ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯು ಜಿಲ್ಲೆಯ ವಿವಿಧ ಭಾಗಗಳಲ್ಲಿ ಅಳವಡಿಸಿರುವ ಅತ್ಯಾಧುನಿಕ ಸ್ಪೀಡ್ ರ್ಯಾಡರ್ ಕ್ಯಾಮೆರಾಗಳ ಮೂಲಕ ಕಳೆದ ಒಂದು ವಾರದಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ ಒಟ್ಟು 46,753 ವಾಹನಗಳನ್ನು ಪತ್ತೆಹಚ್ಚಿದೆ. ಈ ಸಂಬಂಧ ಈಗಾಗಲೇ 235 ಮಂದಿಗೆ ನೋಟೀಸ್ ಜಾರಿ ಮಾಡಲಾಗಿದೆ.

ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 66ರ ಪಡುಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಉಚ್ಚಿಲ, ಕಾಪು ಠಾಣಾ ವ್ಯಾಪ್ತಿಯ ದಂಡತೀರ್ಥ, ಕೋಟ ಠಾಣಾ ವ್ಯಾಪ್ತಿಯ ತೆಕ್ಕಟ್ಟೆ, ಗಂಗೊಳ್ಳಿ ಠಾಣಾ ವ್ಯಾಪ್ತಿಯ ತ್ರಾಸಿ, ಬೈಂದೂರು ಠಾಣಾ ವ್ಯಾಪ್ತಿಯ ಕೆರ್ಗಾಲ್ ಹಾಗೂ ಪಡುಬಿದ್ರಿ–ಬೆಳ್ಳಣ ರಾಜ್ಯ ಹೆದ್ದಾರಿಯ ಕಾರ್ಕಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ದೂಪದಕಟ್ಟೆ ಪ್ರದೇಶಗಳಲ್ಲಿ ಒಟ್ಟು ಆರು ಅತ್ಯಾಧುನಿಕ ಸ್ಪೀಡ್ ರ್ಯಾಡರ್ ಕ್ಯಾಮೆರಾ ಹಾಗೂ ಆಟೋಮೆಟಿಕ್ ನಂಬರ್ ಪ್ಲೇಟ್ ರೀಡರ್‌ಗಳನ್ನು ಅಳವಡಿಸಲಾಗಿದೆ.

ಕಳೆದ ಒಂದು ವಾರದಲ್ಲಿ ಬೈಂದೂರು ಪ್ರದೇಶದಲ್ಲಿ 7,713, ಇತರ ಕೇಂದ್ರಗಳಲ್ಲಿ 5,206, 7,857, 8,005, 13,681 ಹಾಗೂ ಕಾರ್ಕಳದಲ್ಲಿ 9,696 ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿವೆ. ಪತ್ತೆಯಾದ ಪ್ರಕರಣಗಳಲ್ಲಿ ಅತೀವೇಗದ ಚಾಲನೆ ಅತಿ ಹೆಚ್ಚು ಕಂಡುಬಂದಿದ್ದು, ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸಿರುವುದು ಎರಡನೇ ಸ್ಥಾನದಲ್ಲಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಗಂಟೆಗೆ 80 ಕಿ.ಮೀ. ಹಾಗೂ ರಾಜ್ಯ ಹೆದ್ದಾರಿಯಲ್ಲಿ ಗಂಟೆಗೆ 60 ಕಿ.ಮೀ. ವೇಗ ಮಿತಿಯನ್ನು ನಿಗದಿಪಡಿಸಲಾಗಿದೆ. ಈ ಮಿತಿಯನ್ನು ಮೀರಿ ವಾಹನ ಚಲಾಯಿಸುವವರ ವಿರುದ್ಧ ರ್ಯಾಡರ್ ಕ್ಯಾಮೆರಾಗಳ ಮೂಲಕ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ.
‘ಪ್ರತಿದಿನ ನೂರಾರು ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗುತ್ತಿದ್ದು, ಅವುಗಳನ್ನು ಪರಿಶೀಲಿಸಿ ದಿನಕ್ಕೆ ಸುಮಾರು 50ರಿಂದ 100 ಪ್ರಕರಣಗಳಿಗೆ ನೋಟೀಸ್ ಜಾರಿ ಮಾಡಲಾಗುತ್ತಿದೆ’ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ತಿಳಿಸಿದ್ದಾರೆ.
ವಿವಿಧ ಉಲ್ಲಂಘನೆಗಳಿಗೆ ದಂಡ ವಿವರ
- ಅತೀವೇಗದ ಚಾಲನೆ
- ದ್ವಿಚಕ್ರ ವಾಹನಗಳಿಗೆ ₹1,000
- ಲಘು ಮತ್ತು ಘನ ವಾಹನಗಳಿಗೆ ₹2,000
- ಹೆಲ್ಮೆಟ್ ಧರಿಸದಿದ್ದರೆ – ₹500
- ಟ್ರಿಪಲ್ ರೈಡಿಂಗ್ – ₹500
- ಸೀಟ್ ಬೆಲ್ಟ್ ಧರಿಸದಿದ್ದರೆ – ₹500
- ಮೊಬೈಲ್ ಬಳಕೆ
- ದ್ವಿಚಕ್ರ ವಾಹನಗಳಿಗೆ ₹1,000
- ಲಘು ವಾಹನಗಳಿಗೆ ₹3,000
- ಘನ ವಾಹನಗಳಿಗೆ ₹5,000
ಜಿಲ್ಲೆಯ ಯಾವುದೇ ಪೊಲೀಸ್ ಠಾಣೆಯಲ್ಲಿ ದಂಡ ಪಾವತಿಸಲು ಅವಕಾಶವಿದ್ದು, ಹೊರರಾಜ್ಯದ ವಾಹನಗಳ ಮೇಲೂ ದಂಡ ವಿಧಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.





