ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯಿಂದ ಬೈಂದೂರು–ಕೊಲ್ಲೂರು ರಸ್ತೆಯ ಗೋಳಿಹೊಳೆ, ಆರೆಶಿರೂರು ಸೇರಿದಂತೆ ಹಲವು ಪ್ರದೇಶಗಳಲ್ಲಿ ರಸ್ತೆ ಸಂಪೂರ್ಣ ಕೆಸರುಮಯವಾಗಿದ್ದು, ವಾಹನ ಸಂಚಾರ ದುಸ್ತರಗೊಂಡಿದೆ. ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಸ್ಥಳಗಳಲ್ಲಿ ನಿರ್ಮಿಸಿರುವ ತಾತ್ಕಾಲಿಕ ಬದಲಿ ರಸ್ತೆಗಳು ಮಳೆಯಿಂದ ಹಾನಿಗೊಳಗಾಗಿ, ನಿರಂತರ ವಾಹನ ಸಂಚಾರದಿಂದ ಕಿಲೋಮೀಟರ್‌ಗಟ್ಟಲೆ ರಸ್ತೆ ಕೆಸರಿನಿಂದ ಆವೃತವಾಗಿದೆ. ಇದರಿಂದ ಸ್ಥಳೀಯರು ಹಾಗೂ ಕೊಲ್ಲೂರು ಮುಕಾಂಬಿಕಾ ದೇವಸ್ಥಾನಕ್ಕೆ ತೆರಳುವ ಪ್ರವಾಸಿಗರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಕೊಲ್ಲೂರು ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಂಡಿರುವ ಗುತ್ತಿಗೆ ಸಂಸ್ಥೆ ಆಮೆಗತಿಯಲ್ಲಿ ಹಾಗೂ ಅವೈಜ್ಞಾನಿಕ ರೀತಿಯಲ್ಲಿ ಕಾಮಗಾರಿ ನಡೆಸುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಈಗಾಗಲೇ ಶಾಸಕರು ಹಾಗೂ ಸಂಸದರ ಗಮನಕ್ಕೆ ಸಮಸ್ಯೆ ತರಲಾಗಿದ್ದು, ಅಧಿಕಾರಿಗಳೊಂದಿಗೆ ನಡೆದ ಸಭೆಗಳಲ್ಲಿಯೂ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿತ್ತು. ಆದಾಗ್ಯೂ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯದೆ ಜನರು ಪ್ರತಿದಿನ ಸಂಕಷ್ಟ ಎದುರಿಸುವಂತಾಗಿದೆ ಎಂದು ಆರೋಪಿಸಿದ್ದಾರೆ.
ಕಳೆದ ತಿಂಗಳ ಮೊದಲ ಭಾರಿ ಮಳೆಗೆ ತಾತ್ಕಾಲಿಕ ಬದಲಿ ರಸ್ತೆ ನೀರಿನ ಹರಿವಿನಿಂದ ಕೊಚ್ಚಿಹೋಗಿ ಸಂಚಾರ ಸ್ಥಗಿತಗೊಂಡಿತ್ತು. ನಂತರವೂ ನಾಲ್ಕೈದು ಬಾರಿ ಇದೇ ಸಮಸ್ಯೆ ಮರುಕಳಿಸಿದ್ದು, ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಪ್ರತಿದಿನ ಬೈಂದೂರಿನಿಂದ ನೂರಾರು ಟ್ಯಾಕ್ಸಿ ಹಾಗೂ ಇತರ ವಾಹನಗಳು ಕೊಲ್ಲೂರು ಕಡೆಗೆ ಸಂಚರಿಸುತ್ತಿದ್ದು, ರಸ್ತೆ ಕೆಸರಿನಿಂದ ವಾಹನ ಚಾಲಕರು ಹಾಗೂ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಕೆಲವರು ಈ ಮಾರ್ಗದಲ್ಲಿ ವಾಹನ ಬಾಡಿಗೆಗೆ ನೀಡಲು ಸಹ ಹಿಂದೇಟು ಹಾಕುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಅವ್ಯವಸ್ಥೆಗೆ ಸಂಬಂಧಪಟ್ಟ ಇಲಾಖೆ ಹಾಗೂ ಗುತ್ತಿಗೆ ಸಂಸ್ಥೆಯ ನಿರ್ಲಕ್ಷ್ಯವೇ ಕಾರಣ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಸಂಸದರು, ಶಾಸಕರು ಹಾಗೂ ಜಿಲ್ಲಾಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇದೇ ವೇಳೆ ರಸ್ತೆ ದುರಸ್ತಿಗೆ ಆಗ್ರಹಿಸಿ ಸ್ಥಳೀಯರು ಕೆಸರು ತುಂಬಿದ ರಸ್ತೆಯಲ್ಲೇ ವಿವಿಧ ಸಸಿಗಳು ಹಾಗೂ ಬಾಳೆಗಿಡಗಳನ್ನು ನೆಟ್ಟು ಸಾಂಕೇತಿಕ ಪ್ರತಿಭಟನೆ ನಡೆಸಿದರು. ಶೀಘ್ರದಲ್ಲೇ ರಸ್ತೆ ಸುಧಾರಣೆಗೆ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.





