ಕಬ್ಬು ಬೆಳೆಗಾರರ ಬೇಡಿಕೆಗಳನ್ನು ಸೌಹಾರ್ದಯುತವಾಗಿ ಮತ್ತು ಸಮಾಧಾನಕರವಾಗಿ ಬಗೆಹರಿಸದೆ ಹೋರಾಟಗಾರರನ್ನು ಬಂಧಿಸಿರುವ ಸರ್ಕಾರದ ಕ್ರಮವನ್ನು ಕರ್ನಾಟಕ ರಾಜ್ಯ ರೈತ ಸಂಘ ತೀವ್ರವಾಗಿ ಖಂಡಿಸಿದೆ.
ರಾಜ್ಯಾಧ್ಯಕ್ಷರಾದ ಬಡಗಲಪುರ ನಾಗೇಂದ್ರ ಮಾತನಾಡಿ, ಕಳೆದ ಒಂದೂವರೆ ತಿಂಗಳಿನಿಂದ ಕಬ್ಬು ಬೆಳೆಗಾರರು ಶಾಂತಿಯುತವಾಗಿ ಹೋರಾಟ ನಡೆಸುತ್ತಿದ್ದಾರೆ. ರೈತರು ಮತ್ತು ಸಕ್ಕರೆ ಕಾರ್ಖಾನೆಗಳ ನಡುವೆ ನಡೆದ ಮಾತುಕತೆಯ ಅಂತಿಮ ಹಂತದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಮುಂದಿಟ್ಟ ಪ್ರಸ್ತಾಪವನ್ನು ಹೋರಾಟಗಾರರು ತಾತ್ಕಾಲಿಕವಾಗಿ ಒಪ್ಪಿಕೊಂಡು, ಕಾರ್ಖಾನೆಗಳ ಕಾರ್ಯನಿರ್ವಹಣೆಗೆ ಅವಕಾಶ ನೀಡಿದ್ದರು. ಮುಂದಿನ ಹೋರಾಟವನ್ನು ಶಾಂತಿಯುತವಾಗಿ ಮುಂದುವರಿಸಲು ನಿರ್ಧರಿಸಿದ್ದರು.
ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಬಹುದಾದ ಪರಿಸ್ಥಿತಿ ನಿರ್ಮಾಣವಾಗಿದ್ದ ಸಂದರ್ಭದಲ್ಲಿ ಸರ್ಕಾರ ಹೋರಾಟಗಾರರನ್ನು ಬಂಧಿಸಿರುವುದು ಸರಿಯಾದ ಕ್ರಮವಲ್ಲ. ಈ ಮೂಲಕ ಸರ್ಕಾರ ನೀಡಿರುವ ಸಂದೇಶ ರೈತರ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನದಂತಿದೆ ಎಂದು ಸಂಘದ ಮುಖಂಡರು ಟೀಕಿಸಿದ್ದಾರೆ.
ಸಂಘದ ಗೌರವಾಧ್ಯಕ್ಷ ಚಾಮರಸ ಮಾಲೀ ಪಾಟೀಲ್, ಪ್ರಧಾನ ಕಾರ್ಯದರ್ಶಿಗಳಾದ ಎನ್.ಡಿ. ವಸಂತಕುಮಾರ್ ಮತ್ತು ರವಿಕಿರಣ್ ಪೂಣಚ, ಉಪಾಧ್ಯಕ್ಷರಾದ ಶಿವಾನಂದ ಕುಗ್ವೆ , ಎ.ಎಲ್. ಕೆಂಪುಗೌಡ, ಮಲ್ಲಿಕಾರ್ಜುನ ಸತ್ಯಂಪೇಟೆ, ಮುತ್ತಪ್ಪ ಕೋಮಾರಿ ಹಾಗೂ ಕಾರ್ಯದರ್ಶಿ ಗೋಪಾಲ ಪಾಪೇಗೌಡ ಅವರು ಸರ್ಕಾರದ ಕ್ರಮವನ್ನು ಖಂಡಿಸಿದ್ದಾರೆ.
ಬಂಧಿತರನ್ನು ಕೂಡಲೇ ಬಿಡುಗಡೆಗೊಳಿಸಿ, ಸೌಹಾರ್ದಯುತ ವಾತಾವರಣದಲ್ಲಿ ಮಾತುಕತೆ ನಡೆಸುವ ಮೂಲಕ ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ರಾಜ್ಯದ ಎಲ್ಲ ಭಾಗಗಳ ಕಬ್ಬು ಬೆಳೆಗಾರರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಬ್ಬು ಬೆಳೆಗಾರರ ಸಮನ್ವಯ ಸಮಿತಿಯು ನ.6ರಂದು ಬೆಳಿಗ್ಗೆ 11 ಗಂಟೆಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ರಾಜ್ಯಮಟ್ಟದ ಚಳುವಳಿ ಆರಂಭಿಸಲಿದೆ.
ಈ ವಿಷೇಷ ವರದಿ ಓದಿದ್ದೀರಾ? ಅಕ್ಕಿ ಬೆಲೆ ಏರಿಕೆಯ ಬಿಸಿ: ಗ್ರಾಹಕರ ಕೈ ಸುಡುತ್ತಿದೆ, ಆಹಾರ ಭದ್ರತೆಗೆ ಎದುರಾಗಿದೆ ಸವಾಲು!
ಚಳುವಳಿಯಲ್ಲಿ ವಿವಿಧ ರೈತ ಸಂಘಟನೆಗಳ ಮುಖಂಡರು ಹಾಗೂ ಕಬ್ಬು ಬೆಳೆಗಾರರ ಹೋರಾಟಗಾರರು ಭಾಗವಹಿಸಲಿದ್ದಾರೆ. ರಾಜ್ಯದ ಎಲ್ಲ ಜಿಲ್ಲೆಗಳ ಕಬ್ಬು ಬೆಳೆಗಾರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಹೋರಾಟವನ್ನು ಯಶಸ್ವಿಗೊಳಿಸಬೇಕೆಂದು ಸಮನ್ವಯ ಸಮಿತಿ ಮನವಿ ಮಾಡಿದೆ.




