ಉಚ್ಚಿಲ ಬಡಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವು ಪ್ರಮುಖ ಒಳರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ಸಾರ್ವಜನಿಕರ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗಿದೆ. ಮಳೆಯ ಪರಿಣಾಮ ರಾಷ್ಟ್ರೀಯ ಹೆದ್ದಾರಿಯಿಂದ ಸಂಪರ್ಕ ಕಲ್ಪಿಸುವ ಬಹುತೇಕ ಒಳರಸ್ತೆಗಳು ಹಾನಿಗೊಳಗಾಗಿದ್ದು, ರಸ್ತೆಗಳಲ್ಲೆಲ್ಲ ದೊಡ್ಡ ದೊಡ್ಡ ಗುಂಡಿಗಳು ನಿರ್ಮಾಣವಾಗಿವೆ. ಕೆಲವೆಡೆ ಚರಂಡಿಗಳು ಹುಲ್ಲು ಹಾಗೂ ಗಿಡಗಂಟಿಗಳಿಂದ ಮುಚ್ಚಿಹೋಗಿದ್ದರೆ, ಇನ್ನೂ ಕೆಲವು ರಸ್ತೆಗಳು ಸಂಪೂರ್ಣ ಹಾಳಾಗಿ ವಾಹನ ಸಂಚಾರಕ್ಕೆ ಅಯೋಗ್ಯವಾಗಿವೆ.
ರಾಘವೇಂದ್ರ ಮಠ ಮಾರ್ಗವಾಗಿ ಸಮುದ್ರ ತೀರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ, ಪೊಲ್ಯ–ಬರ್ಪಾಣಿ ರಸ್ತೆ, ಅಲ್ ಪೊಲ್ಯ ರಸ್ತೆ, ಪೊಲ್ಯ ಮಸೀದಿ ರಸ್ತೆ, ಉಚ್ಚಿಲ ಚರ್ಚ್ ರಸ್ತೆ ಹಾಗೂ ಸುಭಾಷ್ ರೋಡ್ ಮೂಲಕ ಸಾಗುವ ಫಿಶರೀಸ್ ರಸ್ತೆ ಸೇರಿದಂತೆ ಹಲವು ಪ್ರಮುಖ ರಸ್ತೆಗಳ ಸ್ಥಿತಿ ಅತ್ಯಂತ ಕಳಪೆಯಾಗಿದ್ದು, ವಾಹನ ಸವಾರರು ಹಾಗೂ ಪಾದಚಾರಿಗಳು ನಿತ್ಯ ಅಪಾಯದ ನಡುವೆ ಸಂಚರಿಸುವಂತಾಗಿದೆ.
ರಸ್ತೆ ಗುಂಡಿಗಳಲ್ಲಿ ಮಳೆ ನೀರು ನಿಂತಿರುವುದರಿಂದ ದ್ವಿಚಕ್ರ ವಾಹನ ಸವಾರರಿಗೆ ಅಪಘಾತದ ಭೀತಿ ಹೆಚ್ಚಾಗಿದೆ. ಶಾಲಾ–ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ಸ್ಥಳೀಯ ನಿವಾಸಿಗಳು ಪ್ರತಿದಿನ ಸಂಕಷ್ಟ ಅನುಭವಿಸುತ್ತಿದ್ದು, ಕೂಡಲೇ ರಸ್ತೆ ದುರಸ್ತಿ ಕಾಮಗಾರಿ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.





