ಹಾವಂಜೆ ಗೋಳಿಕಟ್ಟೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ಅಲ್ ಫಲಾಹ್ ಜುಮ್ಮಾ ಮಸೀದಿಯ ಉದ್ಘಾಟನೆ, ಸಾರ್ವಜನಿಕ ಮಸೀದಿ ಸಂದರ್ಶನ ಹಾಗೂ ಸೌಹಾರ್ದ ಸಂಗಮ ಕಾರ್ಯಕ್ರಮವು ಧರ್ಮಸಾಮರಸ್ಯ ಮತ್ತು ಸಹಬಾಳ್ವೆಯ ಸಂದೇಶದೊಂದಿಗೆ ನಡೆಯಿತು.

ಶ್ರೀಕ್ಷೇತ್ರ ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀಈಶ ವಿಠಲದಾಸ ಸ್ವಾಮೀಜಿ ಮಾತನಾಡಿ, ಕೇವಲ ಮಸೀದಿ, ದೇವಸ್ಥಾನ ಅಥವಾ ಚರ್ಚ್‌ಗಳನ್ನು ನಿರ್ಮಿಸುವುದರ ಜೊತೆಗೆ ಸಮಾಜದ ಕಟ್ಟಕಡೆಯ ವ್ಯಕ್ತಿಯ ಕಣ್ಣೀರು ಒರೆಸುವ ಕಾರ್ಯ ಮಾಡಬೇಕು. ಅದು ದೇವರು ಮೆಚ್ಚುವ ಕಾರ್ಯ ಎಂದು ಹೇಳಿದರು. ಶಿಸ್ತು ಹಾಗೂ ಪ್ರಾಮಾಣಿಕ ದುಡಿಮೆಯ ಹಣದಿಂದ ಸಮಾಜಕ್ಕೆ ಸೇವೆ ಸಲ್ಲಿಸಬೇಕು. ಸರ್ವಧರ್ಮಗಳ ಮುಖಂಡ ರನ್ನು ಒಂದೇ ವೇದಿಕೆಗೆ ಕರೆಸಿ ಸೌಹಾರ್ದ ಮೆರೆದ ಗೋಳಿಕಟ್ಟೆಯ ಯುವಕರ ಕಾರ್ಯ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ಮಾದರಿಯಾಗಿದೆ. ಇದು ನಿಜವಾದ ಭಾರತ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಉಡುಪಿಯ ಮದರ್ ಆಫ್ ಸಾರೋಸ್ ಚರ್ಚ್‌ನ ವಿ.ರೆ. ಫಾದರ್ ಡೆನಿಸ್ ಅಲೆಕ್ಸಾಂಡರ್ ಡೇಸಾ ಮಾತನಾಡಿ, ಧರ್ಮದ ಹೆಸರಿನಲ್ಲಿ ನಿರ್ಮಾಣವಾಗುತ್ತಿರುವ ದ್ವೇಷದ ಗೋಡೆಗಳನ್ನು ಕೆಡವಿ ಪ್ರೀತಿ ಮತ್ತು ವಿಶ್ವಾಸದ ಸೇತುವೆಗಳನ್ನು ನಿರ್ಮಿಸಬೇಕಿದೆ. ಮನುಷ್ಯ ಹುಟ್ಟುವಾಗ ಯಾವುದೇ ಜಾತಿ ಅಥವಾ ಧರ್ಮದ ಗುರುತಿನೊಂದಿಗೆ ಹುಟ್ಟುವುದಿಲ್ಲ. ಆದ್ದರಿಂದ ಜಾತಿಗಿಂತ ನೀತಿಗೆ ಆದ್ಯತೆ ನೀಡಿ ಬದುಕುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ಶಿವಮೊಗ್ಗದ ಸಾದಾ ಇಸ್ಲಾಮಿಕ್ ಕಾಲೇಜಿನ ಡಾ. ಅಬ್ದುಲ್ ರಶೀದ್ ಝೈನಿ ಕಾಮಿಲ್ ಸಖಾಫಿ ಮಾತನಾಡಿ, ಪೊಲೀಸ್ ಠಾಣೆ ಅಥವಾ ನ್ಯಾಯಾಲಯಗಳ ಮೂಲಕ ಮಾತ್ರ ಸಮಾಜದಲ್ಲಿ ಸೌಹಾರ್ದತೆ ಮೂಡಿಸಲು ಸಾಧ್ಯವಿಲ್ಲ. ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಮಾನವೀಯ ಮೌಲ್ಯಗಳೇ ಶಾಶ್ವತ ಸೌಹಾರ್ದತೆಯ ಬುನಾದಿಯಾಗಿವೆ ಎಂದರು.

ಸೈಯದ್ ಜಾಫರ್ ಅಸ್ಸಖಾಫ್ ತಂಙಳ್ ಕೋಟೇಶ್ವರ ಅವರ ದುಆದೊಂದಿಗೆ ಸೌಹಾರ್ದ ಸಂಗಮ ಉದ್ಘಾಟನೆಗೊಂಡಿತು. ಗೋಳಿಕಟ್ಟೆ ಅಲ್ ಫಲಾಹ್ ಜುಮ್ಮಾ ಮಸೀದಿಯ ಅಧ್ಯಕ್ಷ ಜಿ.ಎ. ರೆಹಮಾನ್ ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಮಕ್ಕಳಿಗೆ ಶಾಲಾ ಹಂತದಿಂದಲೇ ಸೌಹಾರ್ದತೆ ಮತ್ತು ಸಹಬಾಳ್ವೆಯ ಮೌಲ್ಯಗಳನ್ನು ಕಲಿಸಬೇಕು. ದ್ವೇಷದ ಬದಲು ಪ್ರೀತಿ, ಸಹನೆ ಹಾಗೂ ಪರಸ್ಪರ ಗೌರವಕ್ಕೆ ಪ್ರೋತ್ಸಾಹ ನೀಡುವ ವಾತಾವರಣ ನಿರ್ಮಾಣವಾಗಬೇಕು ಎಂದು ಅಭಿಪ್ರಾಯಪಟ್ಟರು.

ಮಂಗಳೂರಿನ ಮುಸ್ಲಿಂ ಮುಖಂಡ ಹೈದರ್ ಪರ್ತಿಪಾಡಿ ಮಾತನಾಡಿ, ಧರ್ಮಗಳ ಹೆಸರಿನಲ್ಲಿ ಮನುಷ್ಯರ ನಡುವೆ ಅಂತರ ಸೃಷ್ಟಿಯಾಗಬಾರದು. ಪ್ರತಿಯೊಬ್ಬರೂ ನೆಮ್ಮದಿ ಮತ್ತು ಗೌರವದಿಂದ ಬದುಕುವ ವಾತಾವರಣ ನಿರ್ಮಾಣವಾಗುವುದು ಇಂದಿನ ಅಗತ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕುಕ್ಕಿಕಟ್ಟೆ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಮೊಕ್ತೇಸರ ಅಶೋಕ್ ಕುಮಾರ್ ಶೆಟ್ಟಿ, ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಮಹಮ್ಮದ್ ಮೌಲ, ಗೋಳಿಕಟ್ಟೆ ಶ್ರೀ ವೀರ ಕಲ್ಕಡ ದೈವಸ್ಥಾನದ ಅಧ್ಯಕ್ಷ ನಾಗರಾಜ ಹೆಗ್ಡೆ, ದೈವ ನರ್ತಕ ಶ್ಯಾಮರಾಯ ಪಾಣ, ಅಬೂಬಕರ್ ಆತ್ರಾಡಿ, ಎನ್.ಎನ್.ಓ. ಅಧ್ಯಕ್ಷ ಯಾಹ್ಯ ನಕ್ವಾ, ಆತ್ರಾಡಿ ಎಂ.ಜೆ.ಎಂ. ಖತೀಬರಾದ ಇಸ್ಮಾಯಿಲ್ ಸಖಾಫಿ, ಕುಂಜಾಲ್ ಹಿದಾಯತುಲ್ ಇಸ್ಲಾಂ ಮದರಸಿನ ಹೈದರಾಲಿ ಮರ್ಝಖಿ ಅಲ್ ರಯ್ಜಿ, ಸಾಯಿರಾಧ ಗ್ರೂಪ್‌ನ ಮನೋಹರ ಶೆಟ್ಟಿ, ಕೀರ್ತಿ ಬಿಲ್ಡರ್ಸ್ ಮಾಲಕ ಸುಧೀರ್ ಕುಮಾರ್ ಶೆಟ್ಟಿ, ಆದರ್ಶ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಜಿ.ಎಸ್. ಚಂದ್ರಶೇಖರ್, ಸಂತೋಷನಗರ ಬದ್ರಿಯಾ ಜಾಮಿಯ ಮಸೀದಿಯ ಹನೀಫ್ ಹಾಜಿ, ಮೈಸೂರಿನ ಉದ್ಯಮಿ ಇಸ್ಮಾಯಿಲ್ ಭಟ್ಕಳ್, ಎಸ್‌ಎಂಎ ಉಡುಪಿ ರೀಜನ್ ಅಧ್ಯಕ್ಷ ಹಬೀಬ್ ಅಲಿ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿದ್ದರು.
ಅಧ್ಯಕ್ಷತೆಯನ್ನು ಗೋಳಿಕಟ್ಟೆ ಅಲ್ ಫಲಾಹ್ ಜುಮ್ಮಾ ಮಸೀದಿ ಅಧ್ಯಕ್ಷ ಜಿ.ಎ. ರೆಹಮಾನ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ, ಮಂಗಳೂರಿನ ಮುಸ್ಲಿಂ ಮುಖಂಡ ಹೈದರ್ ಪರ್ತಿಪಾಡಿ ಮಾತನಾಡಿದರು. ಈ ಸಂದರ್ಬದಲ್ಲಿ ಅಕ್ಷರ ಸಂತ ಹರೇಕಳ ಹಾಜಬ್ಬ, ಸಮಾಜ ಸೇವಕರಾದ ರವಿ ಕಟಪಾಡಿ, ಫ್ರ್ಯಾಂಕಿ ಡಿಸೋಜ ಮತ್ತು ಮಸೀದಿ ನಿರ್ಮಾಣಕ್ಕೆ ಶ್ರಮಿಸಿದ ಹಬೀಬ್ ಗೋಳಿಕಟ್ಟೆ, ಮೊಹಮ್ಮದ್ ಅಲಿ ಗೋಳಿಕಟ್ಟೆ, ಹಾಗೂ ಪ್ರೋತ್ಸಾಹಿಸಿದವರನ್ನು ಸನ್ಮಾನಿಸಲಾಯಿತು.
ಮಸೀದಿ ಕಟ್ಟಡದ ಇಂಜಿನಿಯರ್ ಉದಯಕುಮಾರ್, ಇಂಜಿನಿಯರ್ ಅಬ್ದುಲ್ ಮಲಿಕ್, ಇಲೆಕ್ಟ್ರಿಷಿಯನ್ ಗುತ್ತಿಗೆದಾರ ಸಂತೋಷ ಶೆಟ್ಟಿ, ಇಲೆಕ್ಟ್ರಿಷಿಯನ್ ಕಲೆಸಗಾರ ಸುಕುಮಾರ್ ಪೂಜಾರಿ ಅವರನ್ನು ಗೌರವಿಸಲಾಯಿತು.
ಹನೀಫ್ ಗೋಳಿಕಟ್ಟೆ ಸ್ವಾಗತಿಸಿದರು. ಗೋಳಿಕಟ್ಟೆ ಅಲ್ ಫಲಾಹ್ ಮಸೀದಿಯ ಖತೀಬರು ಪ್ರಾರ್ಥಿಸಿದರು. ಅಬ್ದುಲ್ ರಜಾಕ್ ವಂದಿಸಿದರು. ನೌಫಲ್ ವಿಟ್ಲ ಕಾರ್ಯಕ್ರಮ ನಿರೂಪಿಸಿದರು. ಅಲ್ ಫಲಾಹ್ ಯಂಗ್ ಮೆನ್ಸ್ ತಂಡದ ಸದಸ್ಯರು ಸಹಕರಿಸಿದರು.

ಸರ್ವಧರ್ಮೀಯರ ಭೇಟಿ; ಮಸೀದಿಯ ಪರಿಚಯ
ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿದ್ದ ಸಾರ್ವಜನಿಕ ಮಸೀದಿ ಸಂದರ್ಶನಕ್ಕೆ ಬೆಳಗ್ಗಿನಿಂದ ರಾತ್ರಿಯವರೆಗೆ ಅವಕಾಶ ಕಲ್ಪಿಸಲಾಗಿತ್ತು. ಜಮಾಅತೆ ಇಸ್ಲಾಮಿ ಹಿಂದ್‌ನ ಉಡುಪಿ ಘಟಕದ ಸದಸ್ಯರು ಹಾಗೂ ಮಹಿಳಾ ಸದಸ್ಯರು ಸಾರ್ವಜನಿಕರಿಗೆ ಮಸೀದಿಯ ವಿನ್ಯಾಸ, ಧಾರ್ಮಿಕ ಆಚರಣೆಗಳು ಮತ್ತು ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.
ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತ ಸಮುದಾಯಗಳ ಅಪಾರ ಸಂಖ್ಯೆಯ ಜನರು ಮಸೀದಿಗೆ ಭೇಟಿ ನೀಡಿ ಅದರ ವಾಸ್ತುಶಿಲ್ಪ ಹಾಗೂ ಧಾರ್ಮಿಕ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಆಗಮಿಸಿದ ಎಲ್ಲರನ್ನೂ ಮುಸ್ಲಿಂ ಬಾಂಧವರು ಆತ್ಮೀಯವಾಗಿ ಬರಮಾಡಿಕೊಂಡರು.
ಧರ್ಮಗಳ ನಡುವಿನ ಪರಸ್ಪರ ಗೌರವ, ವಿಶ್ವಾಸ ಮತ್ತು ಸಹಬಾಳ್ವೆಯನ್ನು ಸಾರಿದ ಈ ಸಾರ್ವಜನಿಕ ಮಸೀದಿ ಸಂದರ್ಶನ ಹಾಗೂ ಸೌಹಾರ್ದ ಸಂಗಮವು ಗೋಳಿಕಟ್ಟೆಯಲ್ಲಿ ಧರ್ಮಸಾಮರಸ್ಯದ ಸುಂದರ ವಾತಾವರಣಕ್ಕೆ ಸಾಕ್ಷಿಯಾಯಿತು.







