ರಾಜ್ಯದ 19 ಜಿಲ್ಲೆಗಳಿಂದ ದೈಹಿಕ ತರಬೇತಿ ಹಾಗೂ ಅಧ್ಯಯನ ಪ್ರವಾಸದ ಅಂಗವಾಗಿ ಮೂರು ದಿನಗಳ ಶಿಬಿರಕ್ಕಾಗಿ ಉಡುಪಿಗೆ ಆಗಮಿಸಿದ್ದ SSLC, PUC ಹಾಗೂ ಪದವಿ ವಿಭಾಗದ ಭಾರತ್ ಸ್ಕೌಟ್ಸ್ & ಗೈಡ್ಸ್ ವಿದ್ಯಾರ್ಥಿಗಳಿಗಾಗಿ ಪ್ರಥಮ ಬಾರಿಗೆ ವಿವಿಧ ಧರ್ಮಗಳ ಬಗ್ಗೆ ಅರಿವು ಮತ್ತು ಮಾಹಿತಿ ನೀಡುವ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದ ಮೊದಲ ಭಾಗವಾಗಿ ನಿನ್ನೆ ಕುಂದಾಪುರ ತಾಲೂಕಿನ ವಂಡ್ಸೆ ಗ್ರಾಮದ ಆತ್ರಾಡಿಯಲ್ಲಿರುವ ವಿಜಯ ಮಕ್ಕಳ ಕೂಟ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇಸ್ಲಾಂ ಧರ್ಮದ ಕುರಿತು ತರಬೇತಿ ಕಾರ್ಯಾಗಾರ ನಡೆಯಿತು. ಈ ಸಂದರ್ಭದಲ್ಲಿ ಮುಸ್ಲಿಮರ ಪವಿತ್ರ ಗ್ರಂಥವಾದ ಕುರಾನ್, ಇಸ್ಲಾಂ ಧರ್ಮದ ಮೂಲ ತತ್ವಗಳು, ಧಾರ್ಮಿಕ ಆಚರಣೆಗಳು, ಮಸೀದಿಯ ಪವಿತ್ರತೆ, ಸಾಮೂಹಿಕ ನಮಾಜ್ ಸೇರಿದಂತೆ ವಿವಿಧ ವಿಷಯಗಳ ಕುರಿತು ವಿದ್ಯಾರ್ಥಿಗಳಿಗೆ ಸಮಗ್ರ ಮಾಹಿತಿ ನೀಡಲಾಯಿತು.
ಸ್ಕೌಟ್ಸ್ & ಗೈಡ್ಸ್ ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಕಾರ್ಯಾಗಾರದಲ್ಲಿ ಭಾಗವಹಿಸಿ, ತಮ್ಮ ಕುತೂಹಲದ ಪ್ರಶ್ನೆಗಳನ್ನು ಕೇಳುವುದರ ಮೂಲಕ ಇಸ್ಲಾಂ ಧರ್ಮದ ಕುರಿತು ಉತ್ತಮ ತಿಳುವಳಿಕೆಯನ್ನು ಪಡೆದುಕೊಂಡರು. ಸಂಪನ್ಮೂಲ ವ್ಯಕ್ತಿಯಾಗಿ ಮುಷ್ತಾಕ್ ಹೆನ್ನಾಬೈಲ್ ಭಾಗವಹಿಸಿ ಅತ್ಯುತ್ತಮವಾಗಿ ಕಾರ್ಯಾಗಾರವನ್ನು ನಡೆಸಿಕೊಟ್ಟರು. ಅವರ ನಿರೂಪಣೆಯನ್ನು ಹಾಗೂ ಕಾರ್ಯಕ್ರಮದ ಆಯೋಜನೆಯನ್ನು ಎಲ್ಲಾ ಅಧ್ಯಾಪಕರು ಪ್ರಶಂಸಿಸಿದರು.

ಈ ಕಾರ್ಯಕ್ರಮದ ಮುಂದುವರಿದ ಭಾಗವಾಗಿ ಇಂದು 180 ಸ್ಕೌಟ್ಸ್ & ಗೈಡ್ಸ್ ವಿದ್ಯಾರ್ಥಿಗಳಿಗೆ ಮಾವಿನಕಟ್ಟೆ ಜುಮಾ ಮಸೀದಿ ಸಂದರ್ಶನ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಜಮೀರ್ ಅಹ್ಮದ್ ರಶಾದಿ ಉಪಸ್ಥಿತರಿದ್ದು, ಮಸೀದಿಯ ಇತಿಹಾಸ, ಧಾರ್ಮಿಕ ಆಚರಣೆಗಳು ಹಾಗೂ ಇಸ್ಲಾಂ ಧರ್ಮದ ವಿವಿಧ ಆಯಾಮಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಈ ಕಾರ್ಯಕ್ರಮಕ್ಕೆ ಸಹಕಾರ ನೀಡಿದ UJMO ಕುಂದಾಪುರ ತಾಲೂಕು ಅಧ್ಯಕ್ಷರಾದ ದಸ್ತಗೀರ್ ಸಾಹೇಬ್, ಮುಷ್ತಾಕ್ ಹೆನ್ನಾಬೈಲ್,ಮುನೀರ್ ಕಂಡ್ಲೂರ್, ಮುನಾಫ್ ಕಂಡ್ಲೂರ್ ಹಾಗೂ ಸರ್ವ ಪದಾಧಿಕಾರಿಗಳಿಗೆತ್ಪೂರ್ವಕ ಕೃತಜ್ಞತೆಗಳು. ಹಾಗೆಯೇ ಸ್ಥಳೀಯ ಮುಸ್ಲಿಂ ಮುಖಂಡರಾದ ಚೆರಿಯಬ್ಬ ಸಾಹೇಬ್ ಹಾಗೂ ಮಾವಿನಕಟ್ಟೆ ಜುಮಾ ಮಸೀದಿಯ ಅಧ್ಯಕ್ಷರು ಮತ್ತು ಸಹಕರಿಸಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು.
ಈ ಕಾರ್ಯಕ್ರಮಕ್ಕೆ ಅನುಮತಿ ನೀಡಿದ ಭಾರತ್ ಸ್ಕೌಟ್ಸ್ & ಗೈಡ್ಸ್ ರಾಜ್ಯ ಮುಖ್ಯ ಆಯುಕ್ತರಾದ ಪಿ.ಜಿ.ಆರ್. ಸಿಂಧ್ಯಾ ಹಾಗೂ ಜಿಲ್ಲಾ ಮುಖ್ಯ ಆಯುಕ್ತರಾದ ಜಯಕರ ಶೆಟ್ಟಿ ಇಂದ್ರಾಳಿ ಅವರಿಗೆ ವಿಶೇಷ ಕೃತಜ್ಞತೆಗಳನ್ನು ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಮೊಹಮ್ಮದ್ ಮೌಲಾ ಸಲ್ಲಿಸಿದ್ದಾರೆ.
ಇಂದಿನ ಸಂದರ್ಭದಲ್ಲಿ ಕೆಲವರು ತಮ್ಮ ರಾಜಕೀಯ ಅಥವಾ ವೈಯಕ್ತಿಕ ಸ್ವಾರ್ಥಕ್ಕಾಗಿ ವಿದ್ಯಾರ್ಥಿಗಳಲ್ಲಿ ಕೋಮು ಭಿನ್ನಾಭಿಪ್ರಾಯ ಮತ್ತು ದ್ವೇಷವನ್ನು ಬಿತ್ತುವ ಪ್ರಯತ್ನ ನಡೆಸುತ್ತಿರುವಾಗ, ಇಂತಹ ಸರ್ವಧರ್ಮ ಸಮನ್ವಯ ಮತ್ತು ಪರಸ್ಪರ ಗೌರವವನ್ನು ಬೆಳೆಸುವ ಕಾರ್ಯಕ್ರಮಗಳು ಸಮಾಜಕ್ಕೆ ಅತ್ಯುತ್ತಮ ಸಂದೇಶವನ್ನು ನೀಡುತ್ತವೆ. ವಿಭಿನ್ನ ಧರ್ಮಗಳ ಬಗ್ಗೆ ಅರಿವು ಮೂಡಿಸುವ ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಸಹಿಷ್ಣುತೆ, ಮಾನವೀಯತೆ, ಪರಸ್ಪರ ಗೌರವ ಮತ್ತು ರಾಷ್ಟ್ರೀಯ ಏಕತೆಯ ಮನೋಭಾವವನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ.






