ಶಾಲಾ ಮಕ್ಕಳ ಸುರಕ್ಷತೆ ಹಾಗೂ ರಸ್ತೆ ಸುರಕ್ಷತಾ ನಿಯಮಗಳ ಕಟ್ಟುನಿಟ್ಟಿನ ಅನುಷ್ಠಾನಕ್ಕಾಗಿ ಉಡುಪಿ ಜಿಲ್ಲೆಯಾದ್ಯಂತ ಸೋಮವಾರ ವಿಶೇಷ ತಪಾಸಣಾ ಕಾರ್ಯಾಚರಣೆ ನಡೆಸಲಾಯಿತು.
ಸಾರ್ವಜನಿಕರ ಅಹವಾಲು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆಯಂತೆ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಶಾಲಾ ಬಸ್, ವ್ಯಾನ್, ಆಟೋರಿಕ್ಷಾ ಸೇರಿದಂತೆ ಶಾಲಾ ಮಕ್ಕಳನ್ನು ಸಾಗಿಸುವ ವಾಹನಗಳನ್ನು ತಪಾಸಣೆಗೆ ಒಳಪಡಿಸಲಾಯಿತು.
ಕಾರ್ಯಾಚರಣೆಯಲ್ಲಿ ವಾಹನಗಳ ದಾಖಲೆಗಳು, ಫಿಟ್ನೆಸ್ ಪ್ರಮಾಣಪತ್ರ, ವಿಮೆ, ಚಾಲನಾ ಪರವಾನಗಿ, ಅಗ್ನಿಶಾಮಕ ಉಪಕರಣ, ಪ್ರಥಮ ಚಿಕಿತ್ಸೆ ಪೆಟ್ಟಿಗೆ, ತುರ್ತು ನಿರ್ಗಮನ ವ್ಯವಸ್ಥೆ ಹಾಗೂ ನಿಗದಿತ ಸಂಖ್ಯೆಗೆ ಮೀರಿದ ಮಕ್ಕಳ ಸಾಗಾಟ ಸೇರಿದಂತೆ ವಿವಿಧ ಸುರಕ್ಷತಾ ಅಂಶಗಳನ್ನು ಪರಿಶೀಲಿಸಲಾಯಿತು.
ತಪಾಸಣೆ ವೇಳೆ ಸಂಚಾರ ಮತ್ತು ಶಾಲಾ ವಾಹನ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದ ವಾಹನಗಳ ವಿರುದ್ಧ ಮೋಟಾರು ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಯಿತು. ಚಾಲಕರು, ನಿರ್ವಾಹಕರು ಹಾಗೂ ಶಾಲಾ ಆಡಳಿತ ಮಂಡಳಿಗಳಿಗೆ ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಿ ಎಲ್ಲ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಯಿತು.
ಕಾರ್ಯಾಚರಣೆಯ ವಿವರಗಳು:
- ಪರಿಶೀಲಿಸಲಾದ ವಾಹನಗಳು: 483
- ಒಟ್ಟು ಪ್ರಕರಣಗಳು: 203
- ಅತಿಯಾದ ಮಕ್ಕಳ ಸಾಗಾಟ: 112 ಪ್ರಕರಣಗಳು
- ಸಮವಸ್ತ್ರವಿಲ್ಲದೆ ವಾಹನ ಚಾಲನೆ: 58 ಪ್ರಕರಣಗಳು
- ಇತರೆ ಉಲ್ಲಂಘನೆಗಳು: 33 ಪ್ರಕರಣಗಳು
- ವಸೂಲಾದ ದಂಡದ ಮೊತ್ತ: ₹71,000
ಮುಂದಿನ ದಿನಗಳಲ್ಲಿಯೂ ಶಾಲಾ ಮಕ್ಕಳ ಸುರಕ್ಷತೆಗಾಗಿ ಇಂತಹ ವಿಶೇಷ ತಪಾಸಣಾ ಕಾರ್ಯಾಚರಣೆಗಳನ್ನು ನಿರಂತರವಾಗಿ ಮುಂದುವರಿಸಲಾಗುವುದು ಎಂದು ಪೊಲೀಸ್ ಇಲಾಖೆ ತಿಳಿಸಿದೆ.





