ್ಯ ಲೆಕ್ಕಾಧಿಕಾರಿ ನರಸಿಂಹ ಮೂರ್ತಿ, ಮತ್ತಿತರರು ಉಪಸ್ಥಿತರಿದ್ದರು.




