ಕಬ್ಬಿನ ಬೆಲೆ ನಿಗದಿ ವಿಚಾರವಾಗಿ ರೈತರು ಮತ್ತು ಸಕ್ಕರೆ ಕಾರ್ಖಾನೆಗಳ ನಡುವೆ ಉಂಟಾಗಿದ್ದ ಬಿಕ್ಕಟ್ಟು ಬಗೆಹರಿಸುವ ನಿಟ್ಟಿನಲ್ಲಿ ನಡೆದ ಸತತ ಎಂಟು ಗಂಟೆಗಳ ಸಭೆಯಲ್ಲಿ ಪ್ರಸಕ್ತ ಹಂಗಾಮಿಗೆ ಕಬ್ಬಿನ ಪ್ರತಿ ಟನ್‌ಗೆ ₹3,600 ದರ ನಿಗದಿಪಡಿಸುವ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗಿದೆ.
ಬಾಗಲಕೋಟೆ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆಗಳ ಮಾಲೀಕರ ಅಹವಾಲುಗಳನ್ನು ಆಲಿಸಿ, ದರದ ವಿಚಾರವಾಗಿ ಸುದೀರ್ಘ ಚರ್ಚೆ ನಡೆಸಲಾಯಿತು.
ಬೆಳಗಾವಿಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿರುವ ದರಕ್ಕೆ ಬದ್ಧರಾಗಿ ಕಾರ್ಖಾನೆಗಳನ್ನು ಆರಂಭಿಸಲು ರೈತರು ಹಾಗೂ ಕಾರ್ಖಾನೆ ಮಾಲೀಕರಿಗೆ ಸಚಿವರು ಮನವಿ ಮಾಡಿದರು.ಕಬ್ಬು ಖರೀದಿ ಮತ್ತು ಪಾವತಿಯನ್ನು ನಿಗದಿತ ದರದಂತೆ ಮಾಡುವುದಾಗಿ ಕಾರ್ಖಾನೆಗಳು ಜಿಲ್ಲಾಡಳಿತಕ್ಕೆ ಲಿಖಿತ ಭರವಸೆ ನೀಡಬೇಕು. ಬಳಿಕ ಯಾವುದೇ ವಿಳಂಬವಿಲ್ಲದೆ ಕಾರ್ಖಾನೆಗಳನ್ನು ಕಾರ್ಯಾರಂಭಗೊಳಿಸಬೇಕು ಎಂದು ಸೂಚಿಸಿದರು.
ಹೆಚ್ಚುವರಿ ಆದಾಯದಲ್ಲಿ ರೈತರಿಗೆ ಶೇ.75ರಷ್ಟು ಪಾಲುಪ್ರಸಕ್ತ ಹಂಗಾಮಿನ ಕಬ್ಬು ದರಕ್ಕಿಂತ ಹೊಸ ಹಂಗಾಮು ಆರಂಭವಾಗುವ ಮುನ್ನ ಹೆಚ್ಚಿನ ದರ ನಿಗದಿಯಾದರೆ, ಹೆಚ್ಚುವರಿ ಆದಾಯದ ಮೇಲೆ ಶೇ.75ರಷ್ಟು ಪಾಲನ್ನು ರೈತರಿಗೆ ಹಾಗೂ ಶೇ.25ರಷ್ಟು ಪಾಲನ್ನು ಸಕ್ಕರೆ ಕಾರ್ಖಾನೆಗಳಿಗೆ ಹಂಚಿಕೆ ಮಾಡಬೇಕು ಎಂದು ಸಚಿವರು ನಿರ್ದೇಶನ ನೀಡಿದರು.
ಬರಗಾಲ ಹಾಗೂ ನೀರಿನ ಕೊರತೆಯಿಂದ ಕಬ್ಬಿನ ಇಳುವರಿ ಮತ್ತು ಗುಣಮಟ್ಟ ಕುಸಿಯುವ ಸಾಧ್ಯತೆ ಇದೆ. ಇಂತಹ ಪರಿಸ್ಥಿತಿಯಲ್ಲಿ ರೈತರಿಗೆ ಮತ್ತಷ್ಟು ನಷ್ಟವಾಗದಂತೆ ನಿಗದಿತ ಸಮಯದಲ್ಲಿ ಕಬ್ಬು ನುರಿಸುವ ಕಾರ್ಯ ಆರಂಭಿಸುವುದು ಅತ್ಯಗತ್ಯ ಎಂದು ಅವರು ಪ್ರತಿಪಾದಿಸಿದರು.
ರೈತರ ಹಿತಾಸಕ್ತಿಗೆ ಆದ್ಯತೆ ಕಬ್ಬು ಹಂಗಾಮು ಆರಂಭಕ್ಕೂ ಮುನ್ನ ರೈತರು ಹಾಗೂ ಕಾರ್ಖಾನೆಗಳ ಸಮಸ್ಯೆಗಳನ್ನು ಪರಿಹರಿಸಲು ಹಲವು ಸಭೆಗಳನ್ನು ನಡೆಸಲಾಗಿದೆ. ರೈತರಿಗೆ ಪಾವತಿಸಬೇಕಾದ ಬಾಕಿ ಹಣ ಬಿಡುಗಡೆ ಮಾಡುವ ನಿಟ್ಟಿನಲ್ಲಿಯೂ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು.
ರಾಜ್ಯ ಸರ್ಕಾರ ರೈತರ ಹಿತಾಸಕ್ತಿಯನ್ನು ಕಾಪಾಡಲು ಬದ್ಧವಾಗಿದೆ. ರೈತರು ಮತ್ತು ಕಾರ್ಖಾನೆ ಮಾಲೀಕರ ನಡುವೆ ಸಮನ್ವಯ ಸಾಧಿಸಿ, ಹಂಗಾಮು ಸುಗಮವಾಗಿ ನಡೆಯುವಂತೆ ಎಲ್ಲರೂ ಸಹಕರಿಸಬೇಕು.ನಿಗದಿತ ದರಕ್ಕೆ ಎರಡೂ ಕಡೆಯವರು ಬದ್ಧರಾಗಿ, ಕಾರ್ಖಾನೆಗಳನ್ನು ಶೀಘ್ರ ಆರಂಭಿಸುವ ಮೂಲಕ ರೈತರ ಹಿತವನ್ನು ಕಾಪಾಡಬೇಕು ಎಂದು ವಿಜಯಾನಂದ ಕಾಶಪ್ಪನವರು ಹೇಳಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಸಂಗಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಜಾನನ ಬಾಲೆ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಗದೀಶ ಎಂ., ಉಪವಿಭಾಗಾಧಿಕಾರಿಗಳಾದ ಶ್ವೇತಾ ಬೀಡಿಕರ, ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಆಹಾರ ಇಲಾಖೆಯ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ರೈತ ಮುಖಂಡರು ಹಾಗೂ ಸಕ್ಕರೆ ಕಾರ್ಖಾನೆಗಳ ಮಾಲೀಕರು ಉಪಸ್ಥಿತರಿದ್ದರು.




