ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕದ ಹದಿನಾರನೇ ಕನ್ನಡ ಸಾಹಿತ್ಯ ಸಮ್ಮೇಳನ ‘ಬೀಷ್ಮೋತ್ಸವ’ ಇದೇ ಭಾನುವಾರ (ಮೇ 3) ರಂದು ಉಡುಪಿಯ ಯಕ್ಷಗಾನ ಕಲಾರಂಗದಲ್ಲಿರುವ ಐವೈಸಿ ಸಭಾಂಗಣದಲ್ಲಿ ಕೆಮ್ತೂರು ದೊಡ್ಡಣ್ಣ ಶೆಟ್ಟಿ ವೇದಿಕೆಯಲ್ಲಿ ನಡೆಯಲಿದೆ ಎಂದು ತಾಲೂಕು ಅಧ್ಯಕ್ಷ ರವಿರಾಜ್ ಎಚ್.ಪಿ. ತಿಳಿಸಿದ್ದಾರೆ.
ಉಡುಪಿ ಪತ್ರಿಕಾಭವನದಲ್ಲಿ ಮಾತನಾಡಿದ ಅವರು, ಡಾ. ಭಾಸ್ಕರಾನಂದ ಕುಮಾರ್ ಅವರ ಸಮ್ಮೇಳನಾಧ್ಯಕ್ಷತೆಯಲ್ಲಿ ನಡೆಯುವ ಈ ಮಹೋತ್ಸವವು ಬೆಳಗ್ಗೆ 8:30ಕ್ಕೆ ಮೆರವಣಿಗೆಯೊಂದಿಗೆ ಆರಂಭವಾಗಲಿದೆ. ಧ್ವಜಾರೋಹಣ, ಸಾಹಿತಿ ರಾಮದಾಸ್ ನೆನಪಿನ ಪುಸ್ತಕ ಮಳಿಗೆ, ಗಮಕ ಸೌರಭ, ಆಸ್ಟ್ರೋಮೋಹನ್ ಹಾಗೂ ಜನಾರ್ಧನ ಕೊಡವೂರು ಸಂಪಾದಿತ ‘ಚಿತ್ರಮಯ ಉಡುಪಿ’ ಬಿಡುಗಡೆ, ನಿತ್ಯಾನಂದ ನಾಯಕ್ ಅವರ ಮುರಲ್ ಕಲಾ ಪ್ರದರ್ಶನ ಉದ್ಘಾಟನೆ ನಡೆಯಲಿದೆ.

ಬೆಳಗ್ಗೆ 10ಕ್ಕೆ ಸಮ್ಮೇಳನದ ಉದ್ಘಾಟನೆಯನ್ನು ಡಾ. ಮೋಹನ್ ಆಳ್ವ ನೆರವೇರಿಸಲಿದ್ದು, ವಿವಿಧ ಗಣ್ಯರು ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಕಸಾಪ ಉಡುಪಿ ತಾಲೂಕು ಗೌರವ ಪುರಸ್ಕಾರ ಪ್ರದಾನ ಮಾಡಲಾಗುವುದು.
This video cannot be played in your browser. Open the video directly
ನಂತರ ಗೀತಗಾಯನ, ಕನ್ನಡದಲ್ಲಿ ಶೇ.100 ಅಂಕ ಪಡೆದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳ ಸನ್ಮಾನ ನಡೆಯಲಿದೆ. ಮಧ್ಯಾಹ್ನ 12ಕ್ಕೆ ಕವಿ ಗೋಷ್ಠಿ, ಬಳಿಕ ನೃತ್ಯ ‘ನೃತ್ಯ ಸಿಂಚನ’, ಹಾಸ್ಯ ಕಾರ್ಯಕ್ರಮ ‘ಆಪ್ತಮಿತ್ರರ ಕಚಗುಳಿ’ ನಡೆಯಲಿದೆ.
ಮಧ್ಯಾಹ್ನ ವಿಚಾರಗೋಷ್ಠಿ, ಸಮ್ಮೇಳನಾಧ್ಯಕ್ಷರೊಂದಿಗೆ ಮುಖಾಮುಖಿ, ಸಂಜೆ 4:30ಕ್ಕೆ ಸಮಾರೋಪ ಸಮಾರಂಭ ಹಾಗೂ ವಿವಿಧ ಸಾಧಕರ ಸನ್ಮಾನ ನಡೆಯಲಿದೆ. ಸಂಜೆ 6ಕ್ಕೆ ರಾಜೇಶ್ ಭಟ್ ಪಣಿಯಾಡಿ ನಿರ್ದೇಶನದ ‘ಕತ್ತಲೆ ರಾಜ್ಯದ ಮರ್ಕಟ ರಾಜ’ ಮಕ್ಕಳ ನಾಟಕ ಪ್ರದರ್ಶನವಾಗಲಿದೆ.
ಸುಮಾರು 12 ಗಂಟೆಗಳ ಕಾಲ ನಡೆಯುವ ಈ ಸಮ್ಮೇಳನದಲ್ಲಿ ಸಾಹಿತ್ಯ, ಸಂಸ್ಕೃತಿ ಮತ್ತು ಕಲೆಯ ವೈವಿಧ್ಯಮಯ ಕಾರ್ಯಕ್ರಮಗಳು ಅಡಗಿದ್ದು, ಸಾಹಿತ್ಯಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.






