ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಮಾಗ್ರಾಹಟ್ ಪಶ್ಚಿಮ ಮತ್ತು ಡೈಮಂಡ್ ಹಾರ್ಬರ್ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಒಟ್ಟು 15 ಮತಗಟ್ಟೆಗಳಲ್ಲಿ ಮರುಮತದಾನ ನಡೆಸುವಂತೆ ಕೇಂದ್ರ ಚುನಾವಣಾ ಆಯೋಗವು ಶುಕ್ರವಾರ ಆದೇಶ ಹೊರಡಿಸಿದೆ.
ಏಪ್ರಿಲ್ 29 ರಂದು ಈ ಮತಗಟ್ಟೆಗಳಲ್ಲಿ ನಡೆದಿದ್ದ ಮತದಾನ ಪ್ರಕ್ರಿಯೆಯನ್ನು ಆಯೋಗವು ಅಸಿಂಧು ಎಂದು ಘೋಷಿಸಿದ್ದು, ಮೇ 2ರಂದು ಶನಿವಾರ ಹೊಸದಾಗಿ ಮತದಾನ ನಡೆಸಲು ಸೂಚಿಸಿದೆ.
ಚುನಾವಣಾ ಆಯೋಗವು ಖಚಿತಪಡಿಸಿರುವ ವೇಳಾಪಟ್ಟಿಯಂತೆ, ಮರು ಮತದಾನವು ಮೇ 2ರಂದು ಬೆಳಿಗ್ಗೆ 7 ಗಂಟೆಗೆ ಆರಂಭವಾಗಿ ಸಂಜೆ 6 ಗಂಟೆಯವರೆಗೆ ನಡೆಯಲಿದೆ. ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್ 23 ಮತ್ತು ಏಪ್ರಿಲ್ 29ರಂದು ನಡೆದಿದ್ದ ಮೊದಲ ಎರಡು ಹಂತದ ಚುನಾವಣೆಗಳಲ್ಲಿ ಶೇ.90ಕ್ಕೂ ಹೆಚ್ಚು ದಾಖಲೆಯ ಮತದಾನವಾಗಿತ್ತು. ಆದರೆ, ಮತದಾನದ ಪ್ರಕ್ರಿಯೆಯ ನಡುವೆ ವರದಿಯಾದ ಹಿಂಸಾತ್ಮಕ ಘಟನೆಗಳು ಶಾಂತಿಯುತ ಮತದಾನಕ್ಕೆ ಅಡ್ಡಿಯುಂಟು ಮಾಡಿದ್ದವು. ಈ ಹಿನ್ನೆಲೆಯಲ್ಲಿ ಮತದಾನದ ಪಾರದರ್ಶಕತೆಯನ್ನು ಕಾಪಾಡಲು ಆಯೋಗವು ಈ ನಿರ್ಧಾರ ಕೈಗೊಂಡಿದೆ.
ಇದನ್ನು ಓದಿದ್ದೀರಾ? ಕೆ ಎಲ್ ರಾಹುಲ್ ನಂತರ ಈಗ ರಿಷಭ್ ಪಂತ್ ಸರದಿಯೇ? LSG ನಾಯಕತ್ವ ತ್ಯಜಿಸಲು ಸಲಹೆ
ಚುನಾವಣಾ ಆಯೋಗವು ಮಾಗ್ರಾಹಟ್ ಪಶ್ಚಿಮ ಮತ್ತು ಡೈಮಂಡ್ ಹಾರ್ಬರ್ ವಿಧಾನಸಭಾ ಕ್ಷೇತ್ರಗಳಿಂದ ಒಟ್ಟು 74 ದೂರುಗಳನ್ನು ಸ್ವೀಕರಿಸಿತ್ತು.
ಪಶ್ಚಿಮ ಬಂಗಾಳದ ಗದ್ದುಗೆ ಹಿಡಿಯಲು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಈ ಹೈವೋಲ್ಟೇಜ್ ಚುನಾವಣೆಯ ಫಲಿತಾಂಶವು ಮೇ 4 ರಂದು ಪ್ರಕಟವಾಗಲಿದೆ.




