ಟ್ರಸ್ಟ್‌ನಲ್ಲಿ ಸದಸ್ಯತ್ವ ಪಡೆದರೆ ಮೂರು ತಿಂಗಳಿಗೊಮ್ಮೆ ಉಚಿತ ಪಡಿತರ ನೀಡುವುದರ ಜೊತೆಗೆ ಟೈಲರಿಂಗ್, ಬ್ಯಾಗ್ ತಯಾರಿಕೆ ಸೇರಿದಂತೆ ಗೃಹ ಉದ್ಯೋಗ ಕಲ್ಪಿಸುವುದಾಗಿ ನಂಬಿಸಿ ನೂರಾರು ಮಹಿಳೆಯರಿಗೆ ವಂಚಿಸಿರುವ ಆರೋಪ ಬೆಳಕಿಗೆ ಬಂದಿದೆ.
ಬೆಂಗಳೂರು ಮೂಲದ ಸಫೀನಾ ಜೋಶಫ್ ಎಂಬುವರ ವಿರುದ್ಧ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಮನಸಾಪುರದ ಇಷ್ಟೋಲಿನ ಅಲ್ಮಿದಾ ಎಂಬುವರು ದೂರು ದಾಖಲಿಸಿದ್ದಾರೆ. ಒಟ್ಟು 662 ಮಹಿಳೆಯರಿಗೆ ವಂಚನೆ ಮಾಡಲಾಗಿದ್ದು, ₹7.94 ಕೋಟಿ ಹಣ ವಂಚಿಸಿರುವುದಾಗಿ ಆರೋಪಿಸಲಾಗಿದೆ.
ಈ ಸಂಬಂಧ ಖಾನಾಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ದೂರನ್ನು ತಲಕಾವಾಡಿ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ.ಖಾನಾಪುರ ಸಿಡಿಪಿಒ ಕಚೇರಿಯಲ್ಲಿ ಸ್ತ್ರೀಶಕ್ತಿ ಸಂಘಗಳ ಒಕ್ಕೂಟದ ಅಧ್ಯಕ್ಷೆಯಾಗಿದ್ದ ಇಷ್ಟೋಲೀನಾ ಅವರಿಗೆ ಸಫೀನಾ ಪರಿಚಯವಾಗಿದ್ದಳು. ತನ್ನ ಟ್ರಸ್ಟ್‌ನಲ್ಲಿ ₹1,200 ಪಾವತಿಸಿ ಸದಸ್ಯತ್ವ ಪಡೆದ ಮಹಿಳೆಯರಿಗೆ ಟೈಲರಿಂಗ್, ಬ್ಯಾಗ್ ತಯಾರಿಕೆ ಸೇರಿದಂತೆ ವಿವಿಧ ಗೃಹ ಉದ್ಯೋಗಗಳನ್ನು ನೀಡುವುದಾಗಿ ಹಾಗೂ ಪ್ರತಿ ಮೂರು ತಿಂಗಳಿಗೊಮ್ಮೆ ಉಚಿತ ರೇಷನ್ ವಿತರಿಸುವುದಾಗಿ ಭರವಸೆ ನೀಡಿದ್ದಳು ಎನ್ನಲಾಗಿದೆ.
ಸಫೀನಾ ನೀಡಿದ ಭರವಸೆಯನ್ನು ನಂಬಿದ ಇಷ್ಟೋಲೀನಾ, ತಮ್ಮ ಪರಿಚಯದ ಮಹಿಳೆಯರನ್ನು ಟ್ರಸ್ಟ್‌ನ ಸದಸ್ಯರನ್ನಾಗಿ ಮಾಡಿಸಿದ್ದರು.ಈ ಮೂಲಕ ಮಹಿಳೆಯರಿಂದ ಹಣ ಸಂಗ್ರಹಿಸಲಾಗಿತ್ತು. ಆದರೆ, ಭರವಸೆ ನೀಡಿದಂತೆ ಉದ್ಯೋಗವನ್ನೂ ನೀಡದೆ, ಉಚಿತ ರೇಷನ್ ಕೂಡ ವಿತರಿಸದೆ ಸಫೀನಾ ತನ್ನ ಕಚೇರಿಯನ್ನು ಬಂದ್ ಮಾಡಿ ನಾಪತ್ತೆಯಾಗಿದ್ದಾಳೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಮಹಿಳೆಯರಿಗೆ ಸ್ವಾವಲಂಬಿ ಬದುಕಿನ ಆಸೆ ತೋರಿಸಿ ಹಣ ಸಂಗ್ರಹಿಸಿದ ಪ್ರಕರಣ ಇದೀಗ ಬೆಳಕಿಗೆ ಬಂದಿದ್ದು, ವಂಚನೆಗೊಳಗಾದ ಮಹಿಳೆಯರಿಗೆ ನ್ಯಾಯ ದೊರಕಿಸಿಕೊಡಲು ಪೊಲೀಸರು ಸಮಗ್ರ ತನಿಖೆ ನಡೆಸಬೇಕೆಂಬ ಒತ್ತಾಯ ಕೇಳಿಬಂದಿದೆ.




