ಉಡುಪಿ | ಮಹಿಳೆಯರ ಮೇಲೆ ಪೊಲೀಸ್ ದೌರ್ಜನ್ಯ?; ಆರೋಪ ತಳ್ಳಿ ಹಾಕಿದ ಪೊಲೀಸರು

ಕಳ್ಳತನದ ಆರೋಪ ಹೊರಿಸಿ ಇಬ್ಬರು ಮಹಿಳೆಯರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎಂಬ ಆರೋಪ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಟ ಪೋಲೀಸ್ ಠಾಣೆಯ ಪೊಲೀಸರು ಮೇಲೆ ಕೇಳಿಬಂದಿದೆ. ದಲಿತ ಮತ್ತು ಕಾರ್ಮಿಕ ಸಂಘಟನೆಗಳು ಕೋಟ ಪೋಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಆದರೆ, ತಮ್ಮ ವಿರುದ್ಧದ ಆರೋಪವನ್ನು ಪೊಲೀಸರು ನಿರಾಕರಿಸಿದ್ದಾರೆ.

ಆಶಾ ಮತ್ತು ಸುಜಾತ ಎಂಬ ಮಹಿಳೆಯರು ತಮ್ಮ ಮೇಲೆ ಪೊಲೀಸರು ದೌರ್ಜನ್ಯ ಎಸಗಿದ್ದಾರೆ. ಈ ಬಗ್ಗೆ ಈದಿನ.ಕಾಮ್ ಜೊತೆ ಮಾತನಾಡಿದ ಆಶಾ ಮತ್ತು ಸುಜಾತ, “ಅಕ್ಟೋಬರ್ 2 ರಂದು ನೂಜಿ ಗ್ರಾಮದ ಕಿರಣ್ ಕುಮಾರ್ ಶೆಟ್ಟಿಯವರ ಮನೆಯಲ್ಲಿ ಹುಟ್ಟುಹಬ್ಬದ ಪ್ರಯುಕ್ತ ಮನೆ ಕೆಲಸಕ್ಕಾಗಿ ನಮ್ಮನ್ನು ಕರೆಸಿಕೊಂಡಿದ್ದರು. ಅಂದು ನಾವು ಸ್ವಚ್ಛತಾ ಕೆಲಸ ಮುಗಿಸಿ ಮಧ್ಯಾಹ್ನ 1.30ಕ್ಕೆ ಮನೆಗೆ ವಾಪಸು ಬಂದಿದ್ದೇವೆ. ಅದೇ ದಿನ ಸುಮಾರು 6.30ಕ್ಕೆ ಕಿರಣ್ ಕುಮಾರ್ ಶೆಟ್ಟಿ ಅವರು ತಮ್ಮ ಮನೆಯಲ್ಲಿ ಚಿನ್ನದ ಕೈ ಖಡ ಕಳುವಾಗಿದೆ ಎಂದು ದೂರು ಕೊಟ್ಟಿದ್ದಾರೆಂದು ಕೋಟ ಠಾಣಾಧಿಕಾರಿ ಸುಧಾ ಪ್ರಭುರವರು ನಮ್ಮಿಬ್ಬರನ್ನು ಠಾಣೆಗೆ ಕರೆಸಿಕೊಂಡಿದ್ದರು. ಠಾಣೆಯಲ್ಲಿ ಸುಧಾ ಅವರು ನಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಮೊಬೈಲ್‌ಗಳನ್ನು ಕಸಿದುಕೊಂಡು ಚಿನ್ನ ವಾಪಸ್‌ ಕೊಡದಿದ್ದಾರೆ ಎನ್‌ಕೌಂಟರ್ ಮಾಡುತ್ತೇವೆಂದು ಪಿಸ್ತೂಲನ್ನು ಹಣೆಗಿಟ್ಟು ಬೆದರಿಕೆ ಹಾಕಿದರು” ಎಂದು ಆರೋಪಿಸಿದ್ದಾರೆ.

“ಅವರು ಬೆದರಿದ್ದರಿಂದ ಭಯಭೀತರಾದ ನಾವು, ಕುಡಿಯಲು ನೀರು ಕೊಡಿ ಎಂದು ಅಂಗಲಾಚಿದರೂ ನೀರು ಕೊಡಲಿಲ್ಲ. ಶೌಚಾಲಯಕ್ಕೆ ಹೋಗಲು ಬಿಡದೆ ಚಿತ್ರಹಿಂಸೆ ನೀಡಿದರು. ಆದಿನ ರಾತ್ರಿ 9.30ರವರೆಗೆ ಠಾಣೆಯಲ್ಲಿ ಇರಿಸಿಕೊಂಡಿದ್ದರು. ಆ ಬಳಿಕ, ಮರುದಿನ ಬರುವಂತೆ ಹೇಳಿ ಕಳುಹಿಸಿದರು” ಎಂದು ತಿಳಿಸಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಮರುದಿನ ಅಕ್ಟೋಬರ್ 3ರಂದು ಬೆಳಗ್ಗೆಯೇ ನಾವಿಬ್ಬರು ಠಾಣೆಗೆ ಹೋದೆವು. ಠಾಣೆಯಲ್ಲಿ ಸುಧಾ ಪ್ರಭು ಮತ್ತು ಸಿಬ್ಬಂದಿ ರೇವತಿ ಹಾಗೂ ಮತ್ತೊಬ್ಬರು ಇದ್ದರು. ಠಾಣೆಗೆ ಕಿರಣ್ ಕುಮಾರ್ ಶೆಟ್ಟಿ ಬಂದಿದ್ದರು. ಶೆಟ್ಟಿ ಅವರು ಆಶಾ ಅವರನ್ನು ಉದ್ದೇಶಿಸಿ, ‘ನೀನು ಕೀಳು ಜಾತಿಯವಳು. ಕೂಸಾಳು. ನಿನ್ನ ಜಾತಿಗಿಂತ ನಾಯಿ ಜಾತಿ ಮೇಲು. ನಿನ್ನ ಜಾತಿಯವರಿಗೆ ಬೇರೆಯವರ ಎಂಜಲು ತಿನ್ನುವುದೇ ಕೆಲಸ’ ಎಂದು ಜಾತಿ ನಿಂದನೆ ಮಾಡಿದರು” ಎಂದು ಆರೋಪಿಸಿದ್ದಾರೆ.

“ನಾವಿಬ್ಬರೂ ಯಾವುದೇ ಕಳ್ಳತನ ಮಾಡಿಲ್ಲ ಎಂದು ಹೇಳಿದರೂ ಪೋಲೀಸ್ ಠಾಣಾಧಿಕಾರಿ ಸುಧಾ ಪ್ರಭು ಅವರು ಕಿರಣ್ ಶೆಟ್ಟಿಯ ಕಾರಿನಲ್ಲಿ ನಮ್ಮಿಬ್ಬರನ್ನು ಕಿರಣ್ ಶೆಟ್ಟಿಯವರ ಮನೆಗೆ ಕರೆದುಕೊಂಡು ಹೋದರು. ಅಲ್ಲಿಯೂ ನಮಗೆ ಹೊಡೆದರು. ಸುಜಾತ ಅವರನ್ನು ನೆಲದ ಮೇಲೆ ಮಲಗಿಸಿ ಕಾಲಿನ ಪಾದಗಳಿಗೆ ಲಾಠಿಯಿಂದ ಹೊಡೆದು, ಹೊಟ್ಟೆಗೆ ಬೂಟಿನಿಂದ ತುಳಿದರು. ಮನೆಗೆ ಕಳುಹಿಸುವಾಗ ಪೊಲೀಸರು ತಮ್ಮ ಮೊಬೈಲ್‌ನಲ್ಲಿ ‘ನಮ್ಮಿಬ್ಬರಿಗೆ ಯಾವುದೇ ಕಿರುಕುಳ ನೀಡಿಲ್ಲ’ ಎಂದು ಒತ್ತಾಯಿಸಿ ಹೇಳಿಕೆಯನ್ನು ವೀಡಿಯೋ ಮಾಡಿಕೊಂಡರು. ಈ ಬಗ್ಗೆ ಬೇರೆಯವರಲ್ಲಿ ತಿಳಿಸಿದರೆ ಇಬ್ಬರಿಗೂ ಸುಳ್ಳು ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುವ ಬೆದರಿಕೆ ಹಾಕಿದರು” ಎಂದು ಇಬ್ಬರೂ ಸಂತ್ರಸ್ತ ಮಹಿಳೆಯರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಪ್ರಕರಣದ ಬಗ್ಗೆ ಈದಿನ.ಕಾಮ್ ಜೊತೆ ಮಾತನಾಡಿದ ದಲಿತ ಸಂಘರ್ಷ ಸಮಿತಿಯ ಉಡುಪಿ ಜಿಲ್ಲಾ ಸಂಚಾಲಕ ಸುಂದರ್ ಮಾಸ್ಟರ್, “ಹಲ್ಲೆಗೊಳಗಾದ ಸುಜಾತ ಅವರನ್ನು ಕುಂದಾಪುರ ಸರ್ಕಾರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ತನಿಖೆಗೆ ಬಂದಿದ್ದ ಪೊಲೀಸರು ಎಲ್ಲ ಮಾಹಿತಿಯನ್ನು ಪಡೆದುಕೊಂಡಿದ್ದರೂ, ಈವರೆಗೂ ಸುಧಾ ಪ್ರಭು ಮತ್ತು ಇತರರ ಮೇಲೆ ಎಫ್‌ಐಆರ್‌ ದಾಖಲಿಸಿಲ್ಲ. ಜಿಲ್ಲಾ ಪೊಲೀಸ್ ಇಲಾಖೆಯು ರಾಜಕೀಯ ಪ್ರಭಾವ, ಹಣದ ಆಮಿಷಕ್ಕೆ ಬಲಿಯಾಗಿ ಪ್ರಕರಣ ಮುಚ್ಚಿ ಹಾಕಲು ಯತ್ನಿಸುತ್ತಿದೆ. ಜಿಲ್ಲಾ ಪೊಲೀಸ್ ಇಲಾಖೆಯು ಕಿರಣ್ ಕುಮಾರ್ ಶೆಟ್ಟಿ ಮತ್ತು ಸುಧಾ ಪ್ರಭುರವರನ್ನು ರಕ್ಷಿಸುತ್ತಿರುವುದು ಸ್ಪಷ್ಟವಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈದಿನ.ಕಾಮ್ ಜೊತೆ ಮಾತನಾಡಿದ ಕೋಟ ಪೋಲೀಸ್ ಠಾಣಾಧಿಕಾರಿ ಸುಧಾಪ್ರಭು, “ಅರೋಪಿ ಸುಜಾತ ಮತ್ತು ಆಶಾ ನೀಡಿರುವ ಹೇಳಿಕೆ ಸತ್ಯಕ್ಕೆ ದೂರವಾದುದು. ನಮಗೆ ಬಂದ ದೂರಿನ ಮೇರೆಗೆ ಇಬ್ಬರನ್ನೂ ಕರೆಸಿ ವಿಚಾರಣೆ ನಡೆಸಿದ್ದೇವೆಯೇ ಹೊರತು, ಯಾವುದೇ ರೀತಿಯ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿಲ್ಲ. ನಾವು ದೌರ್ಜನ್ಯ ಮಾಡಿದ್ದೇ ನಿಜವಾಗಿದ್ದರೆ, ಠಾಣೆಯಲ್ಲಿ ಸಿಸಿ ಕ್ಯಾಮರಾ ಇದೆ. ಅದನ್ನು ಪರಿಶೀಲಿಸಬಹುದು. ಪ್ರಕರಣದ ತನಿಖೆ ನಡೆಯುತ್ತಿದೆ” ಎಂದು ಹೇಳಿದರು.

ಚಿನ್ನವನ್ನು ಕಳೆದುಕೊಂಡ ಮಾಲಿಕ ಕಿರಣ್ ಕುಮಾರ್ ಶೆಟ್ಟಿ ಈದಿನ.ಕಾಮ್ ಜೊತೆ ಮಾತನಾಡಿ, “ಅಕ್ಟೋಬರ್ 01 ಮತ್ತು 02 ರಂದು ಮನೆ ಕೆಲಸಕ್ಕೆ ಕೆಲಸಗಾರರು ಬಂದಿದ್ದರು. ಈ ಸಂದರ್ಭದಲ್ಲಿ ನನ್ನ 27 ಗ್ರಾಂ ತೂಕದ 2 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಬಳೆ ಕಳೆದು ಹೋಗಿದೆ. ಮನೆ ಕೆಲಸಕ್ಕೆ ಬಂದಿದ್ದ ಸುಜಾತ ಕುಲಾಲ ಮತ್ತು ಆಶಾ ಶೆಟ್ಟಿ ಅವರ ಬಳಿ ವಿಚಾರಿಸಿದಾಗ ಸಂಶಯಾಸ್ಪದವಾಗಿ ಉತ್ತರ ಕೊಟ್ಟಿದ್ದರು. ಅದಲ್ಲದೇ, ಮನೆಯ ಒಳಗೆ ಮತ್ತು ಹೊರಗಿರುವ ಸಿ.ಸಿ ಕ್ಯಾಮರಾದಲ್ಲಿ ಇವರ ಬಗ್ಗೆ ಶಂಕೆ ವ್ಯಕ್ತವಾಗುವ ರೀತಿಯಲ್ಲಿ ನೆಡೆವಳಿಕೆ ತೋರುತ್ತಿದ್ದರು. ಅವರಲ್ಲಿ ವಿನಯ ಪೂರ್ವಕವಾಗಿ ವಿನಂತಿಸಿದರೂ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಹೀಗಾಗಿ, ಪೊಲೀಸರಿಗೆ ದೂರು ನೀಡಿದ್ದೇನೆ” ಎಂದಿದ್ದಾರೆ.

“ಪ್ರಕರಣ ಪೋಲಿಸ್ ತನಿಖೆಯ ಹಂತದಲ್ಲಿದೆ. ಅರೋಪಗಳ ಹೇಳಿಕೆಯನ್ನು ನಿಜ ಎಂದು ನಂಬಿ ಕೆಲವು ಸಂಘಟನೆಗಳು ಅವರಿಗೆ ಬೆಂಬಲ ನೀಡುತ್ತಿವೆ. ಸಂಘಟನೆಗಳು ಮೊದಲು ಸತ್ಯಾಸತ್ಯತೆಯನ್ನು ಅರ್ಥ ಮಾಡಿಕೊಳ್ಳಬೇಕು. ಆರೋಪಗಳ ಪರವಾಗಿ ನಿಂತು ನನ್ನ ಕುಟುಂಬವನ್ನು ತೇಜೋವಧೆ ಮಾಡುವುದನ್ನು ನೀಲ್ಲಿಸಬೇಕು. ಪ್ರತಿಭಟನೆಗೆ ಕರೆ ನೀಡಿರುವ ಸಂಘಟನೆಗಳು ಪ್ರಕರಣದ ಸತ್ಯಾಸತ್ಯತೆಗಳನ್ನು ಅರ್ಥ ಮಾಡಿಕೊಳ್ಳಬೇಕು” ಎಂದು ಹೇಳಿದ್ದಾರೆ.

ಈದಿನ.ಕಾಮ್ ಜೊತೆ ಮಾತನಾಡಿದ ಉಡುಪಿ ಜಿಲ್ಲೆಯ ಪೋಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ, “ಪ್ರಕರಣದ ತನಿಖೆ ನಡೆಯುತ್ತಿದೆ. ಕೋಟ ಪೋಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಲು ಸಂಘಟನೆಗಳು ತೀರ್ಮಾನಿಸಿವೆ. ಅದಕ್ಕೆ ಯಾವುದೇ ಅಭ್ಯಂತರ ಇಲ್ಲ. ಸಂಪೂರ್ಣ ತನಿಖೆ ಮಾಡಿದ ನಂತರ ತಪ್ಪಿತಸ್ಥರನ್ನು ಶಿಕ್ಷಿಸಲಾಗುವುದು” ಎಂದಿದ್ದಾರೆ.

LEAVE A REPLY

Please enter your comment!
Please enter your name here