ದೇಶದೆಲ್ಲೆಡೆ ಸ್ವಾತಂತ್ರ್ಯ ದಿನವನ್ನು ಸಡಗರ ಸಂಭ್ರಮದಿಂದ ಆಚರಿಸುತ್ತಿರುವ ಶುಭ ಸಂದರ್ಭದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮಗಳು ಸಾರ್ವಜನಿಕರಲ್ಲಿ ಹರ್ಷ, ಉತ್ಸಾಹ, ನವೋಲ್ಲಾಸ ಹಾಗೂ ದೇಶಾಭಿಮಾನವನ್ನು ಮೂಡಿಸುತ್ತಿವೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಹೇಳಿದರು.
ಬೀದರ್ ಕೋಟೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಸರ್ಕಾರಿ ನೌಕರರ ಸಂಘ, ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ‘ಹರ್ ಘರ್ ತಿರಂಗಾ’ ಅಭಿಯಾನದಡಿ ಆಯೋಜಿಸಿದ್ದ ಬೈಕ್ ರ‍್ಯಾಲಿಗೆ ಚಾಲನೆ ನೀಡಿ ಅವರು ಮಾತನಾಡಿದರು.
“ಬೀದರ್ ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದು, ವಿವಿಧ ಧರ್ಮಗಳ ಜನರು ಶಾಂತಿ, ಸೌಹಾರ್ದತೆ ಹಾಗೂ ಸಹಬಾಳ್ವೆಯಿಂದ ಬದುಕುತ್ತಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯನ್ನು ಪ್ರತಿಯೊಬ್ಬರೂ ಉತ್ಸಾಹ, ಸಂಭ್ರಮ ಹಾಗೂ ಸ್ವಾಭಿಮಾನದಿಂದ ಆಚರಿಸಬೇಕು” ಎಂದು ಕರೆ ನೀಡಿದರು.
ತಿರಂಗಾ ಧ್ವಜವನ್ನು ಹಿಡಿದುಕೊಂಡು ನೂರಾರು ಸಾರ್ವಜನಿಕರು ಬೈಕ್ ರ‍್ಯಾಲಿಯಲ್ಲಿ ಪಾಲ್ಗೊಂಡು ದೇಶಭಕ್ತಿಯ ಘೋಷಣೆಗಳನ್ನು ಕೂಗಿದರು. ರ‍್ಯಾಲಿಯು ಬೀದರ್ ಕೋಟೆಯ ಮುಖ್ಯ ದ್ವಾರದಿಂದ ಆರಂಭಗೊಂಡು ಚೌಬಾರಾ, ಬಸವೇಶ್ವರ ವೃತ್ತ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಬರೀದ್‌ಶಾಹಿ ಗಾರ್ಡನ್‌ನಲ್ಲಿ ಮುಕ್ತಾಯಗೊಂಡಿತು.
ಇದನ್ನೂ ಓದಿ : ವಚನ ಕಲ್ಯಾಣ | ಹದ ಮಣ್ಣಲ್ಲದೆ ಮಡಕೆಯಾಗಲಾರದು!
ಕಾರ್ಯಕ್ರಮದಲ್ಲಿ ಬೀದರ್ ಮಹಾನಗರ ಪಾಲಿಕೆ ಆಯುಕ್ತ ಮುಕುಲ್ ಜೈನ್, ಅಪರ ಜಿಲ್ಲಾಧಿಕಾರಿ ಸುರೇಖಾ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸೋಮಶೇಖರ ಬಿರಾದಾರ್, ಇ.ಒ.ಕಿರಣ ಪಾಟೀಲ್, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸುರೇಶ್ ಚೆನ್ನಶೆಟ್ಟಿ, ಕರ್ನಾಟಕ ಜನಪದ ಅಕಾಡೆಮಿ ಸದಸ್ಯ ವಿಜಯಕುಮಾರ್ ಸೋನಾರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಶಿಂಧೆ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಜಿಲ್ಲಾಮಟ್ಟದ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.





