ಹೆಚ್ಚುತ್ತಿರುವ ವಿಮಾನ ಇಂಧನ (Jet Fuel) ದರ ಹಾಗೂ ಹೆಚ್ಚಾದ ನಿರ್ವಹಣಾ ವೆಚ್ಚದಿಂದ ನಷ್ಟ ಎದುರಿಸುತ್ತಿರುವ ಏರ್ ಇಂಡಿಯಾ ಸಂಸ್ಥೆ, ತನ್ನ ದೇಶೀಯ ವಿಮಾನ ಹಾರಾಟದಲ್ಲಿ ಶೇ.22 ರಷ್ಟು ತಾತ್ಕಾಲಿಕ ಕಡಿತಗೊಳಿಸಿರುವುದಾಗಿ ಘೋಷಿಸಿದೆ.
ಟಾಟಾ ಸಮೂಹದ ಒಡೆತನದ ಏರ್ ಇಂಡಿಯಾ, ವಾಯುಪ್ರದೇಶದ ನಿರ್ಬಂಧಗಳು ಮತ್ತು ದುಬಾರಿ ಇಂಧನ ದರದ ಕಾರಣ ನೀಡಿ ಕೇವಲ ಎರಡು ವಾರಗಳ ಹಿಂದೆಯಷ್ಟೇ ತನ್ನ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟವನ್ನು ಶೇ.27ರಷ್ಟು ಕಡಿತಗೊಳಿಸಿತ್ತು. ಇದೀಗ ದೇಶೀಯ ಮಾರ್ಗಗಳಿಗೂ ಈ ಕಡಿತದ ಬಿಸಿ ತಟ್ಟಿದೆ.
ಪ್ರಸ್ತುತ ವಾರಕ್ಕೆ ಏರ್ ಇಂಡಿಯಾದ ಸುಮಾರು 4,400 ವಿಮಾನಗಳು ಕಾರ್ಯಾಚರಣೆ ನಡೆಸುತ್ತವೆ. ಈ ಪೈಕಿ 3,600 ದೇಶೀಯ ಮತ್ತು 800 ಅಂತಾರಾಷ್ಟ್ರೀಯ ವಿಮಾನ ಸೇವೆಗಳಾಗಿವೆ. ಸದ್ಯ ಶೇ.22ರಷ್ಟು ಕಡಿತ ಮಾಡಿರುವುದರಿಂದ ವಾರಕ್ಕೆ ಬರೋಬ್ಬರಿ 790ಕ್ಕೂ ಹೆಚ್ಚು ದೇಶೀಯ ವಿಮಾನಗಳ ಹಾರಾಟ ಸ್ಥಗಿತಗೊಳ್ಳಲಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ವರದಿಯಾಗಿದ್ದ ಶಂಕಿತ ಎಬೋಲಾ ಪ್ರಕರಣ ʼನೆಗೆಟಿವ್ʼ!
“ಜೂನ್ ಮತ್ತು ಆಗಸ್ಟ್ 2026ರ ನಡುವಿನ ಅವಧಿಗೆ ಅಂತಾರಾಷ್ಟ್ರೀಯ ವಿಮಾನ ಸೇವೆಗಳಲ್ಲಿ ತಂದಿದ್ದ ಬದಲಾವಣೆಯ ಮುಂದುವರಿದ ಭಾಗವಾಗಿ, ಇದೀಗ ಆಯ್ದ ದೇಶೀಯ ಮಾರ್ಗಗಳಲ್ಲೂ ವಿಮಾನಗಳ ಹಾರಾಟದ ಆವರ್ತನವನ್ನು ತಾತ್ಕಾಲಿಕವಾಗಿ ತರ್ಕಬದ್ಧಗೊಳಿಸಲಾಗಿದೆ” ಎಂದು ಏರ್ ಇಂಡಿಯಾ ಬುಧವಾರ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದೆ.




