ಮಂಗಳೂರು ನಗರದ ಪುರಭವನದಲ್ಲಿ ಕಳೆದ ವಾರ ಮಾಂಡ್ ಸೊಭಾಣ್ ನೇತೃತ್ವದಲ್ಲಿ ಆರಂಭಿಸಿದ್ದ ಅತೀ ದೀರ್ಘಾವಧಿಯ ಸಮೂಹಗಾಯನವು ಇಂದು ಹನ್ನೊಂದು ದಿನ ಹನ್ನೊಂದು ಗಂಟೆ ಹಾಗೂ ಹನ್ನೊಂದು ನಿಮಿಷಗಳನ್ನ ಪೂರ್ಣಗೊಳಿಸುವುದರೊಂದಿಗೆ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡನ್ನು ತನ್ನದಾಗಿಸಿಕೊಂಡಿತು.
ಸಂಜೆ 5:12 ಗಂಟೆಯಾಗುತ್ತಿದ್ದಂತೆ ಮಾಂಡ್ ಸೊಭಾಣ್ ಅಧ್ಯಕ್ಷ ಲುವಿ ಜೆ ಪಿಂಟೊ ಹಾಗೂ ಇತರ ಸಂಘಾಟಕರು ಹರ್ಷೋದ್ಗಾರದೊಂದಿಗೆ ವಿಶ್ವ ದಾಖಲೆಯನ್ನು ಸಂಭ್ರಮಿಸಿದರು. ಈ ಹಿಂದೆ 2024ರಲ್ಲಿ ವಡ್ತಾಲ್‌ನಲ್ಲಿ ಶ್ರೀ ಹರಿಕೃಷ್ಣ ಕೀರ್ತನ್ ಯಾಗ್ ಸಂಸ್ಥೆಯು ನಿರ್ಮಿಸಿದ್ದ 11 ದಿನಗಳು, 11 ಗಂಟೆಗಳು ಮತ್ತು 11 ನಿಮಿಷಗಳ (275 ಗಂಟೆಗಳು ಮತ್ತು 11 ನಿಮಿಷಗಳು) ಹಿಂದಿನ ಮೈಲಿಗಲ್ಲನ್ನು ಮಾಂಡ್ ಸೊಭಾಣ್ ಸಂಗೀತ ಮ್ಯಾರಥಾನ್ ಮೀರಿಸಿದೆ.
ಮಾಂಡ್ ಸೊಭಾಣ್ ಸಂಸ್ಥೆಯ 40 ನೇ ವಾರ್ಷಿಕೋತ್ಸವದ ನೆನಪಿಗಾಗಿ ಮತ್ತು ದಿವಂಗತ ಸಂಸ್ಥಾಪಕ ಎರಿಕ್ ಒಝೇರಿಯೊ ಅವರ ಸ್ಮರಣಾರ್ಥವಾಗಿ ಹಮ್ಮಿಕೊಳ್ಳಲಾದ ಮಹಾಸಂಗೀತ ಸಮ್ಮೇಳನದ ಪ್ರಮುಖ ಭಾಗವಾಗಿ ಈ ಐತಿಹಾಸಿಕ ದಾಖಲೆಯ ಪ್ರಯತ್ನ ನಡೆದಿತ್ತು. ದಾಖಲೆಯ ನಂತರವೂ ಗಾಯನವು ಮುಂದುವರೆದಿದ್ದು, ಭಾನುವಾರ ಸಂಜೆ 5:00 ಗಂಟೆಗೆ ‘ಟೀಮ್ ಸುಮೇಲ್’ ತಂಡದ ಹಾಡುಗಾರಿಕೆಯೊಂದಿಗೆ ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾಮೇಳಕ್ಕೆ ಅಧಿಕೃತ ತೆರೆ ಬೀಳಲಿದೆ.

ಈ ಮೈಲಿಗಲ್ಲಿನ ಬಗ್ಗೆ ಸಂತಸ ವ್ಯಕ್ತಪಡಿಸಿದ ಮಾಂಡ್ ಸೊಬಾಣ್ ಅಧ್ಯಕ್ಷ ಲುವಿ ಜೆ ಪಿಂಟೊ “ಒಂದು ಸಂಸ್ಥೆಯಾಗಿ ವಿಶ್ವ ದಾಖಲೆಯನ್ನು ಹೊಂದಲು ನಮಗೆ ಹೆಮ್ಮೆಯಿದೆ, ಆದರೆ ಗಾಯಕರು ಮತ್ತು ಈ ಬೃಹತ್ ಯೋಜನೆಗಾಗಿ ತೆರೆಮರೆಯಲ್ಲಿ ಶ್ರಮಿಸಿದ ಪ್ರತಿಯೊಬ್ಬರೂ ಈ ದಾಖಲೆಯ ನಿಜವಾದ ಒಡೆಯರು. ವಿಶ್ವದ ಮೂಲೆ ಮೂಲೆಗಳಿಂದ ನಮಗೆ ಬೆಂಬಲ ನೀಡಿದ ಸಮಗ್ರ ಕೊಂಕಣಿ ಸಮುದಾಯಕ್ಕೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ದಾಖಲೆ ನಿರ್ಮಿಸುವುದು ಮಾತ್ರ ನಮ್ಮ ಏಕೈಕ ಉದ್ದೇಶವಾಗಿರಲಿಲ್ಲ; ಈ ಪ್ರಯತ್ನದ ಮೂಲಕ ನಾವು ಕೊಂಕಣಿ ಸಮುದಾಯದ ಐಕ್ಯತೆ ಮತ್ತು ಶಕ್ತಿಯನ್ನು ಯಶಸ್ವಿಯಾಗಿ ಪ್ರದರ್ಶಿಸಿದ್ದೇವೆ.” ಎಂದು ಹೇಳಿದರು.




