ಉಡುಪಿ ಜಿಲ್ಲೆಯ ಅಕ್ರಮ ಚಟುವಟಿಕೆಗಳು ಹಾಗೂ ರೌಡಿಸಂ ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ಮತ್ತೊಂದು ಕಠಿಣ ಕ್ರಮ ಕೈಗೊಂಡಿದ್ದು, ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಇಬ್ಬರು ಹಾಗೂ ಶಿರ್ವ ಪೊಲೀಸ್ ಠಾಣೆ ವ್ಯಾಪ್ತಿಯ ಒಬ್ಬ ಸೇರಿದಂತೆ ಮೂವರಿಗೆ ಗಡಿಪಾರು ಆದೇಶ ಹೊರಡಿಸಲಾಗಿದೆ.
ವಿಶೇಷ ಕಾರ್ಯಾಂಗ ದಂಡಾಧಿಕಾರಿಯವರು ಹಾಗೂ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಜೂನ್ 24ರಂದು ಈ ಆದೇಶ ಹೊರಡಿಸಿದ್ದಾರೆ.

ಗಡಿಪಾರುಗೊಂಡವರಲ್ಲಿ ಕುಂದಾಪುರ ಗ್ರಾಮಾಂತರ ಠಾಣೆ ವ್ಯಾಪ್ತಿಯ ಮೊಹಮ್ಮದ್ ದಾನೀಶ್ ಮದನಿ (23) ವಿರುದ್ಧ 8 ಪ್ರಕರಣಗಳು ದಾಖಲಾಗಿದ್ದು, ಈತನ ಹೆಸರಿನಲ್ಲಿ ರೌಡಿ ಹಾಳೆ ತೆರೆಯಲಾಗಿದೆ. ಇದೇ ಠಾಣೆ ವ್ಯಾಪ್ತಿಯ ಕರಾಣಿ ಮುಸೀನ್ (44) ವಿರುದ್ಧ 7 ಪ್ರಕರಣಗಳು ದಾಖಲಾಗಿದ್ದು, ಈತನ ಮೇಲೂ ರೌಡಿ ಹಾಳೆ ತೆರೆಯಲಾಗಿದೆ.
This video cannot be played in your browser. Open the video directly
ಶಿರ್ವ ಪೊಲೀಸ್ ಠಾಣೆ ವ್ಯಾಪ್ತಿಯ ಇಲಿಯಾಸ್ (36) ವಿರುದ್ಧ 15 ಪ್ರಕರಣಗಳು ದಾಖಲಾಗಿದ್ದು, ಶಿರ್ವ ಠಾಣೆಯಲ್ಲಿ ರೌಡಿ ಹಾಳೆ ತೆರೆಯಲಾಗಿದೆ.
ಈ ಮೂವರು ಕೊಲೆ, ಕೊಲೆಯತ್ನ, ಪೊಲೀಸ್ ಠಾಣೆಗೆ ಕಲ್ಲೆಸೆತ, ಕನ್ನಕಳವು, ಜಾನುವಾರು ಕಳವು, ಜಾನುವಾರು ಹತ್ಯೆ ಹಾಗೂ ರೌಡಿಸಂ ಸಂಬಂಧಿತ ಹಲ್ಲೆ ಪ್ರಕರಣಗಳು ಸೇರಿದಂತೆ ಒಟ್ಟು 30 ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಡಿಪಾರು ಆದೇಶದಂತೆ ಮೊಹಮ್ಮದ್ ದಾನೀಶ್ ಮದನಿಯನ್ನು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಗೆ, ಕರಾಣಿ ಮುಸೀನ್ ಅವರನ್ನು ಬೀದರ್ ಜಿಲ್ಲೆಯ ಗಾಂಧಿ ಗಂಜ ಪೊಲೀಸ್ ಠಾಣೆ ವ್ಯಾಪ್ತಿಗೆ ಹಾಗೂ ಇಲಿಯಾಸ್ ಅವರನ್ನು ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರ ಪೊಲೀಸ್ ಠಾಣೆ ವ್ಯಾಪ್ತಿಗೆ ಕಳುಹಿಸಲಾಗಿದೆ.
ಕಳೆದ ಒಂದು ವರ್ಷದ ಅವಧಿಯಲ್ಲಿ ಉಡುಪಿ ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳು ಮತ್ತು ರೌಡಿಸಂ ವಿರುದ್ಧ ಕಠಿಣ ಕ್ರಮ ಮುಂದುವರಿದಿದ್ದು, 3 ಆರೋಪಿಗಳನ್ನು ಪಿ.ಐ.ಟಿ. ಎನ್.ಡಿ.ಪಿ.ಎಸ್. ಕಾಯ್ದೆಯಡಿ, 4 ಮಂದಿಯನ್ನು ಗೂಂಡಾ ಕಾಯ್ದೆಯಡಿ ಬಂಧಿಸಿ ಕಾರಾಗೃಹಕ್ಕೆ ಕಳುಹಿಸಲಾಗಿದೆ. ಅಲ್ಲದೆ, ಒಟ್ಟು 14 ಮಂದಿಯ ವಿರುದ್ಧ ಗಡಿಪಾರು ಕ್ರಮ ಜಾರಿಗೊಳಿಸಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.






