ಪ್ರಮಾಣ ಪತ್ರಗಳಿಗಾಗಿ ಪರದಾಟ: ಸರ್ವರ್ ಸಮಸ್ಯೆ, ಸಾಲು ಮತ್ತು ಗೊಂದಲಕ್ಕೆ ಸಿಲುಕಿದ ಮೈಸೂರು-ಮಂಡ್ಯ ಜನತೆ

Date:

ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಸೇರಿದಂತೆ ವಿವಿಧ ಸರ್ಕಾರಿ ಪ್ರಮಾಣ ಪತ್ರಗಳನ್ನು ಪಡೆಯಲು ಮೈಸೂರು ಜಿಲ್ಲೆಯ ಹಲವು ಸೇವಾ ಕೇಂದ್ರಗಳು ಹಾಗೂ ನಾಡಕಚೇರಿಗಳಲ್ಲಿ ಸಾರ್ವಜನಿಕರು ದಿನಗಟ್ಟಲೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಪದೇಪದೇ ಕೈಕೊಡುವ ಸರ್ವರ್, ಉದ್ದುದ್ದ ಸಾಲು, ಸಿಬ್ಬಂದಿ ಕೊರತೆ ಹಾಗೂ ಪ್ರಮಾಣ ಪತ್ರಗಳ ಕುರಿತು ಸ್ಪಷ್ಟ ಮಾಹಿತಿಯ ಕೊರತೆ ಜನರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ.

- Advertisement -

ಮೈಸೂರಿನ ಯಾದವಗಿರಿಯಲ್ಲಿರುವ ಮೈಸೂರು ಮಹಾನಗರ ಪಾಲಿಕೆಯ ಸೇವಾ ಕೇಂದ್ರದಲ್ಲಿಯೂ ಬೆಳಗ್ಗೆಯಿಂದಲೇ ಜನಜಂಗುಳಿ ಕಂಡುಬರುತ್ತಿದ್ದು, ಸಾರ್ವಜನಿಕರು ಸರದಿಯಲ್ಲಿ ಗಂಟೆಗಟ್ಟಲೆ ನಿಂತು ತಮ್ಮ ಕೆಲಸಕ್ಕಾಗಿ ಕಾಯುವಂತಾಗಿದೆ. ಸರ್ವರ್ ಸಮಸ್ಯೆಯಿಂದ ಒಂದೇ ಕೆಲಸಕ್ಕಾಗಿ ಹಲವು ಬಾರಿ ಕಚೇರಿಗೆ ಬರಬೇಕಾಗಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಟ್ಟದಷ್ಟಾದ ಅತ್ಯಾಚಾರ ಪ್ರಕರಣಗಳು – ತೆವಳುತ್ತಿರುವ ನ್ಯಾಯದಾನ

ಪೊಲೀಸರೆಂದು ನಟಿಸಿ ಬೆದರಿಸುವುದು, ನಿರ್ಜನ ಪ್ರದೇಶಗಳಲ್ಲಿ ತೋಳಗಳಂತೆ ಕಾದು ಹಲ್ಲೆಗೈದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದೆಸೆಯುವುದು, ಕಿಂಚಿತ್ತೂ ಭಯವಿಲ್ಲದೆ ಕೃತ್ಯದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಲ್ಲದೆ, ಸಂತ್ರಸ್ತರ ಗುರುತು ಬಹಿರಂಗಪಡಿಸುವ ಪ್ರವೃತ್ತಿ...

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ. ಪೌರಕಾರ್ಮಿಕರ ಮಗನಾಗಿ ಹುಟ್ಟಿ, ಸಚಿವ ಸ್ಥಾನದವರೆಗೆ ಬೆಳೆದವರು ಕೆ.ಎಸ್....

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ,...

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎದೆ ತಟ್ಟಿಕೊಳ್ಳುತ್ತಿದೆ. ಶತೃ ದೇಶವನ್ನು ಮಣಿಸುವುದು ಯಾರಿಗಾದರೂ ಹೆಮ್ಮೆಯೇ. ಆದರೆ, ದೇಶದ ಅಖಂಡತೆಗೆ ಅತಿ...

ಪಡಿತರಕ್ಕೆ ಜಾತಿ-ಆದಾಯ ಪ್ರಮಾಣ ಪತ್ರ: ಗೊಂದಲಕ್ಕೆ ತೆರೆ ಯಾವಾಗ?

ಇದರ ನಡುವೆ ಕೆಲವು ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಪಡೆಯಲು ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು RD ಮೂಲಕ ಲಿಂಕ್ ಮಾಡಿ ಮ್ಯಾಪಿಂಗ್ ಮಾಡಿಸಬೇಕು. ಇಲ್ಲದಿದ್ದರೆ ಈ ತಿಂಗಳ ಪಡಿತರ ಸಿಗುವುದಿಲ್ಲ ಎಂಬ ರೀತಿಯ ಮಾಹಿತಿ ನೀಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಆದರೆ, ಈ ಸಂಬಂಧ ಸರ್ಕಾರ ಅಥವಾ ಆಹಾರ ಇಲಾಖೆ ಕಡ್ಡಾಯ ಆದೇಶ ಹೊರಡಿಸಿರುವುದೇ ಎಂಬುದು ಸಾರ್ವಜನಿಕರಿಗೆ ಸ್ಪಷ್ಟವಾಗಿಲ್ಲ. ಅಧಿಕೃತ ಆದೇಶದ ಕುರಿತು ಮಾಹಿತಿ ಇಲ್ಲದಿರುವಾಗ ನ್ಯಾಯಬೆಲೆ ಅಂಗಡಿಗಳಿಂದ ಇಂತಹ ಸೂಚನೆಗಳು ಬರುತ್ತಿರುವುದು ಜನರಲ್ಲಿ ಆತಂಕ ಮತ್ತು ಗೊಂದಲಕ್ಕೆ ಕಾರಣವಾಗಿದೆ.

ಪಡಿತರ ಚೀಟಿಯಲ್ಲಿರುವ ಪ್ರತಿಯೊಬ್ಬ ಸದಸ್ಯರಿಗೂ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಅಗತ್ಯವೇ? ಅಥವಾ ಮನೆಯ ಮುಖ್ಯಸ್ಥರ ಪ್ರಮಾಣ ಪತ್ರ ಸಾಕೇ? ಎಂಬುದಕ್ಕೂ ಸ್ಪಷ್ಟತೆ ಇಲ್ಲ. ಈ ಕುರಿತು ಆಹಾರ ಇಲಾಖೆ ಮತ್ತು ಜಿಲ್ಲಾಡಳಿತ ತಕ್ಷಣ ಅಧಿಕೃತ ಸ್ಪಷ್ಟನೆ ನೀಡಬೇಕು ಎಂಬ ಒತ್ತಾಯ ಸಾರ್ವಜನಿಕರಿಂದ ಕೇಳಿಬರುತ್ತಿದೆ. ಕಳೆದ ತಿಂಗಳು ಕೊಡಗು ಜಿಲ್ಲೆಯಲ್ಲಿಯೂ ಇದೇ ರೀತಿಯ ಗೊಂದಲದ ಬಗ್ಗೆ ದೂರುಗಳು ಕೇಳಿಬಂದಿದ್ದವು. ಇದೀಗ ಮೈಸೂರು ಜಿಲ್ಲೆಯ ಕೆಲವೆಡೆ ಇಂತಹ ಪರಿಸ್ಥಿತಿ ಎದುರಾಗಿರುವುದು ಜನರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

“ಆರೋಗ್ಯ ಸರಿಯಿಲ್ಲ, ಕ್ಯೂನಲ್ಲಿ ನಿಲ್ಲಲು ಆಗುತ್ತಿಲ್ಲ”

ಪಡುವಾರಹಳ್ಳಿಯ ನಾಗಮ್ಮ ಮಾತನಾಡಿ, “ಪಡಿತರಕ್ಕೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಕೊಡಲಿಲ್ಲ ಅಂದ್ರೆ ಈ ತಿಂಗಳು ರೇಷನ್ ಕೊಡಲ್ಲ ಅಂತಿದ್ದಾರೆ. ಮೂರು ದಿನಗಳಿಂದ ಬರ್ತಾ ಇದ್ದೀನಿ. ನನಗೆ ಆರೋಗ್ಯ ಸರಿಯಿಲ್ಲ, ಕ್ಯೂನಲ್ಲಿ ನಿಲ್ಲಲು ಆಗಲ್ಲ. ಸರ್ವರ್ ಇಲ್ಲ ಅಂತಾರೆ. ಏನ್ ಮಾಡೋದು,” ಎಂದು ಅಳಲು ತೋಡಿಕೊಂಡರು.

ಪಡಿತರ ಸಿಗುವುದಿಲ್ಲ ಎಂಬ ಆತಂಕದಿಂದ ಆರೋಗ್ಯದ ಸಮಸ್ಯೆಯ ನಡುವೆಯೂ ಮೂರು ದಿನಗಳಿಂದ ಸೇವಾ ಕೇಂದ್ರಕ್ಕೆ ಬರುತ್ತಿರುವ ಅವರ ಪರಿಸ್ಥಿತಿ, ಪ್ರಮಾಣ ಪತ್ರಗಳಿಗಾಗಿ ಸಾರ್ವಜನಿಕರು ಎದುರಿಸುತ್ತಿರುವ ಸಂಕಷ್ಟದ ತೀವ್ರತೆಯನ್ನು ತೋರಿಸುತ್ತದೆ.

15 ದಿನಗಳಿಂದ ಕಚೇರಿಗೆ ಅಲೆದಾಟ

ಒಂಟಿಕೊಪ್ಪಲಿನ ಲಕ್ಷ್ಮಿ ಮಾತನಾಡಿ, “ಪಡಿತರಕ್ಕೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಕೇಳಿದ್ದಾರೆ. ಅದಕ್ಕಾಗಿ 15 ದಿನಗಳಿಂದ ಕಚೇರಿಗೆ ಬರುತ್ತಿದ್ದೇವೆ. ಸರ್ವರ್ ಸಮಸ್ಯೆ ಇದೆ ಎಂದು ಹೇಳುತ್ತಾರೆ. ಪಡಿತರ ಚೀಟಿಯಲ್ಲಿರುವ ಎಲ್ಲ ಸದಸ್ಯರ ಪ್ರಮಾಣ ಪತ್ರ ಮಾಡಿಸಬೇಕು ಎನ್ನುತ್ತಾರೆ. ಆದರೆ ಇಲ್ಲಿ ಇಬ್ಬರಿಗಿಂತ ಹೆಚ್ಚು ಪ್ರಮಾಣ ಪತ್ರ ಮಾಡಿಕೊಡುವುದಿಲ್ಲ. ಸದ್ಯ ಒಬ್ಬರದ್ದಾದರೂ ಆಗಲಿ ಎಂದು ಪರದಾಡುತ್ತಿದ್ದೇವೆ. ಕೆಲಸ ಬಿಟ್ಟು ಓಡಾಡುವಂತಾಗಿದೆ,” ಎಂದು ಅಳಲು ತೋಡಿಕೊಂಡರು.

“ಜಾತಿ ಮತ್ತು ಆದಾಯ ಪ್ರಮಾಣ ಪತ್ರಕ್ಕೆ ಶಾಲಾ ವರ್ಗಾವಣೆ ಪತ್ರ ಕೇಳುತ್ತಿದ್ದಾರೆ. ನಮ್ಮ ಬಳಿ ಅದು ಇಲ್ಲ. ಹೀಗಾಗಿ ಲಾಯರ್ ಮೂಲಕ ಅಫಿಡವಿಟ್ ಮಾಡಿಸಿಕೊಂಡು ಬಂದಿದ್ದೇವೆ,” ಎಂದು ಅವರು ತಿಳಿಸಿದರು.

ಬನ್ನಿಮಂಟಪದ ಆಯೇಷಾ ಮಾತನಾಡಿ, “ನ್ಯಾಯಬೆಲೆ ಅಂಗಡಿಯಲ್ಲಿ ಕಡ್ಡಾಯವಾಗಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ನೀಡಬೇಕು ಎಂದು ಹೇಳಿದ್ದಾರೆ. ಮೊದಲು ಮನೆಯ ಮುಖ್ಯಸ್ಥರದ್ದು ಸಾಕು ಎಂದು ಹೇಳುತ್ತಿದ್ದವರು ಈಗ ಮನೆಯಲ್ಲಿರುವ ಎಲ್ಲರದ್ದೂ ಬೇಕು ಎನ್ನುತ್ತಿದ್ದಾರೆ. ನಮ್ಮ ಮನೆಯಲ್ಲಿ ಮೂವರು ಇದ್ದಾರೆ. 15 ದಿನಗಳಿಂದ ಬರುತ್ತಿದ್ದೇವೆ. ಸರ್ವರ್ ಇಲ್ಲ ಎಂದು ಹೇಳುತ್ತಾರೆ. ಸಂಜೆ 7 ಗಂಟೆಯವರೆಗೂ ಕಾಯಬೇಕಾದ ಪರಿಸ್ಥಿತಿ ಬಂದಿದೆ,” ಎಂದು ಹೇಳಿದರು.

ವಿಜಯನಗರದ ರಘುನಾಥ್ ಅವರು ಭೂಮಿ ದೃಢೀಕರಣ ಪತ್ರ ಮಾಡಿಸಲು ಮೂರು ದಿನಗಳಿಂದ ಕಚೇರಿಗೆ ಬರುತ್ತಿದ್ದು “ಪ್ರತಿದಿನ ಸರ್ವರ್ ಸಮಸ್ಯೆ ಎನ್ನುತ್ತಿದ್ದಾರೆ. ಆಧಾರ್ ಕೆವೈಸಿ ಆಗುತ್ತಿಲ್ಲ. ಬೆಳಗ್ಗೆ 6 ಗಂಟೆಯಿಂದಲೇ ಜನರು ಬಂದು ಸರದಿಯಲ್ಲಿ ನಿಲ್ಲುತ್ತಾರೆ. ಕಚೇರಿ ತೆರೆಯುವುದು 10.30ಕ್ಕೆ. ಸರ್ಕಾರ ಸರಿಯಾದ ವ್ಯವಸ್ಥೆ ಮಾಡಿಲ್ಲ,” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಪ್ರಮಾಣ ಪತ್ರಗಳ ಬೇಡಿಕೆ ಹೆಚ್ಚಲು ಹಲವು ಕಾರಣ

ರಾಜ್ಯ ಸರ್ಕಾರ ವಿವಿಧ ಇಲಾಖೆಗಳ ಖಾಲಿ ಹುದ್ದೆಗಳ ಭರ್ತಿಗೆ ಮುಂದಾಗಿರುವುದು, ಪೊಲೀಸ್ ಇಲಾಖೆಯ ನೇಮಕಾತಿ ಪ್ರಕ್ರಿಯೆಗಳು ನಡೆಯುತ್ತಿರುವುದು, ಒಳಮೀಸಲಾತಿ ಹಿನ್ನೆಲೆಯಲ್ಲಿ ಜಾತಿ ದಾಖಲೆಗಳಲ್ಲಿ ಬದಲಾವಣೆ ಹಾಗೂ ಜಾತಿ ಪ್ರಮಾಣ ಪತ್ರಗಳಲ್ಲಿನ ತಪ್ಪುಗಳ ತಿದ್ದುಪಡಿ ಸೇರಿದಂತೆ ಹಲವು ಕಾರಣಗಳಿಂದ ಪ್ರಮಾಣ ಪತ್ರಗಳ ಬೇಡಿಕೆ ಹೆಚ್ಚಾಗಿದೆ. ಇದರ ಜೊತೆಗೆ ಶಾಲಾ ವಿದ್ಯಾರ್ಥಿಗಳ ವಿದ್ಯಾರ್ಥಿವೇತನಕ್ಕೆ ಅಗತ್ಯವಿರುವ ದಾಖಲೆಗಳು ಹಾಗೂ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಅಗತ್ಯವೂ ಸೇವಾ ಕೇಂದ್ರಗಳಲ್ಲಿ ಜನದಟ್ಟಣೆ ಹೆಚ್ಚಲು ಕಾರಣವಾಗಿದೆ.

SIR ಹಿನ್ನೆಲೆಯಲ್ಲೂ ದಾಖಲೆಗಳಿಗೆ ಬೇಡಿಕೆ

ಮತದಾರರ ಪಟ್ಟಿಯ ಪರಿಷ್ಕರಣೆ ಹಾಗೂ SIR ಪ್ರಕ್ರಿಯೆಯ ಹಿನ್ನೆಲೆಯಲ್ಲಿ ಖಾಯಂ ನಿವಾಸ ಪ್ರಮಾಣ ಪತ್ರ ಸೇರಿದಂತೆ ವಿವಿಧ ದಾಖಲೆಗಳನ್ನು ಪಡೆಯಲು ಜನರು ತಾಲ್ಲೂಕು ಕಚೇರಿ ಮತ್ತು ನಾಡಕಚೇರಿಗಳತ್ತ ಮುಖ ಮಾಡುತ್ತಿದ್ದಾರೆ. ಒಂದೇ ಸಮಯದಲ್ಲಿ ವಿವಿಧ ಸರ್ಕಾರಿ ಸೌಲಭ್ಯಗಳು, ಶಿಕ್ಷಣ, ಉದ್ಯೋಗ, ಪಡಿತರ ಹಾಗೂ ಮತದಾರರ ಪಟ್ಟಿಗೆ ಸಂಬಂಧಿಸಿದ ಕೆಲಸಗಳಿಗೆ ದಾಖಲೆಗಳ ಅಗತ್ಯ ಎದುರಾಗಿರುವುದರಿಂದ ಪ್ರಮಾಣ ಪತ್ರ ಕೇಂದ್ರಗಳ ಮೇಲಿನ ಒತ್ತಡ ಹೆಚ್ಚಾಗಿದೆ.

ಸರ್ವರ್ ಸಮಸ್ಯೆ ಪದೇಪದೇ ಕಾಣಿಸಿಕೊಳ್ಳುತ್ತಿರುವುದರಿಂದ ಕೆಲಸ ಪೂರ್ಣಗೊಳ್ಳದೆ ಸಾರ್ವಜನಿಕರು ಮತ್ತೆ ಮತ್ತೆ ಕಚೇರಿಗೆ ಬರುವಂತಾಗಿದೆ. ಸಿಬ್ಬಂದಿ ಕೊರತೆಯೂ ಸಮಸ್ಯೆಯನ್ನು ಉಲ್ಬಣಗೊಳಿಸಿದೆ. ಬೆಳಗ್ಗೆಯಿಂದ ಸರದಿಯಲ್ಲಿ ನಿಂತರೂ ಕೆಲಸ ಆಗದೆ ಸಂಜೆವರೆಗೂ ಕಾಯಬೇಕಾದ ಪರಿಸ್ಥಿತಿ ಕೆಲವೆಡೆ ಕಂಡುಬರುತ್ತಿದೆ.

ಮೈಸೂರು ಮಾತ್ರವಲ್ಲ, ಮಂಡ್ಯದಲ್ಲೂ ಇದೇ ಗೋಳು

ಮೈಸೂರು ಜಿಲ್ಲೆಯಲ್ಲಿನ ಸಮಸ್ಯೆಗೆ ಹೋಲುವ ಪರಿಸ್ಥಿತಿ ಮಂಡ್ಯ ಗ್ರಾಮಾಂತರ ತಾಲ್ಲೂಕಿನ ತಗ್ಗಹಳ್ಳಿ ಹೋಬಳಿಯ ಕೊತ್ತತ್ತಿ-2ನೇ ಮಂಡ್ಯ ತಾಲೂಕು ನಾಡಕಚೇರಿಯಲ್ಲಿಯೂ ಕಂಡುಬರುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. ಜಾತಿ ಪ್ರಮಾಣ ಪತ್ರ, ಆದಾಯ ದೃಢೀಕರಣ ಪತ್ರ, ಶಾಶ್ವತ ವಾಸಸ್ಥಳ ಪ್ರಮಾಣ ಪತ್ರ ಸೇರಿದಂತೆ ವಿವಿಧ ದಾಖಲೆಗಳನ್ನು ಪಡೆಯಲು ಹಾಗೂ ಈಗಾಗಲೇ ನೀಡಿರುವ ಪ್ರಮಾಣ ಪತ್ರಗಳಲ್ಲಿನ ತಪ್ಪುಗಳನ್ನು ತಿದ್ದುಪಡಿ ಮಾಡಿಸಲು ಸಾರ್ವಜನಿಕರು ವಾರಗಟ್ಟಲೆ, ತಿಂಗಳುಗಟ್ಟಲೆ ಕಚೇರಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನಲಾಗಿದೆ.

ಮಂಡ್ಯ ನಗರದಿಂದ ಸುಮಾರು 5 ಕಿ.ಮೀ. ದೂರದಿಂದ ಕೂಲಿ ಕೆಲಸ ಬಿಟ್ಟು ನಾಡಕಚೇರಿಗೆ ಬರುವ ಬಡ ಕಾರ್ಮಿಕರು ಪ್ರಯಾಣಕ್ಕಾಗಿ ಪ್ರತಿದಿನ ಹಣ ಖರ್ಚು ಮಾಡಬೇಕಾಗಿದೆ. ಕೆಲವರು ಊಟವನ್ನೂ ಬಿಟ್ಟು ಇಡೀ ದಿನ ಕಚೇರಿಯಲ್ಲಿ ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ. ಮಹಿಳೆಯರು ಮತ್ತು ವೃದ್ಧರು ಗಂಟೆಗಟ್ಟಲೆ ಕಾಯುತ್ತಿರುವ ದೃಶ್ಯವೂ ಕಂಡುಬರುತ್ತಿದೆ.

ಅಧಿಕಾರಿಗಳ ಹೇಳಿಕೆಗೂ ವಾಸ್ತವ ಸ್ಥಿತಿಗೂ ವ್ಯತ್ಯಾಸ?

ಸಮಸ್ಯೆಯ ಕುರಿತು ಅಧಿಕಾರಿಗಳ ಗಮನಕ್ಕೆ ತಂದಾಗ, ಸರ್ವರ್ ಸಮಸ್ಯೆಗಳನ್ನು ಸರಿಪಡಿಸಲಾಗಿದ್ದು, ಕೆಲವು ಕಡೆ ಹೆಚ್ಚುವರಿ ಕಂಪ್ಯೂಟರ್‌ಗಳನ್ನು ಒದಗಿಸಲಾಗಿದೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿರುವುದಾಗಿ ತಿಳಿದುಬಂದಿದೆ. ಆದರೆ ನಾಡಕಚೇರಿಗೆ ಪ್ರತಿದಿನ ಭೇಟಿ ನೀಡುತ್ತಿರುವ ಸಾರ್ವಜನಿಕರ ಅನುಭವ ಇದಕ್ಕೆ ವಿರುದ್ಧವಾಗಿದೆ ಎಂಬ ಆರೋಪ ಕೇಳಿಬಂದಿದೆ. ಸರ್ವರ್ ಸಮಸ್ಯೆಯ ಜೊತೆಗೆ ಪ್ರಮಾಣ ಪತ್ರಗಳಲ್ಲಿನ ತಪ್ಪುಗಳನ್ನು ತಿದ್ದುಪಡಿ ಮಾಡುವಲ್ಲಿಯೂ ವಿಳಂಬ ಹಾಗೂ ಹೊಣೆಗಾರಿಕೆಯ ಕೊರತೆ ಇದೆ ಎಂದು ಸಾರ್ವಜನಿಕರು ದೂರಿದ್ದಾರೆ.

ಪ್ರಮಾಣ ಪತ್ರದಲ್ಲೇ ಜಾತಿ, ಕುಟುಂಬದ ವಿವರದಲ್ಲಿ ತಪ್ಪು

ಕರ್ನಾಟಕ ಜನಶಕ್ತಿ ಸಂಘಟನೆಯ ಮುಖಂಡೆ ಶಿಲ್ಪಾ ಬಿ.ಎಸ್. ಅವರ ಕುಟುಂಬದ ಪ್ರಕರಣವೂ ಇದಕ್ಕೆ ಉದಾಹರಣೆಯಾಗಿದೆ ಎಂದು ಹೇಳಲಾಗಿದೆ. ಅವರ ತಂದೆ-ತಾಯಿಯ ಜಾತಿ ಬಂಜತ್ರಿಯಾಗಿದ್ದರೂ ಪ್ರಮಾಣ ಪತ್ರದಲ್ಲಿ ಬಂಜತ್ರಿ ಬದಲು ಭೋವಿ ಎಂದು ತಪ್ಪಾಗಿ ದಾಖಲಿಸಲಾಗಿದೆ ಎನ್ನಲಾಗಿದೆ. ಇದಲ್ಲದೆ, ಅತ್ತೆ-ಮಾವನ ಹೆಸರನ್ನು ತಂದೆ-ತಾಯಿ ಎಂದು ದಾಖಲಿಸಿರುವಂತಹ ದೋಷಗಳೂ ಕಂಡುಬಂದಿವೆ ಎಂದು ಅವರು ಆರೋಪಿಸಿದ್ದಾರೆ.

ತಮ್ಮದಲ್ಲದ ಜಾತಿಯನ್ನು ದಾಖಲಿಸಿರುವುದನ್ನು ತಿದ್ದುಪಡಿ ಮಾಡಿ ಬಂಜತ್ರಿ ಎಂದು ಸರಿಪಡಿಸುವಂತೆ ಕೋರಿ ಕಳೆದ ಒಂದೂವರೆ-ಎರಡು ತಿಂಗಳಿಂದ ವಾರಕ್ಕೊಮ್ಮೆ ನಾಡಕಚೇರಿಗೆ ಅಲೆದಾಡುತ್ತಿದ್ದರೂ ಸಮಸ್ಯೆ ಬಗೆಹರಿದಿಲ್ಲ ಎಂದು ಶಿಲ್ಪಾ ಬಿ.ಎಸ್. ಆರೋಪಿಸಿದ್ದಾರೆ. ಆಗಸ್ಟ್ 13ರಂದು ಮತ್ತೊಮ್ಮೆ ನಾಡಕಚೇರಿಗೆ ತೆರಳಿ ಸಮಸ್ಯೆಯನ್ನು ಸಂಬಂಧಪಟ್ಟ ಆರ್‌ಐ ಹಾಗೂ ಅಧಿಕಾರಿ ರಾಕೇಶ್ ಅವರ ಗಮನಕ್ಕೆ ತಂದಿದ್ದಾರೆ. ಅಧಿಕಾರಿಗಳು ನಾಡಕಚೇರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಸಮಸ್ಯೆ ಸರಿಪಡಿಸಿ ಕಳುಹಿಸುವಂತೆ ಸೂಚಿಸಿದ್ದರೂ ಸಂಜೆ 5 ಗಂಟೆಯಾದರೂ ಸಮಸ್ಯೆ ಬಗೆಹರಿಯಲಿಲ್ಲ ಎನ್ನಲಾಗಿದೆ.

ದಾಖಲೆಗಳ ವಿಳಂಬವೂ ನಾಗರಿಕರ ಹಕ್ಕಿನ ಪ್ರಶ್ನೆ

ಸರ್ಕಾರಿ ಪ್ರಮಾಣ ಪತ್ರಗಳು ಕೇವಲ ಕಾಗದದ ದಾಖಲೆಗಳಲ್ಲ. ಶಿಕ್ಷಣ, ಉದ್ಯೋಗ, ವಿದ್ಯಾರ್ಥಿವೇತನ, ಮೀಸಲಾತಿ, ಸರ್ಕಾರಿ ಸೌಲಭ್ಯಗಳು, ಪಡಿತರ ಹಾಗೂ ವಿವಿಧ ಆಡಳಿತಾತ್ಮಕ ಪ್ರಕ್ರಿಯೆಗಳಿಗೆ ಅವು ಅತ್ಯಗತ್ಯ ದಾಖಲೆಗಳಾಗಿವೆ. ಹೀಗಾಗಿ, ಸರ್ವರ್ ಕೈಕೊಟ್ಟಾಗ ಅಥವಾ ಸಿಬ್ಬಂದಿ ಕೊರತೆಯಿಂದ ಅರ್ಜಿ ಪ್ರಕ್ರಿಯೆ ವಿಳಂಬವಾದಾಗ ಅದರ ಹೊರೆ ನೇರವಾಗಿ ಸಾಮಾನ್ಯ ನಾಗರಿಕರ ಮೇಲೇ ಬೀಳುತ್ತದೆ. ದಿನಗೂಲಿ ಕೆಲಸ ಮಾಡುವವರು ಒಂದು ದಿನ ಕಚೇರಿಗೆ ಬಂದರೆ ಆ ದಿನದ ಆದಾಯ ಕಳೆದುಕೊಳ್ಳುತ್ತಾರೆ. ದೂರದ ಗ್ರಾಮಗಳಿಂದ ಬರುವವರಿಗೆ ಪ್ರಯಾಣ ವೆಚ್ಚವೂ ಹೆಚ್ಚುತ್ತದೆ. ಒಂದೇ ಪ್ರಮಾಣ ಪತ್ರಕ್ಕಾಗಿ ಹಲವು ಬಾರಿ ಕಚೇರಿಗೆ ಬರುವ ಪರಿಸ್ಥಿತಿ ಉಂಟಾದರೆ, ಸರ್ಕಾರದ ಡಿಜಿಟಲ್ ಸೇವಾ ವ್ಯವಸ್ಥೆಯ ಉದ್ದೇಶವೇ ಪ್ರಶ್ನೆಯಾಗುತ್ತದೆ.

ಸ್ಪಷ್ಟ ಆದೇಶ, ಸುಗಮ ಸೇವೆ ಬೇಕು

ಸಾರ್ವಜನಿಕರ ಸಮಸ್ಯೆಗೆ ತಕ್ಷಣ ಪರಿಹಾರ ಕಂಡುಕೊಳ್ಳಲು ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಇಲಾಖೆಗಳು ಸಮನ್ವಯದಿಂದ ಕ್ರಮ ಕೈಗೊಳ್ಳಬೇಕಿದೆ. ಪಡಿತರಕ್ಕೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು RD ಮೂಲಕ ಲಿಂಕ್ ಮಾಡಿಸುವುದು ಕಡ್ಡಾಯವೇ ಎಂಬುದರ ಕುರಿತು ಸರ್ಕಾರ ಮತ್ತು ಆಹಾರ ಇಲಾಖೆ ಸ್ಪಷ್ಟವಾದ ಅಧಿಕೃತ ಆದೇಶವನ್ನು ಸಾರ್ವಜನಿಕರಿಗೆ ಪ್ರಕಟಿಸಬೇಕು. ಮನೆಯ ಮುಖ್ಯಸ್ಥರ ಪ್ರಮಾಣ ಪತ್ರ ಸಾಕೇ ಅಥವಾ ಪಡಿತರ ಚೀಟಿಯಲ್ಲಿರುವ ಪ್ರತಿಯೊಬ್ಬ ಸದಸ್ಯರ ಪ್ರಮಾಣ ಪತ್ರ ಅಗತ್ಯವೇ ಎಂಬುದನ್ನೂ ಸ್ಪಷ್ಟಪಡಿಸಬೇಕು.

ಅದೇ ರೀತಿ ಸೇವಾ ಕೇಂದ್ರಗಳು ಹಾಗೂ ನಾಡಕಚೇರಿಗಳಲ್ಲಿ ಸರ್ವರ್ ಸಾಮರ್ಥ್ಯ ಹೆಚ್ಚಿಸುವುದು, ಅಗತ್ಯ ಸಿಬ್ಬಂದಿ ನಿಯೋಜಿಸುವುದು, ಜನದಟ್ಟಣೆ ಹೆಚ್ಚಿರುವ ಕೇಂದ್ರಗಳಲ್ಲಿ ಹೆಚ್ಚುವರಿ ಕೌಂಟರ್‌ಗಳನ್ನು ತೆರೆಯುವುದು ಮತ್ತು ಒಂದೇ ಕೆಲಸಕ್ಕಾಗಿ ಜನರು ಪದೇಪದೇ ಕಚೇರಿಗೆ ಬಾರದಂತೆ ವ್ಯವಸ್ಥೆ ಕಲ್ಪಿಸುವುದು ಅಗತ್ಯವಾಗಿದೆ. ಪ್ರಮಾಣ ಪತ್ರಗಳಲ್ಲಿನ ತಪ್ಪು ತಿದ್ದುಪಡಿಗೆ ನಿಗದಿತ ಅವಧಿ ನಿಗದಿಪಡಿಸಿ, ಅರ್ಜಿಯ ಸ್ಥಿತಿಯನ್ನು ಸಾರ್ವಜನಿಕರು ಆನ್‌ಲೈನ್‌ನಲ್ಲಿ ಪರಿಶೀಲಿಸುವ ವ್ಯವಸ್ಥೆ ಮತ್ತಷ್ಟು ಪರಿಣಾಮಕಾರಿಯಾಗಬೇಕು. ಸರ್ವರ್ ಸಮಸ್ಯೆ ಉಂಟಾದಾಗ ಪರ್ಯಾಯ ವ್ಯವಸ್ಥೆಯನ್ನೂ ಕಲ್ಪಿಸಬೇಕು.

ಜನಸಾಮಾನ್ಯರ ತೆರಿಗೆ ಹಣದಿಂದ ನಡೆಯುವ ಸರ್ಕಾರಿ ವ್ಯವಸ್ಥೆಯಲ್ಲಿ, ತಮ್ಮ ಮೂಲಭೂತ ದಾಖಲೆಗಳನ್ನು ಪಡೆಯಲು ಬಡವರು, ಕೂಲಿ ಕಾರ್ಮಿಕರು, ಮಹಿಳೆಯರು ಮತ್ತು ವೃದ್ಧರು ವಾರಗಟ್ಟಲೆ ಕಚೇರಿ ಬಾಗಿಲಿಗೆ ಅಲೆದಾಡಬೇಕಾದ ಪರಿಸ್ಥಿತಿ ಮುಂದುವರಿಯಬಾರದು.

ಈ ವಿಶೇಷ ಸುದ್ದಿ ಓದಿದ್ದೀರಾ?ಹಳೇ ಮೈಸೂರು ರಾಜಕೀಯದ ಭವಿಷ್ಯದ ಬುನಾದಿ: ಮಹಿಳಾ ನಾಯಕತ್ವ ಎಲ್ಲಿ ಕಳೆದುಹೋಯಿತು?

ಸರ್ಕಾರಿ ಸೇವೆಗಳು ಜನರ ಮನೆಬಾಗಿಲಿಗೆ ತಲುಪಬೇಕಾದ ಕಾಲದಲ್ಲಿ, ಒಂದು ಪ್ರಮಾಣ ಪತ್ರಕ್ಕಾಗಿ ಜನರೇ ದಿನಗಟ್ಟಲೆ ಸರ್ಕಾರಿ ಕಚೇರಿಗಳ ಬಾಗಿಲಿಗೆ ಅಲೆದಾಡಬೇಕಾದ ಸ್ಥಿತಿ ಯಾವಾಗ ಬದಲಾಗುತ್ತದೆ ಎಂಬುದೇ ಈಗ ಸಾರ್ವಜನಿಕರ ಪ್ರಶ್ನೆಯಾಗಿದೆ.

WhatsApp Image 2025 02 05 at 18.09.20
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ತೆರಿಗೆ ವಸೂಲಾತಿಯಲ್ಲಿ ಲೋಪ: ಇಬ್ಬರು ಪಿಡಿಓ ಅಮಾನತು, ಮೂವರು ಕರವಸೂಲಿಗಾರರ ವಜಾಕ್ಕೆ ವಿಚಾರಣೆ

ತೆರಿಗೆ ವಸೂಲಾತಿಯಲ್ಲಿ ನಿರ್ಲಕ್ಷ್ಯ ಹಾಗೂ ಕರ್ತವ್ಯ ಲೋಪ ಎಸಗಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ...

ಹಾವೇರಿ | ಪುಸ್ತಕ ಓದಿನ ಪರಂಪರೆಯನ್ನು ಮರು ಕಟ್ಟಬೇಕಾಗಿದೆ: ಶೋಭಾ ಜಾಗಟಗೇರಿ

"ಮುಷ್ಠಿಯಲ್ಲಿ ಇರುವ ಮೊಬೈಲ್ ಜೀವನ ಪಾಠವನ್ನ್ನು ಕಲಿಸುವುದಕ್ಕಿಂತ ದಾರಿ ತಪ್ಪಿಸುವ ಕೆಲಸ...

ಉತ್ತರ ಕನ್ನಡ | 3.24 ಲಕ್ಷ ಪಡಿತರ ಚೀಟಿ ಸದಸ್ಯರ ಇ-ಕೆವೈಸಿ ಬಾಕಿ; ಅಕ್ಟೋಬರ್ 20ರೊಳಗೆ ಪೂರ್ಣಗೊಳಿಸಲು ಮನವಿ

ಉತ್ತರ ಕನ್ನಡ ಜಿಲ್ಲೆಯ ಪಡಿತರ ಚೀಟಿಗಳಲ್ಲಿರುವ 5,69,044 ಸದಸ್ಯರು ಐದು ವರ್ಷಗಳ...

ಉಡುಪಿ | ಇಂದ್ರಾಳಿ ಮಂಚಿ ನೂರಾನಿ ಮಸೀದಿಗೆ ನೂತನ ಆಡಳಿತ ಸಮಿತಿ ರಚನೆ

ಉಡುಪಿ ತಾಲೂಕಿನ ಇಂದ್ರಾಳಿ ಮಂಚಿ ನೂರಾನಿ ಮಸೀದಿಯ ಆಡಳಿತ ಸಮಿತಿಗೆ ನೂತನ...