ಚಿಕ್ಕಮಗಳೂರು ನಗರದಲ್ಲಿ ಅಂಬೇಡ್ಕರ್ ಜಯಂತಿಗೆ ಅಡ್ಡಿಪಡಿಸಿರುವವರನ್ನು ಬಂಧಿಸುವಂತೆ ಒತ್ತಾಯಿಸಿ, ದಸಂಸ ಒಕ್ಕೂಟದ ಮುಖಂಡರು ಆಜಾದ್‌ಪಾರ್ಕ್ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಬಿ.ಆರ್. ಅಂಬೇಡ್ಕರ್ ಜಯಂತಿಗೆ ಹೊಸಕೋಟೆ ಗ್ರಾಮದಲ್ಲಿ ಅಡ್ಡಿಪಡಿಸುವ ಮೂಲಕ ನೀಲಿ ಬಾವುಟವನ್ನು ಕಿತ್ತೆಸೆದು, ಅವಮಾನ ಮಾಡಿರುವ ಗ್ರಾಮದ ವ್ಯಕ್ತಿಗಳನ್ನು ಬಂಧಿಸದಿರುವುದು ಖಂಡನೀಯ. ಪ್ರಕರಣಕ್ಕೆ ಸಂಬಂಧಿಸಿದ ಗ್ರಾಮದ 23 ಮಂದಿ ವಿರುದ್ಧ ದಲಿತ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದರೂ ಪೊಲೀಸ್ ಇಲಾಖೆ ಕ್ರಮ ವಹಿಸುತ್ತಿಲ್ಲ. ಅಂಬೇಡ್ಕರ್ ಜಯಂತಿ ಆಚರಿಸುವ ವೇಳೆ ಈ ರೀತಿಯ ದುರ್ಘಟನೆ ನಡೆಸಿರುವವರನ್ನು ಬಂಧಿಸದೇ ಪೊಲೀಸರು ನಿರ್ಲಕ್ಷ್ಯ ಮಾಡುತ್ತಿರುವುದು ಸರಿಯಲ್ಲ. ಪೊಲೀಸರು ದಲಿತರಿಗೆ ನ್ಯಾಯ ಒದಗಿಸುವ ಬದಲು ಒತ್ತಡಕ್ಕೆ ಒಳಗಾಗಿ ಅನ್ಯಾಯ ಮಾಡುತ್ತಿದ್ದಾರೆ. ಆ ನಿಟ್ಟಿನಲ್ಲಿ ಸತ್ಯಾಸತ್ಯತೆ ತಿಳಿದು ಪೊಲೀಸ್ ಇಲಾಖೆ ಕೆಲಸ ನಿರ್ವಹಿಸಬೇಕು ಎಂದು ದಸಂಸ ಮುಖಂಡ ದಂಟರಮಕ್ಕಿ ಶ್ರೀನಿವಾಸ್ ತಿಳಿಸಿದರು.
ದೇಶ-ವಿದೇಶಗಳಲ್ಲಿ ಅಂಬೇಡ್ಕರ್ ಬಗ್ಗೆ ಅಪಾರವಾದ ಗೌರವವಿದೆ. ಅಂಬೇಡ್ಕರ್ ಜಯಂತಿಯನ್ನು ರಾಷ್ಟ್ರದಾದ್ಯಂತ ಆಚರಿಸುವುದು ಮೂಲಭೂತ ಹಕ್ಕು. ಆದರೆ, ಕೆಲವರು ಜಯಂತಿಗೆ ಅಡ್ಡಿಪಡಿಸಿ ದಲಿತರಿಗೆ ದ್ರೋಹವೆಸಗುತ್ತಿದ್ದಾರೆ ಎಂದು ದೂರಿದರು. ದೇಶದ ಮೂಲನಿವಾಸಿ ದಲಿತರಿಗೆ ನ್ಯಾಯ ಒದಗಿಸುವಲ್ಲಿ ಜಿಲ್ಲಾಡಳಿತ ವಿಫಲವಾಗುತ್ತಿದೆ. ದಲಿತ ಸಮುದಾಯಕ್ಕೆ ನ್ಯಾಯ ನೀಡದ ಜಿಲ್ಲಾಡಳಿತ, ಮುಂದಿನ ದಿನಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಕುಂದುಕೊರತೆ ಸಭೆಗೆ ದಸಂಸ ಮುಖಂಡರನ್ನು ಆಹ್ವಾನಿಸಬಾರದು ಎಂದು ದಸಂಸ ವಸಂತ್‌ಕುಮಾರ್ ತಿಳಿಸಿದರು.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಹುಲಿ ಗಣನೆ ಕ್ಯಾಮೆರಾ ಕಳ್ಳತನ; ಪ್ರಕರಣ ದಾಖಲು
ಅಂಬೇಡ್ಕರ್‌ಗೆ ಅವಮಾನ ಮಾಡಿದವರನ್ನು ಸದ್ಯದಲ್ಲೇ ಬಂಧಿಸದಿದ್ದಲ್ಲಿ ಒಕ್ಕೂಟವು ಸ್ಥಳೀಯ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುತ್ತೆವೆಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಮರ್ಲೆ ಅಣ್ಣಯ್ಯ, ಗೌಸ್ ಮೊಹಿಯುದ್ದೀನ್, ಕೃಷ್ಣಮೂರ್ತಿ, ಬಿಳೇಕಲ್ಲು ಬಾಲಕೃಷ್ಣ, ಮಂಜಯ್ಯ, ಕುಮಾರ್, ಶೇಖರ್ ಹಾಗೂ ಹೊಸಕೋಟೆ ಗ್ರಾಮಸ್ಥರು ಇನ್ನಿತರರಿದ್ದರು.




