ತುಳುಕೂಟ ಉಡುಪಿ ಮತ್ತು ವಿಶ್ವಪ್ರಭ ಪ್ರತಿಷ್ಠಾನದ ಜಂಟಿ ಸಹಯೋಗದಲ್ಲಿ ಮಧುಶ್ರೀ ಪ್ರಕಾಶನ ಕಿದಿಯೂರು ವತಿಯಿಂದ ಆಯೋಜಿಸಲಾದ ಮಧುಶ್ರೀ ಪ್ರಕಾಶನದ 40ನೇ ವರ್ಷದ ಸಂಭ್ರಮಕ್ಕೆ ಭಾನುವಾರ ಉಡುಪಿ ಕಿದಿಯೂರು ಹೋಟೆಲ್ನ ಅನಂತಶಯನ ಸಭಾಂಗಣದಲ್ಲಿ ಚಾಲನೆ ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿ. ಜಯಕರ ಶೆಟ್ಟಿ ಇಂದ್ರಾಳಿ ವಹಿಸಿದ್ದು, ಹಿರಿಯ ಉದ್ಯಮಿ ಯು. ವಿಶ್ವನಾಥ ಶೆಣೈ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಎಸ್.ಎನ್.ಡಿ. ಪೂಜಾರಿ ಅವರ ‘ತುಳುವ ದೈವ ಸಂಪ್ರದಾಯ’ ಅಧ್ಯಯನ ಗ್ರಂಥವನ್ನು ಡಾ. ಭಾಸ್ಕರಾನಂದ ಕುಮಾರ್ ಬಿಡುಗಡೆಗೊಳಿಸಿದರು. ಡಾ. ಗಣನಾಥ ಎಕ್ಕಾರ್ ಕೃತಿ ಪರಿಚಯ ಮಾಡಿದರು.

ಇದೇ ವೇಳೆ ಗಂಗಾಧರ ಕಿದಿಯೂರು ಅವರ ‘ಪಿಂಗಾರದ ಬಾಲೆ ಸಿರಿ’ ತುಳು ನಾಟಕದ ಇಂಗ್ಲಿಷ್ ಆವೃತ್ತಿಯನ್ನು ಡಾ. ಗಣೇಶ್ ಅಮಿನ್ ಸಂಕಮಾರ್ ಬಿಡುಗಡೆಗೊಳಿಸಿದ್ದು, ಡಾ. ಪಾರ್ವತಿ ಜಿ. ಐತಾಳ್ ಪುಸ್ತಕದ ಪರಿಚಯ ನೀಡಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲ ಪ್ರೊ. ಎಂ.ಎಲ್. ಸಾಮಗ ಹಾಗೂ ನಿವೃತ್ತ ಶಿಕ್ಷಕರಾದ ಸರಳಾ ಶೆಟ್ಟಿ, ಧನಲಕ್ಷ್ಮೀ ಮತ್ತು ಮುತ್ತಕ್ಕ ಅವರನ್ನು ಗುರುವಂದನೆಯ ಮೂಲಕ ಸನ್ಮಾನಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು.
ಅಲ್ಲದೆ ವಿವಿಧ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆಗಳಿಗೆ ಗೌರವಾರ್ಪಣೆ ಸಲ್ಲಿಸಲಾಯಿತು. ಮಧುಶ್ರೀ ಪ್ರಕಾಶನದ ಮುಖ್ಯಸ್ಥ ಗಂಗಾಧರ ಕಿದಿಯೂರು ಸ್ವಾಗತಿಸಿದರು. ಪ್ರಭಾಕರ ತುಮುರಿ ಕಾರ್ಯಕ್ರಮ ನಿರೂಪಿಸಿದರು.





