ಇಂದಿನ ದಿನಗಳಲ್ಲಿ ಬಡತನ ರೇಖೆಯಲ್ಲಿರುವ ಅಥವಾ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಬಡತನ ಎಂದಿಗೂ ಅಡ್ಡಿಯಾಗುವುದಿಲ್ಲ. ಸರ್ಕಾರದ ಯೋಜನೆಗಳು, ದಾನಿಗಳ ನೆರವು ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಾಯದಿಂದ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸವನ್ನು ಯಶಸ್ವಿಯಾಗಿ ಮುಂದುವರಿಸಬಹುದಾಗಿದೆ ಎಂದು ಉಡುಪಿ ಹೆಮ್ಮಕ್ಕಳ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿಶ್ರಾಂತ ಉಪನ್ಯಾಸಕ ದಯಾನಂದ ಡಿ. ಕಿದಿಯೂರು ಹೇಳಿದರು.
ಉದ್ಯಾವರ ಫ್ರೆಂಡ್ಸ್ ಸರ್ಕಲ್ ಆಶ್ರಯದಲ್ಲಿ ಉದ್ಯಾವರ ಹಿಂದೂ ಶಾಲಾ ಸಭಾಂಗಣದಲ್ಲಿ ಆಯೋಜಿಸಿದ್ದ ಪಿಯುಸಿ ವಿದ್ಯಾರ್ಥಿಗಳಿಗೆ ಯು.ಎಫ್.ಸಿ. ಪುಸ್ತಕ ಭಂಡಾರದಿಂದ ಪಠ್ಯಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ 22ಕ್ಕೂ ಹೆಚ್ಚು ವರ್ಷಗಳಿಂದ ಸಂಸ್ಥೆ ನಡೆಸುತ್ತಿರುವ ಈ ಸೇವೆ ಶಿಕ್ಷಣದ ಮೇಲಿನ ಬದ್ಧತೆಯನ್ನು ತೋರಿಸುತ್ತದೆ ಎಂದು ಶ್ಲಾಘಿಸಿದರು.
ವಿದ್ಯಾರ್ಥಿಗಳು ಶಿಕ್ಷಣ ಪೂರ್ಣಗೊಳಿಸಿ ಉದ್ಯೋಗಕ್ಕೆ ಸೇರಿದ ನಂತರ ಮತ್ತೊಬ್ಬ ಬಡ ವಿದ್ಯಾರ್ಥಿಗೆ ನೆರವಾಗುವ ಮೂಲಕ ಸಮಾಜಕ್ಕೆ ತಮ್ಮ ಋಣ ತೀರಿಸಬೇಕು ಎಂದು ಕರೆ ನೀಡಿದ ಅವರು, ಮೊಬೈಲ್ ಬಳಕೆಯಿಂದ ದೂರವಿದ್ದು ಓದಿನತ್ತ ಹೆಚ್ಚಿನ ಗಮನ ಹರಿಸುವಂತೆ ಸಲಹೆ ನೀಡಿದರು. ಕೇವಲ ಅಂಕಗಳ ಹಿಂದೆ ಓಡದೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಗೌರವಾಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ಮಾತನಾಡಿ, ವಾಟ್ಸ್ಆ್ಯಪ್ನಲ್ಲಿ ಹರಿದಾಡುವ ಮಾಹಿತಿಯನ್ನು ಪರಿಶೀಲಿಸದೆ ಸತ್ಯವೆಂದು ನಂಬುವ ಪ್ರವೃತ್ತಿಯನ್ನು ವಿದ್ಯಾರ್ಥಿಗಳು ತೊರೆಯಬೇಕು. ನಿಜವಾದ ಜ್ಞಾನವನ್ನು ಶಿಕ್ಷಣ ಸಂಸ್ಥೆಗಳು ನೀಡುತ್ತವೆ ಎಂಬ ಅರಿವು ಇರಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಸಂಸ್ಥೆಯ ನಿರ್ದೇಶಕರಾದ ಚಂದ್ರಾವತಿ ಭಂಡಾರಿ, ಶರತ್ ಕುಮಾರ್, ಯು. ಪದ್ಮನಾಭ ಕಾಮತ್ ಹಾಗೂ ಕೋಶಾಧಿಕಾರಿ ಸತೀಶ್ ಡಿ. ಸಾಲ್ಯಾನ್ ಉಪಸ್ಥಿತರಿದ್ದರು.
ಸಂಸ್ಥೆಯ ಅಧ್ಯಕ್ಷ ಗಿರೀಶ್ ಗುಡ್ಡೆಯಂಗಡಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸುಹೇಲ್ ರಹಮತ್ತುಲ್ಲ ವಂದಿಸಿದರು. ಕಾರ್ಯಕ್ರಮದಲ್ಲಿ ಸುಮಾರು 100 ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳನ್ನು ವಿತರಿಸಲಾಯಿತು.





