ಉತ್ತರ ಕನ್ನಡ: ಮಾದಕ ವಸ್ತುಗಳ ಮಾರಾಟ, ಸಾಗಾಣಿಕೆ ಮತ್ತು ಸಂಗ್ರಹಣೆ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿದ್ದ ದಾಂಡೇಲಿಯ ಕುಖ್ಯಾತ ಡ್ರಗ್ ಪೆಡ್ಲರ್ ಒಬ್ಬನನ್ನು PIT NDPS (The Prevention of Illicit Traffic in Narcotic Drugs and Psychotropic Substances Act – 1988) ಕಾಯ್ದೆಯ ಅಡಿಯಲ್ಲಿ ಬಂಧಿಸಿ ಬಳ್ಳಾರಿಯ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ.
ದಾಂಡೇಲಿಯ ಸುಭಾಷನಗರದ ನಿವಾಸಿ ಅಯಾನ್ @ ಶಾನವಾಜ್ (23) ಎಂಬಾತನೇ ಈ ಕಠಿಣ ಕಾನೂನು ಕ್ರಮಕ್ಕೆ ಒಳಗಾದ ಆರೋಪಿ. ಈತನ ಮೇಲೆ ದಾಂಡೇಲಿ ನಗರ ಪೊಲೀಸ್ ಠಾಣೆಯಲ್ಲಿ 5 ಪ್ರಕರಣಗಳು ಹಾಗೂ ಹುಬ್ಬಳ್ಳಿಯ ಗೋಕುಲ್ ರೋಡ್ ಪೊಲೀಸ್ ಠಾಣೆಯಲ್ಲಿ 1 ಪ್ರಕರಣ ಸೇರಿದಂತೆ ಒಟ್ಟು 6 ಎನ್‌ಡಿಪಿಎಸ್ ಪ್ರಕರಣಗಳು ದಾಖಲಾಗಿದ್ದವು.
ಏನಿದು PIT NDPS ಕಾಯ್ದೆ? ಮಾದಕ ವಸ್ತುಗಳ ವ್ಯವಹಾರದಲ್ಲಿ ತೊಡಗಿರುವ ವ್ಯಕ್ತಿಗಳು ಸಮಾಜಕ್ಕೆ ಅತ್ಯಂತ ಅಪಾಯಕಾರಿ ಎಂದು ಕಂಡುಬಂದಾಗ, ಅವರು ಮುಂದೆ ಇಂತಹ ಅಪರಾಧ ಎಸಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಈ ಕಾಯ್ದೆಯಡಿ ಬಂಧಿಸಿ ಜೈಲಿಗೆ ಕಳುಹಿಸಲಾಗುತ್ತದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ಕಾಯ್ದೆಯನ್ನು ಬಳಸಿ ಡ್ರಗ್ ಪೆಡ್ಲರ್ ಒಬ್ಬನನ್ನು ಬಂಧಿಸಿರುವುದು ಇದೇ ಮೊದಲ ಪ್ರಕರಣವಾಗಿದೆ.
ಈ ಸುದ್ದಿ ಓದಿದ್ದೀರಾ ? ಉತ್ತರ ಕನ್ನಡ | ಖನಿಜ ಸಂಪತ್ತಿನ ಪತ್ತೆಗೆ ವೈಮಾನಿಕ ಸಮೀಕ್ಷೆ: ಕಡಿಮೆ ಎತ್ತರದಲ್ಲಿ ವಿಮಾನ ಹಾರಾಟ, ಆತಂಕ ಬೇಡ
ಆರೋಪಿ ಅಯಾನ್ ಪದೇ ಪದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಾ ಯುವ ಜನತೆಯ ಆರೋಗ್ಯ ಮತ್ತು ಭವಿಷ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದ್ದನು. ಈತನ ಚಟುವಟಿಕೆಗಳನ್ನು ನಿಯಂತ್ರಿಸಲು ದಾಂಡೇಲಿ ಪೊಲೀಸರು ನೀಡಿದ ವರದಿಯನ್ನು ಆಧರಿಸಿ, ಪೊಲೀಸ್ ಅಧೀಕ್ಷಕರು ಪಶ್ಚಿಮ ವಲಯದ ಪೊಲೀಸ್ ಮಹಾನಿರೀಕ್ಷಕರಿಗೆ (IGP) ಪ್ರಸ್ತಾವನೆ ಸಲ್ಲಿಸಿದ್ದರು.
ಇದನ್ನು ಪುರಸ್ಕರಿಸಿದ ಐಜಿಪಿ ಅವರು ಆರೋಪಿಯನ್ನು ಬಂಧನದಲ್ಲಿಡಲು ಆದೇಶ ಹೊರಡಿಸಿದ್ದಾರೆ. ಜಿಲ್ಲೆಯನ್ನು ಮಾದಕ ಮುಕ್ತಗೊಳಿಸಲು ಪೊಲೀಸ್ ಇಲಾಖೆ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಸಾರ್ವಜನಿಕರು ತಮ್ಮ ಸುತ್ತಮುತ್ತ ನಡೆಯುವ ಯಾವುದೇ ಅನುಮಾನಾಸ್ಪದ ಡ್ರಗ್ ವ್ಯವಹಾರಗಳ ಬಗ್ಗೆ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಜಿಲ್ಲಾ ಪೊಲೀಸ್ ಇಲಾಖೆ ಕೋರಿದೆ.




