ಸಂವಿಧಾನವನ್ನು ಕಾಪಾಡಬೇಕಾದ ಜವಾಬ್ದಾರಿ ಹೊಂದಿರುವ ನ್ಯಾಯಾಂಗದ ಪ್ರಮುಖ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ ನಿವೃತ್ತ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಹಾಗೂ ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರು ಮೀಸಲಾತಿ, ಮಹಿಳಾ ಮೀಸಲಾತಿ ಹಾಗೂ ಒಳಮೀಸಲಾತಿ ಕುರಿತು ನೀಡಿರುವ ಹೇಳಿಕೆಗಳು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಆತಂಕ ಮೂಡಿಸುತ್ತಿವೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ.) ಅಂಬೇಡ್ಕರ್ ವಾದದ ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕರು ಹೇಳಿದ್ದಾರೆ.
ಮೀಸಲಾತಿ ಸಂವಿಧಾನಕ್ಕೆ ವಿರುದ್ಧವಾದದ್ದು, ಚುನಾವಣೆಯಲ್ಲಿ ಮಹಿಳಾ ಮೀಸಲಾತಿಯ ಅಗತ್ಯವಿಲ್ಲ ಹಾಗೂ ಒಳಮೀಸಲಾತಿ ಸಮಾಜವನ್ನು ತುಂಡರಿಸುತ್ತದೆ ಎಂಬ ಅಭಿಪ್ರಾಯಗಳನ್ನು ಸಂತೋಷ್ ಹೆಗ್ಡೆ ವ್ಯಕ್ತಪಡಿಸಿರುವುದು ಸರಿಯಲ್ಲ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸೇರಿದಂತೆ ಶೋಷಿತ ಸಮುದಾಯಗಳಿಗೆ ಸಾಮಾಜಿಕ ಹಾಗೂ ಶೈಕ್ಷಣಿಕ ಸಮಾನತೆ ಕಲ್ಪಿಸುವ ಉದ್ದೇಶದಿಂದ ಸಂವಿಧಾನದಲ್ಲಿ ಮೀಸಲಾತಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಒಳಮೀಸಲಾತಿಯ ಉದ್ದೇಶ ಮೀಸಲಾತಿಯ ಸೌಲಭ್ಯವನ್ನು ವಂಚಿತ ಸಮುದಾಯಗಳಿಗೂ ಸಮಾನವಾಗಿ ತಲುಪಿಸುವುದಾಗಿದೆ. ಕೆಲ ಸಮುದಾಯಗಳಿಗೆ ಹೆಚ್ಚಿನ ಪ್ರಯೋಜನ ದೊರೆಯುತ್ತಿದ್ದು, ಹಿಂದುಳಿದ ಸಮುದಾಯಗಳಿಗೆ ಸಮರ್ಪಕವಾಗಿ ಸೌಲಭ್ಯ ಸಿಗುತ್ತಿಲ್ಲ ಎಂಬ ಹಿನ್ನೆಲೆಯಲ್ಲಿ ಒಳಮೀಸಲಾತಿಯ ಬೇಡಿಕೆ ಮುಂದುವರಿದಿದೆ. ಇದನ್ನು ಸಮಾಜ ಒಡೆಯುವ ಕ್ರಮವೆಂದು ಬಿಂಬಿಸುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.
ಮಹಿಳಾ ಮೀಸಲಾತಿಯ ಅಗತ್ಯವಿಲ್ಲ ಎಂಬ ಅಭಿಪ್ರಾಯವೂ ಸಾಮಾಜಿಕ ವಾಸ್ತವಾಂಶಗಳಿಗೆ ವಿರುದ್ಧವಾಗಿದೆ. ಮಹಿಳೆಯರಿಗೆ ಸಮಾನ ಅವಕಾಶ, ಮತದಾನದ ಹಕ್ಕು, ಆಸ್ತಿ ಹಕ್ಕು ಸೇರಿದಂತೆ ಹಲವು ಹಕ್ಕುಗಳನ್ನು ಸಂವಿಧಾನಾತ್ಮಕ ಮೌಲ್ಯಗಳು ಬಲಪಡಿಸಿವೆ. ರಾಜಕೀಯ ಪ್ರಾತಿನಿಧ್ಯದಲ್ಲಿಯೂ ಮಹಿಳೆಯರಿಗೆ ಸಮಾನ ಅವಕಾಶ ಕಲ್ಪಿಸುವುದು ಪ್ರಜಾಪ್ರಭುತ್ವದ ಬಲವರ್ಧನೆಗೆ ಅಗತ್ಯ ಎಂದು ತಿಳಿಸಿದ್ದಾರೆ.
ಮೀಸಲಾತಿಯ ವಿಚಾರದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ಸಮುದಾಯಗಳ ಹಕ್ಕುಗಳ ಬಗ್ಗೆ ಮಾತ್ರ ಪ್ರಶ್ನೆ ಎತ್ತದೆ, ವಿವಿಧ ವರ್ಗಗಳಿಗೆ ಲಭ್ಯವಿರುವ ಮೀಸಲಾತಿ ವ್ಯವಸ್ಥೆಯನ್ನೂ ಸಮಾನ ದೃಷ್ಟಿಯಿಂದ ಪರಿಶೀಲಿಸಬೇಕು. ಮೀಸಲಾತಿ ಕುರಿತು ಏಕಪಕ್ಷೀಯವಾದ ನಿಲುವುಗಳು ಸಾಮಾಜಿಕ ಅಸಮಾನತೆಯನ್ನು ಮತ್ತಷ್ಟು ಗಂಭೀರಗೊಳಿಸಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಜಾತಿ ವ್ಯವಸ್ಥೆ, ಅಸ್ಪೃಶ್ಯತೆ ಮತ್ತು ಸಾಮಾಜಿಕ ಅಸಮಾನತೆಯ ವಿರುದ್ಧ ಧ್ವನಿ ಎತ್ತುವ ಬದಲು ಮೀಸಲಾತಿಯನ್ನೇ ಪ್ರಶ್ನಿಸುವುದು ಸರಿಯಲ್ಲ. ಸಂವಿಧಾನದ ಆಶಯ ಮತ್ತು ಸಾಮಾಜಿಕ ನ್ಯಾಯದ ತತ್ವಗಳನ್ನು ಗೌರವಿಸಿ ಹೇಳಿಕೆ ನೀಡಬೇಕು. ಸಮಾಜದಲ್ಲಿ ಗೊಂದಲ ಹಾಗೂ ಭಿನ್ನಾಭಿಪ್ರಾಯಕ್ಕೆ ಕಾರಣವಾಗುವ ಹೇಳಿಕೆಗಳನ್ನು ನೀಡುವುದನ್ನು ಸಂತೋಷ್ ಹೆಗ್ಡೆ ಅವರು ಕೈಬಿಡಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ.) ಅಂಬೇಡ್ಕರ್ ವಾದದ ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕರು ಆಗ್ರಹಿಸಿದ್ದಾರೆ.






