ನಮ್ಮನಾಡು ಒಕ್ಕೂಟ (NNO) ಉಡುಪಿ ಜಿಲ್ಲೆ ಹಾಗೂ ಜಾಗೃತ ಕರ್ನಾಟಕದ ಸಂಯುಕ್ತ ಆಶ್ರಯದಲ್ಲಿ Special Intensive Revision (SIR) ಕುರಿತು ಜಾಗೃತಿ ಕಾರ್ಯಾಗಾರವು ಭಾನುವಾರ ಉಡುಪಿ ಜಾಮೀಯಾ ಮಸೀದಿಯ ಸಭಾಂಗಣದಲ್ಲಿ ನಡೆಯಿತು.
ಕಾರ್ಯಾಗಾರದಲ್ಲಿ ಜಾಗೃತ ಕರ್ನಾಟಕದ ರಾಜ್ಯ ಮುಖಂಡ ಜನಾಬ್ ನಿಸಾರ್ ಅಹ್ಮದ್ ಅವರು SIR ಪ್ರಕ್ರಿಯೆಯ ಉದ್ದೇಶ, ಮತದಾರರು ಅನುಸರಿಸಬೇಕಾದ ಕ್ರಮಗಳು, ಅಗತ್ಯ ದಾಖಲೆಗಳು ಹಾಗೂ ಮತದಾನದ ಹಕ್ಕನ್ನು ಸಂರಕ್ಷಿಸಿಕೊಳ್ಳುವ ಕುರಿತು ಸಮಗ್ರ ಮಾಹಿತಿ ನೀಡಿದರು.
ಉಡುಪಿಯ ವಕೀಲ ಅಡ್ವೊಕೇಟ್ ಸುಹಾನ್ ಸಾಸ್ತಾನ ಅವರು SIRಗೆ ಸಂಬಂಧಿಸಿದ ಕಾನೂನು ಅಂಶಗಳು, ನಾಗರಿಕರ ಹಕ್ಕುಗಳು ಹಾಗೂ ಯಾವುದೇ ತೊಂದರೆ ಎದುರಾದಲ್ಲಿ ಅನುಸರಿಸಬೇಕಾದ ಕಾನೂನು ಕ್ರಮಗಳ ಬಗ್ಗೆ ವಿವರವಾಗಿ ಮಾರ್ಗದರ್ಶನ ನೀಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದವರ ಪ್ರಶ್ನೆಗಳಿಗೆ ಉತ್ತರಿಸಿ ಅವರ ಸಂದೇಹಗಳನ್ನು ನಿವಾರಿಸಿದರು.

ವಿವಿಧ ಭಾಗಗಳಿಂದ ಆಗಮಿಸಿದ್ದ ಸಮಾಜದ ಮುಖಂಡರು, ಯುವಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಾಗಾರದ ಪ್ರಯೋಜನ ಪಡೆದರು. ಮತದಾರರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಹಾಗೂ SIR ಪ್ರಕ್ರಿಯೆಯನ್ನು ಜನಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗುವಂತೆ ತಿಳಿಸುವಲ್ಲಿ ಕಾರ್ಯಾಗಾರವು ಉಪಯುಕ್ತವಾಗಿದೆ ಎಂದು ಭಾಗವಹಿಸಿದವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಆರಂಭದಲ್ಲಿ NNO ಉಡುಪಿ ಜಿಲ್ಲಾ ಅಧ್ಯಕ್ಷ ನಕ್ವಾ ಯಾಹ್ಯಾ ಸ್ವಾಗತಿಸಿದರು. ವೇದಿಕೆಯಲ್ಲಿ ಜಾಮೀಯಾ ಮಸೀದಿ ಅಧ್ಯಕ್ಷ ರಿಯಾಜ್ ಅಹ್ಮದ್ ಹಾಗೂ ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಶರ್ಫುದ್ದೀನ್ ಕಾಪು ಉಪಸ್ಥಿತರಿದ್ದರು. NNO ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಫಾಝಿಲ್ ಆದಿ ಉಡುಪಿ ಕಾರ್ಯಕ್ರಮ ನಿರೂಪಿಸಿದರು.
ಕೊನೆಯಲ್ಲಿ NNO ಉಡುಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಝಫ್ರುಲ್ಲಾ ಹೂಡೆ ಅವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಸಂಘಟಕರು, ಸಂಪನ್ಮೂಲ ವ್ಯಕ್ತಿಗಳು ಹಾಗೂ ಭಾಗವಹಿಸಿದ ಸಾರ್ವಜನಿಕರಿಗೆ ಕೃತಜ್ಞತೆ ಸಲ್ಲಿಸಿದರು.






