ಮಾಜಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಹಾಗೂ ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರು ಇತ್ತೀಚೆಗೆ ನೀಡಿರುವ ಮೀಸಲಾತಿ ವಿರೋಧಿ ಹೇಳಿಕೆ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ.) ಅಂಬೇಡ್ಕರ್‌ವಾದದ ರಾಜ್ಯ ಸಂಘಟನಾ ಸಂಚಾಲಕ ಸುಂದರ ಮಾಸ್ತರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂವಿಧಾನವು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯಗಳಿಗೆ ಪ್ರಾತಿನಿಧ್ಯ ಕಲ್ಪಿಸುವ ಉದ್ದೇಶದಿಂದ ಮೀಸಲಾತಿಯನ್ನು ಒದಗಿಸಿದೆ. ಇಂತಹ ಸಂವಿಧಾನದತ್ತ ಹಕ್ಕನ್ನು ಪ್ರಶ್ನಿಸುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.
“ತಮ್ಮ ಕುಟುಂಬ ಹಾಗೂ ಸಮುದಾಯದವರು ಮೀಸಲಾತಿಯ ಸೌಲಭ್ಯ ಪಡೆದುಕೊಂಡು, ಇದೀಗ ಇತರ ಸಮುದಾಯಗಳಿಗೆ ಮೀಸಲಾತಿ ಬೇಡ ಎನ್ನುವುದು ಯಾವ ನ್ಯಾಯ?” ಎಂದು ಸಂತೋಷ್ ಹೆಗ್ಡೆ ಅವರನ್ನು ಸುಂದರ ಮಾಸ್ತರ್ ಪ್ರಶ್ನಿಸಿದ್ದಾರೆ.
ಬಂಟ ಸಮುದಾಯವು ಪ್ರವರ್ಗ 3ಬಿ ಅಡಿಯಲ್ಲಿ ಮೀಸಲಾತಿ ಪಡೆಯುತ್ತಿರುವುದನ್ನು ಉಲ್ಲೇಖಿಸಿದ ಅವರು, “ಬಂಟ ಸಮುದಾಯಕ್ಕೆ ದೊರೆಯುತ್ತಿರುವ ಮೀಸಲಾತಿಯನ್ನು ವಿರೋಧಿಸದೆ, ದಲಿತ ಹಾಗೂ ಹಿಂದುಳಿದ ಸಮುದಾಯಗಳ ಮೀಸಲಾತಿಯನ್ನು ಮಾತ್ರ ಪ್ರಶ್ನಿಸುವುದೇಕೆ?” ಎಂದು ಪ್ರಶ್ನಿಸಿದ್ದಾರೆ.
ಒಳಮೀಸಲಾತಿಯಿಂದ ಸಮಾಜ ವಿಭಜನೆಯಾಗುತ್ತದೆ ಎಂಬ ವಾದ ಸರಿಯಲ್ಲ ಎಂದು ಸುಂದರ ಮಾಸ್ತರ್ ಹೇಳಿದ್ದಾರೆ. ಒಂದೇ ಮೀಸಲಾತಿ ವರ್ಗದೊಳಗೆ ಹಲವು ಸಮುದಾಯಗಳಿದ್ದು, ಕೆಲವು ಸಮುದಾಯಗಳು ಹೆಚ್ಚಿನ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಅತ್ಯಂತ ಹಿಂದುಳಿದ ಸಮುದಾಯಗಳಿಗೆ ಅವಕಾಶಗಳು ತಲುಪುವಂತೆ ಮಾಡುವ ಅಗತ್ಯವಿದೆ ಎಂದಿದ್ದಾರೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿರುವ ಪರಿಶಿಷ್ಟ ಪಂಗಡಗಳ ಸಮುದಾಯಗಳನ್ನು ಉದಾಹರಿಸಿದ ಅವರು, ಅತ್ಯಂತ ಹಿಂದುಳಿದ ಕೊರಗ ಸಮುದಾಯದ ಸ್ಥಿತಿಗತಿಗಳತ್ತ ಗಮನ ಹರಿಸಬೇಕು ಎಂದು ಹೇಳಿದ್ದಾರೆ.
“ಕೊರಗ ಸಮುದಾಯದ ಅನೇಕ ಕುಟುಂಬಗಳು ಇಂದಿಗೂ ಅತ್ಯಂತ ಕಷ್ಟಕರ ಪರಿಸ್ಥಿತಿಯಲ್ಲಿ ಜೀವನ ನಡೆಸುತ್ತಿವೆ. ಇಂತಹ ಸಂದರ್ಭದಲ್ಲಿ ಮೀಸಲಾತಿಯ ಅವಕಾಶಗಳು ಎಲ್ಲ ಸಮುದಾಯಗಳಿಗೂ ಸಮಾನವಾಗಿ ತಲುಪಬೇಕೆಂಬ ಉದ್ದೇಶದಿಂದ ಒಳಮೀಸಲಾತಿ ಜಾರಿಗೆ ತರುವುದರಲ್ಲಿ ತಪ್ಪೇನಿದೆ?” ಎಂದು ಅವರು ಪ್ರಶ್ನಿಸಿದ್ದಾರೆ.
“ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಶತಮಾನಗಳಿಂದ ದಲಿತ ಸಮುದಾಯಗಳನ್ನು ಸಾಮಾಜಿಕವಾಗಿ ದೂರವಿಡಲಾಯಿತು. ಆಗ ಸಮಾಜ ತುಂಡಾಗಲಿಲ್ಲವೇ? ಅಸ್ಪೃಶ್ಯತೆ ಮತ್ತು ಜಾತಿ ಅಸಮಾನತೆಯ ವಿರುದ್ಧ ನ್ಯಾಯಮೂರ್ತಿಯಾಗಿದ್ದ ಸಂದರ್ಭದಲ್ಲಿ ಏಕೆ ಧ್ವನಿ ಎತ್ತಲಿಲ್ಲ?” ಎಂದು ಸುಂದರ ಮಾಸ್ತರ್ ಪ್ರಶ್ನಿಸಿದ್ದಾರೆ.
ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದವರಿಗೆ ಶೇ.10ರಷ್ಟು ಮೀಸಲಾತಿ ಕಲ್ಪಿಸಿದ ಸಂದರ್ಭದಲ್ಲಿಯೂ ಇದೇ ರೀತಿಯ ವಿರೋಧ ವ್ಯಕ್ತವಾಗಿತ್ತೇ ಎಂದು ಅವರು ಪ್ರಶ್ನಿಸಿದ್ದಾರೆ.
“ಒಳಮೀಸಲಾತಿ ಎಂದರೆ ದಲಿತ ಸಮುದಾಯಕ್ಕೆ ಸಂವಿಧಾನ ನೀಡಿರುವ ಶೇ.15ರ ಮೀಸಲಾತಿಯೊಳಗಿನ ಅವಕಾಶಗಳ ಸಮಾನ ಹಂಚಿಕೆ. ಇದು ಬೇರೊಂದು ಸಮುದಾಯದ ಮೀಸಲಾತಿಯನ್ನು ಕಸಿದುಕೊಳ್ಳುವ ಕ್ರಮವಲ್ಲ” ಎಂದು ಅವರು ಹೇಳಿದ್ದಾರೆ.
ಮೀಸಲಾತಿ ಯಾರೊಬ್ಬರು ನೀಡಿದ ಭಿಕ್ಷೆಯಲ್ಲ; ಅದು ಭಾರತೀಯ ಸಂವಿಧಾನವು ಸಾಮಾಜಿಕ ನ್ಯಾಯ ಮತ್ತು ಸಮಾನ ಪ್ರಾತಿನಿಧ್ಯಕ್ಕಾಗಿ ನೀಡಿರುವ ಹಕ್ಕು ಎಂದು ಸುಂದರ ಮಾಸ್ತರ್ ತಿಳಿಸಿದ್ದಾರೆ.
“ನ್ಯಾಯಮೂರ್ತಿ ಸಂತೋಷ್ ಹೆಗ್ಡೆಯವರು ತಮ್ಮ ಘನತೆ, ವಿದ್ಯಾರ್ಹತೆ ಮತ್ತು ಅನುಭವಕ್ಕೆ ತಕ್ಕಂತೆ ವಿಶಾಲ ಮನೋಭಾವದಿಂದ ಸಮಾಜವನ್ನು ನೋಡುವ ಅಗತ್ಯವಿದೆ. ಜಾತಿ ಅಸಮಾನತೆ, ಅಸ್ಪೃಶ್ಯತೆ ಹಾಗೂ ಸಾಮಾಜಿಕ ಅನ್ಯಾಯದ ಮೂಲ ಕಾರಣಗಳನ್ನು ಅರ್ಥಮಾಡಿಕೊಂಡು, ಅವಕಾಶ ವಂಚಿತ ಸಮುದಾಯಗಳ ಪರವಾಗಿ ನಿಲ್ಲಬೇಕು” ಎಂದು ಅವರು ಒತ್ತಾಯಿಸಿದ್ದಾರೆ.
ಮೀಸಲಾತಿ ಹಾಗೂ ಒಳಮೀಸಲಾತಿ ಕುರಿತು ತಮ್ಮ ನಿಲುವನ್ನು ಮರುಪರಿಶೀಲಿಸುವಂತೆ ಸಂತೋಷ್ ಹೆಗ್ಡೆ ಅವರಿಗೆ ಸುಂದರ ಮಾಸ್ತರ್ ಮನವಿ ಮಾಡಿದ್ದಾರೆ.






